ನಾಚಿಕೊಂಡು ವಧು, ಖುಷಿಯಿಂದ ವರ, ಸತ್ತ 30 ವರ್ಷಗಳ ನಂತರ ನಡೆಯಿತು ಅದ್ದೂರಿ ಕುಲೆ ಮದ್ಮೆ !

” ಇಂದು ಅವರಿಬ್ಬರಿಗೆ ಮದುವೆ. ಅವರು ಮೃತಪಟ್ಟು ಇಂದಿಗೆ ಸರಿ ಸುಮಾರು 30 ವರ್ಷಗಳ ನಂತರ ಇಂದು ಅವರಿಗೆ ಮದುವೆ. ಅಲ್ಲಿ ನಾನು ತಲುಪಿದಾಗ ಸ್ವಲ್ಪ ತಡವಾಗಿತ್ತು. ಮದುವೆಯ ಮುಂಚಿಗಿನ ಮೆರವಣಿಗೆಯನ್ನು ನಾನು ಮಿಸ್ ಮಾಡಿಕೊಂಡೆ. ಮದುವೆ ಮನೆಯಲ್ಲಿ ಸಂಭ್ರಮ ಇತ್ತು, ಮುತ್ತೈದೆಯರು ಸರಬರ ಸೀರೆಯಲ್ಲಿ ಓಡಾಡುತ್ತಿದ್ದರು.”

” ಅದು ಶೋಭಾ ಮತ್ತು ಚಂದಪ್ಪ ಎಂಬುವರ ಮದುವೆ. ಅಲ್ಲಿ ನಡೆಯುತ್ತಿದ್ದ ಮದುವೆ 30 ವರ್ಷಗಳ ಹಿಂದೆ ಮೃತಪಟ್ಟ ಇಬ್ಬರದು. ಹುಟ್ಟಿದ ಕೂಡಲೇ ಮೃತಪಟ್ಟಿದ್ದ ಈ ಇಬ್ಬರ ‘ ಕುಲೆ ಮದ್ಮೆ ‘ ಯನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಲಾಗಿದೆ.
ನಾನು ಇಂದು ಮದುವೆಗೆ ಹಾಜರಾಗುತ್ತಿದ್ದೇನೆ. ಇದು ಟ್ವೀಟ್ ಮಾಡಬಹುದಾದ ವಿಚಾರವೇ ಎಂದು ನೀವು ಕೇಳಬಹುದು. ಪರವಾಗಿಲ್ಲ, ವಿಷಯ ಏನೆಂದರೆ, 30 ವರ್ಷಗಳ ಹಿಂದೆಯೇ ವಧು-ವರ ಮೃತಪಟ್ಟಿದ್ದಾರೆ. ಇಂದು ನಡೆಯುತ್ತಿರುವುದು ಅವರ ಮದುವೆ. ಸಂಪ್ರದಾಯವೆಂದರೆ ಮೂಗು ಮುರಿಯುವವರಿಗೆ ಇದು ತಮಾಷೆಯ ಸಂಗತಿ ಎನಿಸಬಹುದು ” ಎಂದು ಅನ್ನಿ ಅರುಣ್ ಟ್ವಿಟ್ ಮಾಡಿದ್ದಾರೆ. ಆತ್ಮಗಳ ಮದುವೆ ವಿಡಿಯೊವನ್ನು ಯೂಟ್ಯೂಬರ್ ಅನ್ನಿ ಅರುಣ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಹುಟ್ಟಿದ ತಕ್ಷಣವೇ ಮೃತಪಟ್ಟಿದ್ದವರಿಗೆ, ಮನೆಯಲ್ಲಿ ಮತ್ತೊಂದು ಮಗು ಜನಿಸಿದ ಸಂದರ್ಭದಲ್ಲಿ ಸಂಪ್ರದಾಯಬದ್ಧವಾಗಿ ‘ಕುಲೆ ಮದ್ಮೆ’ ಅಂದರೆ, ಮದುವೆ ಪ್ರೇತ ಕಲ್ಯಾಣ ಮಾಡಿಸಲಾಗುತ್ತದೆ. ಮೃತಪಟ್ಟ ಗಂಡು ಹಾಗೂ ಹೆಣ್ಣಿನ ನಿಶ್ಚಿತಾರ್ಥ ಮೊದಲಿಗೆ ನಡೆಯುತ್ತದೆ. ಆರತಕ್ಷತೆ, ಹಾರ ಬದಲಾವಣೆ, ಸಪ್ತಪದಿ, ಹೆಣ್ಣು ಒಪ್ಪಿಸಿ ಕೊಡುವುದು ಮತ್ತು ಶುಭ ಸಮಾರಂಭದ ಕೊನೆಯಲ್ಲಿ ಭರ್ಜರಿ ಊಟ – ಎಲ್ಲವೂ ಮಾಮೂಲಿ ಮದುವೆಯಂತೆ ಇಲ್ಲೂ ಉಂಟು.

ಅಷ್ಟರಲ್ಲಿ ನಿಶ್ಚಿತಾರ್ಥಕ್ಕೆ ಹೊತ್ತಾಯಿತು. ಅತ್ತ ಗಂಡು ಹೆಮ್ಮೆಯಿಂದ ಎದೆ ಸೆಟೆದು ನಸುನಗುತ್ತಾ ನಿಂತಿದ್ದಾನೆ. ಮದುಮಗಳು ರೇಷ್ಮೆ ಸೀರೆಯಲ್ಲಿ ನಾಚುತ್ತಾ ಮಿಂಚುತ್ತಿದ್ದಾಳೆ. ನಿಶ್ಚಿತಾರ್ಥದ ಸಮಯದಲ್ಲಿ ಮದುಮಕ್ಕಳನ್ನು ಕೂರಿಸುತ್ತಾರೆ. ತಮಾಷೆಯ ವಿಷಯವೆಂದರೆ ನಿಶ್ಚಿತಾರ್ಥ ನಡೆದ ನಂತರ ಅಲ್ಲಿದ್ದವರು ವಧು ಮತ್ತು ವರನ ಹೆಸರೇನು ಎಂದು  ಕೇಳುತ್ತಾರೆ. ಅಲ್ಲಿಯವರೆಗೆ ಯಾರಿಗೂ ಅವರ ಹೆಸರು ಕೇಳಬೇಕೆಂದು ಯೋಚನೆ ಬಂದಿರಲಿಲ್ಲ. ಮುಹೂರ್ತಕ್ಕೆ ಇನ್ನು ಕೇವಲ 5 ನಿಮಿಷ. ಪುರೋಹಿತ ಸಮಯ ನೋಡಿಕೊಳ್ಳುತ್ತಿದ್ದಾರೆ. ಸಮಯ ಮೀರಿ ಮದುವೆ ಮಾಡಿದರೆ ಅಶುಭ. ಅಶುಭ ನೀಗಲಿಕ್ಕಾಗಿ ನಡೆಯುತ್ತಿರುವ ಶುಭ ಕಾರ್ಯದಲ್ಲಿ ಮತ್ತೆ ಅಶುಭ ಆದರೆ ಹೇಗೆ ?

ಅಂತೂ ಇಂತೂ ಮದುವೆ ಜೋರಾಗೇ ನಡೆದಿದೆ. ಹುಡುಗನ ಶರ್ಟ್ ತುದಿಗೆ ಹುಡುಗಿಯ ಪಲ್ಲುವಿನ ಕೊನೆಯನ್ನು ಮೆಲ್ಲನೆ ಜೋಡಿಸಲಾಗಿದೆ. ಆ ಖುಷಿಯ ಸಮಯದಲ್ಲಿ ಅಲ್ಲಿ ಮಕ್ಕಳು ಕಂಡುಬರಲಿಲ್ಲ. ಹರೆಯದ ಹುಡುಗ ಹುಡುಗಿಯರು ಅಲ್ಲಿ ಕಾಣೆಯಾಗಿದ್ದರು. ಆಮೇಲೆ ಗೊತ್ತಾಯಿತು ಪ್ರೇತಗಳ ಮದುವೆಗೆ ಮಕ್ಕಳಿಗೆ ಮತ್ತು ಅವಿವಾಹಿತರಿಗೆ ಪ್ರವೇಶವಿಲ್ಲ ಎಂದು.
ಮದುವೆಯು ಲೋಕಲ್ ಗೌಡರ ಪೌರಹಿತ್ಯದೊಂದಿಗೆ ನಡೆದುಹೋಯಿತು. ನಿಂತುಕೊಂಡೇ ಮದುವೆಯಾದ ಹುಡುಗ ಹುಡುಗಿಗೆ ಸುಸ್ತಾಗಿದೆ ಇದೀಗ ಅವರನ್ನು ಕುಳ್ಳಿರಿಸಿ ಹರಸುವ ಸಮಯ. ಈಗ ಹುಡುಗಿ ಕುಳಿತುಕೊಳ್ಳುವ ಸ್ಥಳದಲ್ಲಿ ಬದಲಾವಣೆ ಆಗಿದೆ ಆಕೆ ಹುಡುಗನ ಎಡಭಾಗಕ್ಕೆ ಕುಳಿತುಕೊಳ್ಳಬೇಕು ಇನ್ನು ಮುಂದೆ ಅವರ ಜೀವನದ ಉದ್ದಕ್ಕೂ ಆಕೆ ಹಾಗೇ ನಡೆದುಕೊಳ್ಳಬೇಕು. ಆಕೆ ಇನ್ನು ಆಕೆಯದು ಯಾವತ್ತೂ ಎಡ ಭಾಗದಲ್ಲಿ ಭಂಗಿ !

ಮೆರವಣಿಗೆ, ನಿಶ್ಚಿತಾರ್ಥ ಸಪ್ತಪದಿ ಮಾತ್ರ ಅಲ್ಲ, ಮದುವೆ ಫಿಕ್ಸ್ ಮಾಡಲು ಕೂಡಾ ಕುಟುಂಬ ಸಾಕಷ್ಟು ಶ್ರಮ ಪಡಬೇಕಿದೆ. ಹುಡುಗ ಹುಡುಗಿ ಸೆಟ್ ಮಾಡಲು ಕುಲೆ ಮದುವೆಗೆ ಕೂಡಾ ಬ್ರೋಕರ್ ಗಳು ಇದ್ದಾರೆ. ಬ್ರೋಕರ್ಗಳು ಕಷ್ಟಪಟ್ಟು ಅನುರೂಪನಾದ ಹುಡುಗಿಗೆ ಅನುರೂಪಾಳಾದ ಹುಡುಗಿಯನ್ನು ಹುಡುಕಿ ತರುತ್ತಾರೆ. ಪ್ರೇತದ ಮದುವೆಗೆ ಸಾಮಾನ್ಯವಾಗಿ ಸಂಬಂಧಿಕರಲ್ಲೇ ಗಂಡು ಹೆಣ್ಣು ಹುಡುಕುತ್ತಾರೆ. ಸುಲಭಕ್ಕೆ ಸಿಗದೆ ಇದ್ದಾಗ ದಲ್ಲಾಳಿಗಳೋ, ಜೋತಿಷಿ, ಮಂತ್ರವಾದಿಗಳಿಗೆ ತಿಳಿದಿರುವ ಪ್ರೇತದಲ್ಲೇ ತಮ್ಮ ಜಾತಿಯ ಪ್ರೇತವನ್ನು ಹುಡುಕಿ ಆ ಪ್ರೇತದ ಮನೆಯವರೊಂದಿಗೆ ಹೊಸ ಸಂಬಂಧವನ್ನು ಕುದುರಿಸುತ್ತಾರೆ.

