ಕರ್ನಾಟಕದಲ್ಲೂ ಜಾರಿ ಆಯ್ತು ಯೋಗಿ ಮಾಡೆಲ್ | ಗೋಮಾಂಸ ದಂಧೆ ನಡೆಸಿದವರ ಮನೆ, ಆಸ್ತಿ, ಕರೆಂಟ್, ವಾಟರ್ ಎಲ್ಲವೂ ಜಪ್ತಿ!
ಚಿಕ್ಕಮಗಳೂರು: ಗೋ ಹತ್ಯೆ, ಗೋ ಮಾಂಸ ಮಾರಾಟ, ಸಾಗಾಟ ನಿಷೇಧ ಜಾರಿಯಲ್ಲಿದ್ದರೂ ಇಂತಹ ಅಕ್ರಮ ಪ್ರಕರಣಗಳು ಅಂತ್ಯ ಕಾಣುತ್ತಿಲ್ಲ. ಅದೆಷ್ಟೇ ಕಠಿಣ ನಿಯಮ ಜಾರಿಗೊಳಿಸಿದರೂ ಮತ್ತೆ ಮತ್ತೆ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ.
ಹೀಗಾಗಿ, ಯೋಗಿ ಮಾಡೆಲ್ ರೀತಿಯಲ್ಲೇ ತಕ್ಕ ಶಿಕ್ಷೆ ನೀಡಲು ಕರ್ನಾಟಕವೂ ಮುಂದಾಗಿದೆ. ಹೌದು. ಗೋಮಾಂಸ ಮಾರಾಟ ಮಾಡುತ್ತಿದ್ದವರ ಪ್ರದೇಶದಲ್ಲಿ ಯೋಗಿ ಮಾಡೆಲ್ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಟ್ ಮಾಡಿ ಗೋ ಹಂತಕರಲ್ಲಿ ಭಯ ಹುಟ್ಟಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ನಗರಸಭೆ ಅಧಿಕಾರಿಗಳು ನಿರಂತರ ದಾಳಿ ನಡೆಸಿದರೂ, ಗೋಮಾಂಸ ಮಾರಾಟ ಮುಂದುವರೆದಿತ್ತು. ಹೀಗಾಗಿ, ಗೋಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ನಗರಸಭೆ ಅಧಿಕಾರಿಗಳು ಹೊಸ ಪ್ಲಾನ್ ಮಾಡಿದ್ದಾರೆ. ಗೋಮಾಂಸ ದಂಧೆ ನಡೆಸಿದರೆ ಅವರ ಮನೆ, ಆಸ್ತಿ, ಕರೆಂಟ್ ವಾಟರ್ ಎಲ್ಲವೂ ಜಪ್ತಿ ಮಾಡಿದ್ದಾರೆ.
ಅಲ್ಲಿನ ನಗರ ಸಭೆಯು ಈ ಬಗ್ಗೆ ವಿಶೇಷವಾಗಿ ಗಮನವಹಿಸಿದ್ದು, ಈ ಹಿಂದೆ ಮೂರಕ್ಕೂ ಹೆಚ್ಚು ಅಕ್ರಮ ಗೋಹತ್ಯೆ ಕೇಂದ್ರಗಳ ಮೇಲೆ ಬುಲ್ಲೋಜರ್ ಪ್ರಯೋಗ ಕೂಡ ಮಾಡಿದ್ದರು. ಜೊತೆಗೆ 20ಕ್ಕೂ ಹೆಚ್ಚು ಅಕ್ರಮ ಗೋಹತ್ಯೆ ಮನೆಗಳ ಮೇಲೆ ದಾಳಿ ಮಾಡಿ ಮನೆಯ ಗೋಡೆಗಳಿಗೆ ನೋಟೀಸ್ ಕೂಡ ಅಂಟಿಸಿದ್ದರು.
ಆದರೂ, ಗೋಹತ್ಯೆ ನಿಲ್ಲಿಸದ ಹಿನ್ನೆಲೆ ನಗರಸಭೆ ಅಧ್ಯಕ್ಷರು, ಅಧಿಕಾರಿಗಳು ಹಾಗೂ ಪೊಲೀಸರು ನಗರದ ತಮಿಳು ಕಾಲೋನಿಯಲ್ಲಿ ಯಶ್ ಪಾಲ್ ಎಂಬುವರ ಮನೆ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಅಕ್ರಮ ಗೋಮಾಂಸವನ್ನ ವಶಪಡಿಸಿಕೊಂಡಿದ್ದಾರೆ. ಆದರೆ, ಮನೆಯ ಮಾಲೀಕ ಯಶ್ ಪಾಲ್ ನಾಪತ್ತೆಯಾಗಿರುವ ಹಿನ್ನೆಲೆ ನಗರಸಭೆ ಅಧ್ಯಕ್ಷರ ಸೂಚನೆ ಮೇರೆಗೆ ಅವರ ಮನೆಯ ವಿದ್ಯುತ್ ಸಂಪರ್ಕವನ್ನ ಕಡಿತಗೊಳಿಸಿದ್ದಾರೆ.
ಮನೆಯ ನೀರಿನ ಸಂಪರ್ಕವನ್ನ ಕಡಿತಗೊಳಿಸಲು ನೀರಿನ ಸಂಪರ್ಕ ಇರಲಿಲ್ಲ. ಹಾಗಾಗಿ, ವಿದ್ಯುತ್ ಸಂಪರ್ಕವನ್ನಷ್ಟೆ ಕಡಿತಗೊಳಿಸಿದ್ದಾರೆ. ಇನ್ನು ನಾಪತ್ತೆಯಾಗಿರುವ ಯಶ್ ಪಾಲ್ ಶರಣಾಗದಿದ್ದರೆ, ಅವರ ಮನೆಯನ್ನೇ ನಗರಸಭೆ ಆಸ್ತಿ ಎಂದು ಮುಟ್ಟುಗೋಲು ಹಾಕಿಕೊಳ್ಳಲು ನಗರ ಸಭೆ ತಯಾರಿ ನಡೆಸಿದೆ.