ಮಗು ಹುಟ್ಟಿದ ಖುಷಿಗೆ ಏನೂ ಇಲ್ವಾ ಎಂದು ದೋಚುತ್ತಿದ್ದವರು ಕೆಲಸದಿಂದಲೇ ಔಟ್!

ಶಿವಮೊಗ್ಗ: ಸಂಬಳದ ಜೊತೆಗೆ ಇಂಬಳ ತೆಗೆದುಕೊಳ್ಳುವವರ ಇತ್ತೀಚೆಗಂತೂ ಹೆಚ್ಚೇ ಇದೆ. ಈ ಕೆಲಸ ಮಾಡಿ ಕೊಟ್ರೆ ಇಷ್ಟು ಎಂದು ಮೊದಲೇ ಫಿಕ್ಸ್ ಮಾಡ್ಕೊಂಡು ದುಡ್ಡು ದೋಚೋರೆ ಹೆಚ್ಚು. ಇದೀಗ ಆಸ್ಪತ್ರೆ ಸಿಬ್ಬಂದಿಗಳಿಬ್ಬರು ಇದೇ ಕೆಲಸಕ್ಕೆ ಕೈ ಹಾಕಿ ಕೆಲಸದಿಂದಲೇ ಕೈ ಬಿಡಬೇಕಾದ ಪರಿಸ್ಥಿತಿ ತಂದುಕೊಂಡಿದ್ದಾರೆ.

 

ಹೌದು. ಮಗು ಹುಟ್ಟಿದಾಗ ಮನೆಯವರು ಸಂಭ್ರಮದಲ್ಲಿರುತ್ತಾರೆ. ಈ ವೇಳೆ ನರ್ಸ್ ಗಳು ಮಗು ಹುಟ್ಟಿದ ಖುಷಿಗೆ ಏನು ಇಲ್ವಾ? ಎನ್ನುತ್ತಲೇ ಹಣ ಪೀಕಿಸುತ್ತಿದ್ದರು.ಇದೀಗ ಬಾಣಂತಿಯರ ಸಂಬಂಧಿಕರ ಬಳಿ ಕೈ ಚಾಚಿದ ತಪ್ಪಿಗೆ ಆಸ್ಪತ್ರೆ ಸಿಬ್ಬಂದಿಗಳಿಬ್ಬರು ಕೆಲಸವನ್ನೇ ಕಳೆದುಕೊಂಡಿದ್ದಾರೆ.

ಹೊರಗುತ್ತಿಗೆ ನರ್ಸ್​ಗಳಾದ ಚಂದ್ರಮ್ಮ ಮತ್ತು ಇಂದ್ರಮ್ಮ, ಮೆಗ್ಗಾನ್ ಆಸ್ಪತ್ರೆಯ ಹೆರಿಗೆ ವಾರ್ಡ್‌ನ ಶರಾವತಿ ವಿಭಾಗದಲ್ಲಿ ಗಂಡು ಮಗು ಜನಿಸಿದರೆ 2 ಸಾವಿರ ರೂ.ಮತ್ತು ಹೆಣ್ಣು ಮಗು ಜನಿಸಿದರೆ 1,500 ರೂಪಾಯಿಯನ್ನು ಮಗುವಿನ ಕುಟುಂಬಸ್ಥರು ಅಥವಾ ಸಂಬಂಧಿಕರ ಬಳಿ ‘ಮಗು ಜನಿಸಿದ ಖುಷಿಗೆ’ ಎಂದು ಹಣ ಪಡೆಯುತ್ತಿದ್ದರು.

ಭದ್ರಾವತಿ ತಾಲೂಕಿನ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಸಂಬಂಧಿಕರಿಂದ 1,500 ರೂ. ಕೇಳಿದ್ದರು. ಬಡವರೆಂದು ಹೇಳಿಕೊಂಡ ಬಾಣಂತಿ ಸಂಬಂಧಿಕರು, 600 ರೂ. ಕೊಡಲು ಹೋದರೂ ಮುಟ್ಟದೆ 1,500 ರೂ.ಗೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಬಾಣಂತಿ ಸಂಬಂಧಿಕರು ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕಕ್ಷ ಡಾ. ಎಸ್.ಶ್ರೀಧರ್ ಅವರಿಗೆ ದೂರು ನೀಡಿದ್ದರು.

ಬಳಿಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಡಾ. ಶ್ರೀಧರ್, ಹಣಕ್ಕೆ ಬೇಡಿಕೆ ಇಟ್ಟಿರುವುದನ್ನು ದೃಢಪಡಿಸಿಕೊಂಡು ಇಬ್ಬರನ್ನೂ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಇದೀಗ ಖುಷಿಗೆ ಏನೂ ಇಲ್ವಾ ಅನ್ನುತ್ತಿದ್ದವ್ರು ಮನೆಯಲ್ಲೇ ಕೂರೋ ರೀತಿಯಾಗಿದೆ.

Leave A Reply

Your email address will not be published.