ಸಂಬಂಧ ನಿಗದಿಯಾದ ಮೇಲೆ ಹುಡುಗನ ಮನೆಯವರು ಹುಡುಗಿ ಮನೆಗೆ ಬಂದು ಗೋತ್ರ, ನಕ್ಷತ್ರ ಹೊಂದಾಣಿಕೆ ಮಾಡುವ ಮೂಲಕ ಮದುವೆ ದಿನಾಂಕ ನಿಶ್ಚಯ ಮಾಡಿಕೊಂಡು ಹೋಗುತ್ತಾರೆ. ಜೀವಂತ ಮದುವೆಗಳಂತೆ ಇಲ್ಲಿಯೂ ಕುಲ, ಗೋತ್ರ ಜಾತಿ ಎಲ್ಲವನ್ನು ಪರಿಗಣಿಸಿ ಶಾಸ್ತ್ರ ಪ್ರಕಾರವಾಗಿ ಮದುವೆ ಮಾಡಿಸುತ್ತಾರೆ.

ಈ ವಿಶೇಷ ಖುಷಿಯ ಸಂಭ್ರಮದಲ್ಲಿ ಇಡ್ಲಿ, ಮಟನ್ ಗ್ರೇವಿ, ಮೀನಿನ ಪ್ರೈ, ಚಿಕನ್ ಸುಕ್ಕ, ಕಡ್ಲೆ ಬಲ್ಯಾರ್ ( ಒಣ ಮೀನ್) ಖಾದ್ಯಗಳನ್ನು ಒಳಗೊಂಡ ಭೋಜನ ವ್ಯವಸ್ಥೆ ರೆಡಿಯಾಗುತ್ತಿದೆ. ಒಳಗಿನಿಂದ ಘಮದ ಪರಿಮಳ ನುಸುಳಿ ಬರುತ್ತಿದೆ.

ಪ್ರೇತಗಳ ಮದುವೆ ಯಾಕೆ ಎಂದರೆ, ಆ ಜೋಡಿ ಮರಣಾನಂತರದ ಜೀವನದಲ್ಲಿ ಸಂತೋಷದಿಂದ ಬದುಕುತ್ತಾರೆ ಎಂಬುದು ‘ಪ್ರೇತ ಕಲ್ಯಾಣ’ದ ನಂಬಿಕೆಯಾಗಿದೆ. ಚಿಕ್ಕ ವಯಸ್ಸಿನಲ್ಲೇ ಮೃತಪಟ್ಟರೆ ಅವರ ಆತ್ಮ ಪ್ರೇತವಾಗಿ ಅಲೆಯುತ್ತಿರುತ್ತದೆ. ಜೀವನದ ಸಕಲ ಸುಖಗಳನ್ನು ಅನುಭವಿಸದೆ ಸತ್ತ ಕಾರಣದಿಂದ. ಅಲ್ಲದೇ ಆ ಪ್ರೇತ ಮದುವೆ ವಯಸ್ಸಿಗೆ ಬಂದಾಗ, ಮನೋ ಸಹಜ ಅಸೂಯೆಯಿಂದ ಮನೆಯವರಿಗೆ ತೊಂದರೆ ಕೊಡಲು ಆರಂಭಿಸುತ್ತದೆ. ಅದರಲ್ಲೂ ಆ ಪ್ರೇತಾತ್ಮದ ಅಣ್ಣನೋ, ತಂಗಿಯೋ ಮದುವೆಯಾಗುವ ಸಂದರ್ಭದಲ್ಲಿ ಈ ಪ್ರೇತದ ಕಿರುಕುಳ ಅಧಿಕವಾಗುತ್ತದೆ. ಆಗ ಮನೆಯವರು ವಾಡಿಕೆಯಲ್ಲಿರುವಂತೆ ಜೋತಿಷಿ ಅಥವಾ ಮಂತ್ರವಾದಿಗಳ ಬಳಿಗೆ ಹೋಗುತ್ತಾರೆ. ಮದುವೆ ಸೆಟ್ ಆಗತ್ತೆ. ಆ ಮೂಲಕ ಅವರ ಮನೆಯಲ್ಲಿ ಸತ್ತ ಆತ್ಮವೊಂದು ಶಾಂತಿ ಸಿಗದೆ ಅಲೆದಾಡುತ್ತಿದ್ದದ್ದು ದಾಂಪತ್ಯ ಜೀವನಕ್ಕೆ ಇಳಿದು ತನ್ನ ಪಾಡಿಗೆ ತಾನು ಬದುಕಲು ಶುರು ಮಾಡುತ್ತದೆ.

