ಬಿಜೆಪಿಯೊಂದಿಗಿನ ಮೈತ್ರಿಯನ್ನು ಕೊನೆಗೊಳಿಸಿದ ನಿತೀಶ್ ಕುಮಾರ್ | ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ
ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ಆಡಳಿತಾರೂಢ ಜೆಡಿ(ಯು) ಬಿಜೆಪಿ ಮೈತ್ರಿಕೂಟದಲ್ಲಿನ ಗೊಂದಲದ ನಡುವೆಯೇ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದು, ಬಿಜೆಪಿ ಜೆಡಿಯು ನಡುವಿನ ಮೈತ್ರಿ ಮುರಿದುಬಿದ್ದಿದೆ.
ರಾಜಭವನದಲ್ಲಿ ರಾಜ್ಯಪಾಲ ಫಾಗು ಚೌಹಾಣ್ ಅವರನ್ನು ನಿತೀಶ್ ಕುಮಾರ್ ಇಂದು ಸಂಜೆ 4 ಗಂಟೆಗೆ ಭೇಟಿಯಾಗಿ ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ಪಕ್ಷದ ಎಲ್ಲಾ ಸಂಸದರು ಮತ್ತು ಶಾಸಕರು ಎನ್‌ಡಿಎ ತೊರೆಯುವ ನಿರ್ಧಾರಕ್ಕೆ ಒಮ್ಮತ ವ್ಯಕ್ತಪಡಿಸಿದ್ದಾರೆ ಎಂದು ನಿತೀಶ್ ಕುಮಾರ್ ರಾಜೀನಾಮೆ ಸಲ್ಲಿಸಿದ ನಂತರ ಹೇಳಿದ್ದಾರೆ.
ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಂಡಿರುವ ಜೆಡಿಯು ಅಧ್ಯಕ್ಷ ಹಾಗೂ ಸಿಎಂ ನಿತೀಶ್ ಕುಮಾರ್, ತೇಜಸ್ವಿ ಯಾದವ್ ಅವರೊಂದಿಗೆ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. ರಾಜ್ಯಪಾಲರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿರುವ ನಿತೀಶ್ ಕುಮಾರ್ ಅವರ ನಿರ್ಧಾರದಿಂದಾಗಿ ಬಿಜೆಪಿ- ಜೆಡಿಯು ಮೈತ್ರಿ ಸರ್ಕಾರ ಪತನವಾಗಿದೆ. ಆರ್‌ಜೆಡಿ ನೇತೃತ್ವದ ಮಹಾಮೈತ್ರಿಕೂಟದ ಸಭೆಯು ರಾಬ್ರಿ ದೇವಿ ಅವರ ನಿವಾಸದಲ್ಲಿ ನಡೆದಿದ್ದು, ಎಲ್ಲಾ ಶಾಸಕರು ನಿತೀಶ್ ಕುಮಾರ್‌ಗೆ ಬೆಂಬಲ ಪತ್ರಕ್ಕೆ ಸಹಿ ಹಾಕಿದರು.
ನಿತೀಶ್ ಕುಮಾರ್ ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡರೆ ಅವರಿಗೆ ನಮ್ಮ ಬೆಂಬಲವಿದೆ ಎಂದು ಬಿಹಾರದ ಏಕೈಕ ದೊಡ್ಡ ಪಕ್ಷವಾಗಿರುವ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ತೇಜಸ್ವಿ ಯಾದವ್ ಹೇಳಿದ್ದರು. ಹೀಗಾಗಿ, ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಂಡಿರುವ ನಿತೀಶ್ ಕುಮಾರ್ ಆರ್‌ಜೆಡಿ ಜೊತೆ ಕೈಜೋಡಿಸಿ ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚಾಗಿದೆ.