ಲಂಬಾಣಿ ತಾಂಡ, ಕುರುಬರಹಟ್ಟಿಗಳಿಗೆ ಕಾಯಕಲ್ಪ ‌ನೀಡಲು ಮಂದಾದ ಸರಕಾರ| ಕಂದಾಯ ಗ್ರಾಮದ ಸ್ಥಾನಮಾನ -ಆರ್ ಅಶೋಕ್

ಹಲವು ಸೌಲಭ್ಯಗಳಿಂದ ವಂಚಿತರಾಗಿರುವ ಲಂಬಾಣಿ ತಾಂಡಾ ಹಾಗೂ ಕುರುಬರಹಟ್ಟಿಗಳಿಗೆ ಕಾಯಕಲ್ಪ ನೀಡಲು ಕರ್ನಾಟಕ ಸರ್ಕಾರ ಮುಂದೆ ಬಂದಿದೆ. ರಾಜ್ಯದಲ್ಲಿ ಒಟ್ಟು 3227 ಇಂಥ ಜನವಸತಿಗಳನ್ನು ಗುರುತಿಸಲಾಗಿದ್ದು, ಈ ಪೈಕಿ 1847 ಜನವಸತಿಗಳನ್ನು ಕಂದಾಯಗ್ರಾಮಗಳೆಂದು ಘೋಷಿಸಲು ಅಧಿಸೂಚನೆ ಹೊರಡಿಸಲಾಗುವುದು. ಸರ್ಕಾರವು ಗೆಜೆಟ್ ನೋಟಿಫಿಕೇಶನ್ ಮಾಡಿದ ನಂತರ ಈ ಜನವಸತಿಗಳಿಗೆ ಕಂದಾಯ ಗ್ರಾಮಗಳ ಸ್ಥಾನಮಾನ ಸಿಗಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸುದ್ದಿಗಾರರಲ್ಲಿ ಹೇಳಿದರು.

ಕಲಬುರ್ಗಿ ಮತ್ತು ಯಾದಗಿರಿಯಲ್ಲಿ ಹೆಚ್ಚಿನ ಸಂಖ್ಯೆಯ ಲಂಬಾಣಿ ಜನರಿದ್ದಾರೆ. ಇಷ್ಟು ದಿನ ಅವರನ್ನು ಅಲೆಮಾರಿಗಳ ರೀತಿ ನೋಡಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಈ ವಾತಾವರಣ ಬದಲಿಸುತ್ತೇವೆ ಎಂದು ಹೇಳಿದರು.ಯಾವುದೇ ಸರ್ಕಾರ ಅವರ ಬೇಡಿಕೆಗಳಿಗೆ ಗಮನ ಹರಿಸಿರಲಿಲ್ಲ. ಇದೀಗ ಅವರು ವಾಸಿಸುತ್ತಿರುವ ಸ್ಥಳವನ್ನು ಕಂದಾಯ ಗ್ರಾಮವಾಗಿ ಪರಿಗಣಿಸಲು ನಿರ್ಧರಿಸಿದ್ದೇವೆ.

ಒಮ್ಮೆ ಕಂದಾಯ ಗ್ರಾಮ ಎಂದು ಘೋಷಣೆಯಾದರೆ ಅಲ್ಲಿನ ನಿವಾಸಿಗಳಿಗೆ ಅಗತ್ಯ ದಾಖಲೆಗಳು ಲಭ್ಯವಾಗುತ್ತವೆ. ಅದನ್ನು ಸಲ್ಲಿಸಿ ಅವರು ಸಾಲಸೌಲಭ್ಯ ಸೇರಿದಂತೆ ಹಲವು ಅನುಕೂಲ ಪಡೆದುಕೊಳ್ಳಬಹುದು. ಕಲಬುರ್ಗಿ ಮತ್ತು ಯಾದಗಿರಿಯಲ್ಲಿ ಶೀಘ್ರ ಕಾರ್ಯಕ್ರಮಗಳನ್ನು ಮಾಡುತ್ತೇವೆ. ಈ ಎರಡು ಜಿಲ್ಲೆಗಳಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಲಂಬಾಣಿಗಳು ಇದ್ದಾರೆ. ಇವರಿಗೆ ಯಾವುದೇ ದಾಖಲೆ ಇರುವುದಿಲ್ಲ. ಸುಮ್ಮನೆ ವಾಸ ಮಾಡುತ್ತಿರುತ್ತಾರೆ ಎಂದು ಹೇಳಿದರು.

ಕಲಬುರ್ಗಿಯಲ್ಲಿ ಎರಡು ತಿಂಗಳ ಒಳಗೆ ಸುಮಾರು 20,000 ಜನರಿಗೆ ಹಕ್ಕುಪತ್ರ ಕೊಡಲು ಕ್ರಮ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದೇವೆ. ಖಾಸಗಿ ಜಮೀನುಗಳಲ್ಲಿ ವಾಸವಿರುವವರ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಅದಕ್ಕಾಗಿ ಪ್ರತ್ಯೇಕ ಅಧಿಸೂಚನೆ ಹೊರಡಿಸಿ ಪರಿಹಾರ ಕೊಟ್ಟು ಭೂಮಿ ಪಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.

Leave A Reply

Your email address will not be published.