ಏಳನೇ ವಯಸ್ಸಿನಲ್ಲಿ ನಾಪತ್ತೆಯಾಗಿದ್ದಾಕೆ ಒಂಬತ್ತು ವರ್ಷದ ಬಳಿಕ ಪತ್ತೆ!!

ಮುಂಬೈ: ಶಾಲೆಯ ಸಮೀಪ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದ ಹುಡುಗಿಯೊಬ್ಬಳು ಬರೋಬ್ಬರಿ 9 ವರ್ಷಗಳ ಬಳಿಕ ಮನೆ ಸೇರಿದ ಅಪರೂಪದ ಘಟನೆ ಗುರುವಾರ ಮುಂಬೈನಲ್ಲಿ ನಡೆದಿದೆ.

ಹೌದು. ತನ್ನ ಏಳನೇ ವಯಸ್ಸಿನಲ್ಲಿ ಅಪ್ಪ-ಅಮ್ಮನಿಂದ ದೂರವಾದಕೆ ಹದಿನಾರನೇ ವಯಸ್ಸಿನಲ್ಲಿ ಮತ್ತೆ ಮನೆಗೆ ಸೇರಿದ್ದಾಳೆ. ಅಷ್ಟಕ್ಕೂ ಇಷ್ಟು ವರ್ಷ ಆಕೆ ಇದ್ದಿದ್ದು ಎಲ್ಲಿ? ಏನಿದರ ಹಿಂದಿರುವ ಸ್ಟೋರಿ ಎಂಬುದನ್ನು ಮುಂದೆ ನೋಡಿ. ಅಂದಹಾಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹ್ಯಾರಿ ಡಿಸೋಜಾ (50) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಾಪತ್ತೆಯಾಗಿ ಒಂಬತ್ತು ವರ್ಷದ ಬಳಿಕ ಪತ್ತೆಯಾದಕೆ ಪೂಜಾ ಗೌಡ್​.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಘಟನೆಯ ವಿವರ :
ಪೂಜಾ ಗೌಡ್​ ಹೆಸರಿನ ಹುಡುಗಿ ಅಂಧೇರಿಯಲ್ಲಿರುವ ಗಿಲ್ಬರ್ಟ್​ ಏರಿಯಾದಲ್ಲಿ ತನ್ನ ಪಾಲಕರೊಂದಿಗೆ ವಾಸವಿದ್ದಳು. ಅಂಧೇರಿಯ ಕಾಮಾ ರಸ್ತೆಯಲ್ಲಿರುವ ಮುನ್ಸಿಪಾಲ್​ ಶಾಲೆಯಲ್ಲಿ ಪೂಜಾ ಓದುತ್ತಿದ್ದಳು. 2013ರ ಜನವರಿ 22ರಂದು ಶಾಲೆಗೆ ಹೋದ ಪೂಜಾ ಮತ್ತೆ ಹಿಂದಿರುಗಲೇ ಇಲ್ಲ. ಆಗ ಆಕೆಗೆ 7 ವರ್ಷ ವಯಸ್ಸಾಗಿತ್ತು. ಇದರಿಂದ ಗಾಬರಿಗೊಂಡ ಪೋಷಕರು ಹುಡುಕಾಡಲು ಶುರು ಮಾಡಿ,  ತಕ್ಷಣ ಪೊಲೀಸ್​ ಠಾಣೆಗೆ ತೆರಳಿ ನಾಪತ್ತೆ ದೂರು ದಾಖಲಿಸಿದ್ದರು. ಆದರೆ, ಪೊಲೀಸರಿಗೂ ಸುಳಿವೇ ಸಿಗಲಿಲ್ಲ. ಕೊನೆಗೆ ಪೂಜಾ ಸಿಗುವುದೇ ಇಲ್ಲ ಎಂದುಕೊಂಡಿದ್ದರು.

ಆದ್ರೆ, ಪ್ರಯತ್ನ ಬಿಡದ ಪೊಲೀಸರು ಹುಡುಕಾಟ ಮುಂದುವರೆಸಿದ್ದರು. ಬಳಿಕ, ಈ ವಾರದ ಆರಂಭದಲ್ಲಿ ಮಹಿಳೆಯೊಬ್ಬರಿಂದ ಬಂದ ಸುಳಿವು ಪೂಜಾಳ ನಾಪತ್ತೆ ಪ್ರಕರಣಕ್ಕೆ ಮಹತ್ವದ ತಿರುವನ್ನೇ ನೀಡಿತು. ವಿಲೆ ಪಾರ್ಲೆದಲ್ಲಿರುವ ನೆಹರು ನಗರ ಕೊಳಗೇರಿಯಲ್ಲಿ ಒಂದು ಹದಿಹರೆಯದ ಹುಡುಗಿ ಮೇಲೆ ಅನುಮಾನವಿದೆ ಎಂದು ಮಹಿಳೆ ಸುಳಿವು ನೀಡಿದಳು. ಆಕೆಯ ಮನೆಗೆ ಒಂದು ಪೊಲೀಸ್​ ತಂಡವನ್ನು ಕಳುಹಿಸಿ, ವಿಚಾರಣೆ ನಡೆಸಿದ್ದಾರೆ.

