ರಸ್ತೆಯಲ್ಲೇ ಸ್ನಾನ, ಧ್ಯಾನ ಎಲ್ಲಾ ಮಾಡುತ್ತಿರುವ ವ್ಯಕ್ತಿ ; ಅಧಿಕಾರಿಗಳ ಕಣ್ತೆರೆಸುವ ವಿಭಿನ್ನ ಪ್ರತಿಭಟನೆಯ ವೀಡಿಯೋ ವೈರಲ್
ವ್ಯಕ್ತಿಯೊಬ್ಬರ ದೈನಂದಿನ ಕ್ರಿಯೆಯೆಲ್ಲಾ ರಸ್ತೆಯಲ್ಲಿ ಮಾಡುವಂತಹ ವೀಡಿಯೋ ವೈರಲ್ ಆಗಿದೆ. ಆದ್ರೆ, ಇದು ನೀವು ಅಂದುಕೊಂಡ ರೀತಿ ಆತ ಮನೆಯಿಲ್ಲದೇ ಇರೋ ಅಲೆಮಾರಿ ಅಂತೂ ಅಲ್ಲ, ಹುಚ್ಚನೂ ಅಲ್ಲ. ಆತನೊಬ್ಬ ಜನರಿಗಾಗಿ ಪ್ರತಿಭಟಿಸೋ ಮಹಾನುಭಾವ. ಅಷ್ಟಕ್ಕೂ ಆತನ ಈ ಕೆಲಸಕ್ಕೆ ಕಾರಣ ಏನೂ ಎಂಬುದು ಮುಂದೆ ಓದಿ..
ಈ ಘಟನೆ ಕೇರಳದ ಮಲಪ್ಪುರಂ ಪ್ರದೇಶದಲ್ಲಿ ನಡೆದಿದ್ದು, ಈ ವ್ಯಕ್ತಿ ರಸ್ತೆಯ ಗುಂಡಿಗಳ ವಿರುದ್ಧ ಅತ್ಯಂತ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಾತಿನಿಂದ ಕ್ರಮ ಕೈಗೊಳ್ಳದ ಅಧಿಕಾರಿಗಳಿಗೆ ಈ ರೀತಿಯಾಗಿ ಅರಿವು ಮೂಡಿಸಲು ಹೊರಟಿದ್ದಾರೆ.
ವೀಡಿಯೋದಲ್ಲಿ ಇರುವಂತೆ, ಆ ವ್ಯಕ್ತಿಯು ಮಳೆ ನೀರಿನಿಂದ ತುಂಬಿದ ಗುಂಡಿಯಲ್ಲಿ ಸ್ನಾನ ಮಾಡುತ್ತಿರುವುದನ್ನು ಕಾಣಬಹುದು. ಅವನು ತನ್ನ ಬಟ್ಟೆಗಳನ್ನು ಕೆಸರಿನ ನೀರಿನಲ್ಲಿ ಒಗೆಯುವುದನ್ನು ಸಹ ನೋಡಬಹುದು. ಅಷ್ಟೇ ಅಲ್ಲದೆ, ನೀರು ತುಂಬಿದ ಗುಂಡಿಯಲ್ಲಿ ಯೋಗ ಮಾಡುತ್ತಾನೆ.
ಈ ವೇಳೆ ಸ್ಥಳೀಯ ಶಾಸಕ ಯು.ಎ.ಲತೀಫ್ ಅವರ ಕಾರು ಸ್ಥಳಕ್ಕೆ ತಲುಪಿದೆ. ಆಗ ಗುಂಡಿಯಲ್ಲಿ ಧ್ಯಾನ ಮಾಡಲು ಪ್ರಾರಂಭಿಸಿದನು. ಅಲ್ಲದೆ, ಆ ವ್ಯಕ್ತಿ ನಂತರ ಶಾಸಕರ ಮುಂದೆ ಮತ್ತೊಂದು ನಿಂತಿರುವ ಯೋಗ ಭಂಗಿಯನ್ನು ಮಾಡಲು ಎದ್ದು ನಿಲ್ಲುತ್ತಾನೆ.
ಈ ವ್ಯಕ್ತಿ ಹಂಝ ಪೊರಾಲಿ ಎಂಬುವವರಾಗಿದ್ದು, ರಸ್ತೆ ಗುಂಡಿ ವಿರುದ್ಧ ಕ್ರಮಕೈಗೊಳ್ಳಲು ಈ ಮೂಲಕ ಅವರು ಅಧಿಕಾರಿಗಳ ಗಮನ ಸೆಳೆದಿದ್ದಾರೆ. ಒಟ್ಟಾರೆ, ಇವರ ರೋಡ್ ಧ್ಯಾನ, ಸ್ನಾನ ಎಲ್ಲೆಡೆ ಫುಲ್ ವೈರಲ್ ಆಗಿದೆ.