ದಕ್ಷಿಣ ಕನ್ನಡ : ನಾಳೆಯಿಂದ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರು ಸಂಚರಿಸುವಂತಿಲ್ಲ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ಅವಕಾಶವಿಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಂಗಳೂರಿನಲ್ಲಿ ತಿಳಿಸಿದ್ದಾರೆ.
ವಾಹನ ಸವಾರರಿಗೆ ಹೊಸ ನಿಯಮವನ್ನು ಪೊಲೀಸ್ ಇಲಾಖೆ ಜಾರಿಗೆ ತಂದಿದೆ. ಆದರೆ, ಈ ನಿಯಮದಿಂದ ಹದಿನೆಂಟು ವರ್ಷದ ಕೆಳಗಿನ ಮಕ್ಕಳು, ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ರಿಯಾಯಿತಿ ನೀಡಲಾಗಿದೆ. ಕೇವಲ ಪುರುಷ ಹಿಂಬದಿ ಸವಾರರಿಗೆ ಮಾತ್ರ ಈ ನಿಯಮ ಅನ್ವಯಿಸಲಿದೆ.
“ಕೆಲವು ಬಾರಿ ಹಿಂಬದಿ ಸವಾರರು ಸಮಸ್ಯೆ ಉಂಟು ಮಾಡ್ತಾರೆ. ಬೇರೆ ರಾಜ್ಯದಲ್ಲೂ ಈ ನಿಯಮ ಜಾರಿಗೆ ತರಲಾಗಿತ್ತು. ಆಗ ಎಲ್ಲಾ ಪುರಷ ಹಿಂಬದಿ ಸವಾರರಿಗೆ ದ್ವಿ ಚಕ್ರ ವಾಹನದಲ್ಲಿ ಸಂಚರಿಸಲು ಅವಕಾಶ ನಿರಾಕರಿಸಲಾಗಿತ್ತು ಇಲ್ಲಿ ಮಹಿಳೆಯರು, ಹಿರಿಯ ನಾಗರಿಕರು,ಮಕ್ಕಳಿಗೆ ರಿಯಾಯಿತಿ ನೀಡಲಾಗಿದೆ” ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ವಾಹನ ಸವಾರರಿಗೆ ಈ ಹೊಸ ನಿಯಮ, ಮುಂದಿನ ಒಂದು ವಾರದ ಮಟ್ಟಿಗೆ ಮಾತ್ರ ಜಿಲ್ಲೆಯಲ್ಲಿ ಪಾಲನೆ ಮಾಡಲಾಗುತ್ತದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಎರಡು ವಾರಗಳ ಅಂತರದಲ್ಲಿ ಜಿಲ್ಲೆಯಲ್ಲಿ ಮೂರು ಯುವಕರ ಹತ್ಯೆಯಾಗಿದ್ದು, ಆ ಬಳಿಕ ಇಲ್ಲಿನ ಸ್ಥಿತಿ ಬಹಳ ಗಂಭೀರವಾಗಿದೆ. ಹೀಗಾಗಿ, ಇದನ್ನು ನಿಯಂತ್ರಿಸಲು ಜಿಲ್ಲೆಯಲ್ಲಿ ನೈಟ್ ಕರ್ಪ್ಯೂ ಜಾರಿಗಳಿಸಲಾಗಿದೆ. ಜಿಲ್ಲೆಯಲ್ಲಿ ಎಲ್ಲಾ ಅಂಗಡಿ ಮುಗ್ಗಟ್ಟು, ವಾಣಿಜ್ಯ ವ್ಯವಹಾರಗಳನ್ನು ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಮುಚ್ಚುವಂತೆ ಸೂಚಿಸಲಾಗಿದೆ. ಅಲ್ಲದೆ ಕಳೆದ 10 ದಿನದಿಂದ ಮಧ್ಯ ಮಾರಾಟಕ್ಕೂ ಜಿಲ್ಲೆಯಲ್ಲಿ ನಿಷೇಧ ಹೇರಲಾಗಿದೆ. ಇದೀಗ ಮತ್ತೆ ವಾಹನ ಸವಾರರಿಗೂ ಹೊಸ ನಿಯಮ ಜಾರಿಗೊಳಿಸಿದೆ.