ಹೀಗೆ ಮದುವೆ ಮಾಡುವುದರಿಂದ ಪ್ರೇತಾತ್ಮಗಳು ತಮ್ಮದೇ ಸುಖ ಸಂಸಾರ ಕಟ್ಟಿಕೊಂಡು ಜೀವನ ನಡೆಸುತ್ತವೆ, ಬದುಕಿರುವ ತಮ್ಮ ಸಂಬಂಧಿಕರಿಗೆ ಯಾವುದೇ ತೊಂದರೆ ನೀಡುವುದಿಲ್ಲ ಎನ್ನುವುದು ಜನರ ನಂಬಿಕೆ.
ಅಷ್ಟೇ ಅಲ್ಲದೇ ಪ್ರೇತಗಳಿಗೆ ಮದುವೆ ಮಾಡಿಸಿದ ಎರಡು ಕುಟುಂಬಗಳು ಮುಂದೆ ಸಂಬಂಧವನ್ನು ಹಾಗೇ ಉಳಿಸಿಕೊಂಡು ಬರುತ್ತಾರೆ. ಇನ್ನು ಮುಂದೆ ಆ ಕುಟುಂಬಗಳು ಇಬ್ಬರು ಹತ್ತಿರದ ನೆಂಟರುಗಳು. ಆ ಎರಡು ಕುಟುಂಬಗಳಲ್ಲಿ ನಡೆಯುವ ಪ್ರತಿ ಸಮಾರಂಭಕ್ಕೆ ಹೋಗಿ ಬರುವುದು ಸಾಮಾನ್ಯ ಆಗುತ್ತದೆ. ತಮ್ಮ ಮನೆಯ ಎಲ್ಲಾ ಆಗು ಹೋಗುಗಳಲ್ಲೂ ಆ ಪ್ರೇತ ಕುಟುಂಬವನ್ನು ಕರೆಯುವುದು ಕೂಡ ವಾಡಿಕೆ. ಹೀಗೆ ಪ್ರೇತಗಳ ಮದುವೆ ಮಾಡುವ ಮೂಲಕ ಆತ್ಮಗಳಿಗೆ ಅಂತರ ಪಿಶಾಚಿಯಾಗದಂತೆ ಮಾಡುವುದು ತುಳುನಾಡಿನ ನಂಬಿಕೆಯಲ್ಲೊಂದು.

ಭೂತಾರಾಧನೆ, ದೈವಾರಾಧನೆ, ಪ್ರೇತ ಭೂತಗಳ ನಂಬಿಕೆಯಿಂದಲೇ ಮನೆ ಮಾತಾಗಿರುವ ಕರಾವಳಿ ಭಾಗದ ಇನ್ನೊಂದು ವಿಶೇಷ ವಿಭಿನ್ನ ಆಚರಣೆ ಕುಲೆ ಮದ್ಮೆ. ಎಂದರೆ ‘ಪ್ರೇತಗಳ ಮದುವೆ’. ಪ್ರತಿ ವರ್ಷದ ಆಷಾಢ ಮಾಸದಲ್ಲಿ ಇಲ್ಲಿ ಪ್ರೇತಗಳಿಗೆ ಮದುವೆ ಮಾಡುತ್ತಾರೆ. ಮದುವೆಯಾಗದೇ ಸತ್ತವರು ಅತೃಪ್ತ ಆತ್ಮಗಳಾಗಿ ತಿರುಗುತ್ತಿರುತ್ತಾರೆ ಎಂಬುದು ಆ ಭಾಗದ ನಂಬಿಕೆ. ಸತ್ತವರ ಬಗ್ಗೆ ಕೂಡಾ ಕಾಳಜಿ ತೋರುವ ತುಳು ಸಂಸ್ಕೃತಿಯ ವಿಭಿನ್ನತೆಗೆ ಇದೊಂದು ಹೊಸ ಸಾಕ್ಷಿ.

Leave A Reply

Your email address will not be published.