ಕೆಪಿಟಿಸಿಎಲ್ ಪರೀಕ್ಷೆ ಬರೆಯಲು ಬಂದವರ ಉದ್ದ ತೋಳಿನ ಶರ್ಟ್ ಅನ್ನೇ ಕತ್ತರಿಸಿದ ಸಿಬ್ಬಂದಿಗಳು!
ಕೊಪ್ಪಳ: ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಗಾಗಿ ಜಾರಿಗೊಳಿಸಿದ್ದ ನಿಯಮಗಳನ್ನು ಮೀರಿ ಬಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿಬ್ಬಂದಿಗಳು ಶಾಕ್ ನೀಡಿರುವಂತಹ ಘಟನೆ ನಡೆದಿದೆ.
ರಾಜ್ಯಾಧ್ಯಂತ ಇಂದು ಕೆಪಿಟಿಸಿಎಲ್ ನ ಕಿರಿಯ ಸಹಾಯಕರ ನೇಮಕಾತಿಗೆ ಪರೀಕ್ಷೆ ನಿಗದಿ ಪಡಿಸಲಾಗಿತ್ತು. ಅದರಂತೆ ಪರೀಕ್ಷೆ ಕೂಡ ಪರೀಕ್ಷಾ ಕೇಂದ್ರಗಳಲ್ಲಿ ಆರಂಭಿಸಲಾಗಿತ್ತು. ಈ ಪರೀಕ್ಷೆಗೆ ಕೆಲವು ಪರೀಕ್ಷಾರ್ಥಿಗಳು ಉದ್ದ ತೋಳಿನ ಶರ್ಟ್ ಧರಿಸಿ ಬಂದಿದ್ದರು.
ಆದರೆ, ಇದು ಪರೀಕ್ಷಾ ನಿಯಮಕ್ಕೆ ವಿರುದ್ಧವಾದ್ದರಿಂದ, ಉದ್ದ ತೋಳಿನ ಶರ್ಟ್ ತೆಗೆದು, ಬದಲಿ ಶರ್ಟ್ ಧರಿಸಿ ಬರುವಂತೆ ಸೂಚಿಸಿದ್ದಾರೆ. ಕೆಲವರು ದೂರದ ಊರಿನಿಂದ ಬರುವಾಗ ಶರ್ಟ್ ಇಲ್ಲದ ಕಾರಣ ಅಂಗಡಿಗಳಲ್ಲಿ ಖರೀದಿಸಿ ಧರಿಸಿದರು.
ಇನ್ನೂ ಕೆಲವು ಅಭ್ಯರ್ಥಿಗಳು ವಿಧಿಯಿಲ್ಲದೇ ಉದ್ದ ತೋಳಿನ ಶರ್ಟ್ ಅನ್ನೇ ಕತ್ತರಿಸಿ, ಪರೀಕ್ಷೆಗೆ ಹಾಜರಾಗಿದ್ದಾರೆ. ಶರ್ಟ್ ಕೈ ಕಟ್ ಮಾಡಿದ ಬಳಿಕವಷ್ಟೇ ಸಿಬ್ಬಂದಿಗಳು ಪರೀಕ್ಷಾರ್ಥಿಗಳಿಗೆ ಪರೀಕ್ಷೆಗೆ ಎಂಟ್ರಿ ನೀಡಲಾಗಿದೆ.