ಈ ವೇಳೆ, ಸ್ಲಮ್​ನ ಮನೆಯೊಂದರಲ್ಲಿ ವಾಸವಿದ್ದ ದಂಪತಿ ಆರಂಭದಲ್ಲಿ ಸೂಕ್ತ ಮಾಹಿತಿ ಕೊಡಲು ನಿರಕಾರಿಸಿದರು. ವಿಚಾರಣೆಯನ್ನು ತೀವ್ರಗೊಳಿಸಿದಾಗ, ತಮ್ಮ ಬಳಿ ಇರುವ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬಳು ನಮ್ಮ ಮಗಳಲ್ಲ, ಆಕೆಯನ್ನು ನಾವೇ ಬೆಳೆಸಿದೆವು ಎಂದು ತಪ್ಪು ಒಪ್ಪಿಕೊಂಡರು. ತಕ್ಷಣ ಹೆಚ್ಚಿನ ವಿಚಾರಣೆಗೆಂದು ಇಡೀ ಕುಟುಂಬವನ್ನು ಪೊಲೀಸ್​ ಠಾಣೆಗೆ ಕರೆತರಲಾಯಿತು ಈಗ 16ನೇ ವಯಸ್ಸಿನಲ್ಲಿರುವ ಸಂತ್ರಸ್ತ ಪೂಜಾಳನ್ನು ಬೇರೆ ಕೋಣೆಯಲ್ಲಿ ಕೂರಿಸಿ, ದಂಪತಿಯನ್ನು ಪೊಲೀಸ್​ ಶೈಲಿಯಲ್ಲಿ ವಿಚಾರಿಸಲಾಯಿತು. ಬಳಿಕ ನಡೆದ ಒಂದೊಂದೆ ಕರಾಳ ಸತ್ಯವನ್ನು ಪೊಲೀಸರ ಮುಂದೆ ತೆರೆದಿಟ್ಟರು. ಅವರ ಬಳಿಯಿದ್ದ ಪೂಜಾ 9 ವರ್ಷಗಳ ಹಿಂದೆ ಶಾಲೆ ಸಮೀಪ ನಾಪತ್ತೆಯಾಗಿದ್ದ ಹುಡುಗಿ ಎಂಬುದು ಪೊಲೀಸರಿಗೆ ಖಚಿತವಾಯಿತು ಎಂದು ಪೊಲೀಸ್​ ಠಾಣೆಯ ಹಿರಿಯ ಪೊಲೀಸ್​ ಇನ್ಸ್​ಪೆಕ್ಟರ್​ ಮಿಲಿಂದ್​ ಕುರ್ದೆ ತಿಳಿಸಿದರು.

9 ವರ್ಷಗಳ ಹಿಂದೆ ಶಾಲೆಯ ಸಮೀಪ ಪೂಜಾಳನ್ನು ಆರೋಪಿ ಹ್ಯಾರಿ ಅಪಹರಿಸಿ, ಮನೆಗೆ ತಂದಿದ್ದ. ಅಂದಿನಿಂದ ಹ್ಯಾರಿ ಮತ್ತು ಆತನ ಪತ್ನಿ ವ್ಯಂಕಟಮ್ಮ (37) ತಮ್ಮ ಮಗಳಂತೆ ಆಕೆಯನ್ನು ಬೆಳೆಸುತ್ತಿದ್ದರು. ಏಕೆಂದರೆ, ದಂಪತಿಗೆ ಮಕ್ಕಳಾಗಿರಲಿಲ್ಲ. ಪೂಜಾಳನ್ನು ಸಾಕಲು ಶುರು ಮಾಡಿದ ಮೂರು ವರ್ಷಗಳ ಬಳಿಕ ದಂಪತಿಗೆ ಒಂದು ಹೆಣ್ಣು ಮಗು ಜನಿಸಿತು. ಅಲ್ಲಿಂದಾಚೆಗೆ ಪೂಜಾಳನ್ನು ತಿರಸ್ಕರಿಸಿದರು ಂ ಆಕೆಯನ್ನು ಮನೆಗೆಲಸಕ್ಕೆ ಉಪಯೋಗಿಸಿಕೊಂಡರು. ಆಕೆ ದುಡಿದ ಹಣವನೆಲ್ಲ ಕಸಿದುಕೊಳ್ಳುತ್ತಿದ್ದರು ಎಂದು ಕುರ್ದೆ ವಿವರಿಸಿದ್ದಾರೆ.

ಎಲ್ಲಾ ತನಿಖೆಯ ಬಳಿಕ ಪೂಜಾಳಿಗೆ ಆಕೆಯ ನಿಜವಾದ ಅಪ್ಪ-ಅಮ್ಮ ದೊರೆತ್ತಿದ್ದಾರೆ. ಇತ್ತ ಒಂಬತ್ತು ವರ್ಷದ ಬಳಿಕ ಪೂಜಾ ಸಿಕ್ಕಿದ್ದನ್ನು ಕೇಳಿ ಪೋಷಕರಿಗೆ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಸುದ್ದಿ ಕೇಳಿದ ತಕ್ಷಣ ಪೊಲೀಸ್​ ಠಾಣೆಗೆ ಹೋಗಿ, ತಮ್ಮ ಮಗಳನ್ನು ನೋಡಿ ಆನಂದಭಾಷ್ಪ ಸುರಿಸಿ, ಬಾಚಿ ತಬ್ಬಿಕೊಂಡು, ಮುದ್ದಾಡಿದ್ದಾರೆ. ಅಲ್ಲದೆ, ಮಗಳನ್ನು ಪತ್ತೆ ಮಾಡಿದ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಪೂಜಾಳನ್ನು ಅಪಹರಿಸಿದಕ್ಕೆ ಹ್ಯಾರಿ ಮತ್ತು ಆತನ ಪತ್ನಿ ವ್ಯಂಕಟಮ್ಮ ವಿರುದ್ಧ ಕಿಡ್ನಾಪ್​, ತಪ್ಪಾದ ಬಂಧನ, ಅಪ್ರಾಪ್ತರ ಕಳ್ಳಸಾಗಾಣೆ ಮತ್ತು ಕಾನೂನುಬಾಹಿರ ಕಾರ್ಮಿಕ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

error: Content is protected !!
Scroll to Top
%d bloggers like this: