ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಇಡಿ ಸಮನ್ಸ್ | ಸಂಸತ್ನಲ್ಲಿ ಇ.ಡಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಗುಡುಗು
ಕಾಂಗ್ರೆಸ್ ನ ಹಿರಿಯ ನಾಯಕ ಕರ್ನಾಟಕ ಮೂಲದ
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ‘ಯಂಗ್ ಇಂಡಿಯನ್’ ಹಣ ವರ್ಗಾವಣೆ ಪ್ರಕರಣದ ತನಿಖೆ ವೇಳೆ ಹಾಜರಿರುವಂತೆ ಸಮನ್ಸ್ ಜಾರಿ ಮಾಡಿದೆ. ಹೆರಾಲ್ಡ್ ಹೌಸ್ನ 4ನೇ ಮಹಡಿಯಲ್ಲಿ ‘ಯಂಗ್ ಇಂಡಿಯನ್’ ಪ್ರಕಾಶನ ಸಂಸ್ಥೆಯ ಕಚೇರಿ ಇದೆ. ಮೋಸದ ವಹಿವಾಟಿನಿಂದ ಯಂಗ್ ಇಂಡಿಯನ್ ಈ ಆಸ್ತಿಯನ್ನು ಸಂಪಾದಿಸಿದೆ ಎಂದು ಶಂಕೆ ವ್ಯಕ್ತಪಡಿಸಿರುವ ಇಡಿ ಪ್ರತಿ ವಹಿವಾಟನ್ನೂ ಪರಿಶೀಲಿಸುತ್ತಿದೆ. ಯಂಗ್ ಇಂಡಿಯನ್ಗೆ ಸಂಬಂಧಿಸಿದ ಅಧಿಕೃತ ವ್ಯಕ್ತಿಗಳ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯಕ್ಕೆ ಪೂರ್ಣ ಪ್ರಮಾಣದಲ್ಲಿ ಶೋಧ ನಡೆಸಲು ಆಗಿರಲಿಲ್ಲ. ಹೀಗಾಗಿ ತನಿಖಾ ಸಂಸ್ಥೆಯು ಯಂಗ್ ಇಂಡಿಯನ್ ಕಚೇರಿಗೆ ಬೀಗಮುದ್ರೆ ಹಾಕಬೇಕಾಯಿತು. ಶೋಧ ಕಾರ್ಯಾಚರಣೆ ಮುಂದುವರಿಸುವ ನಿಟ್ಟಿನಲ್ಲಿ ‘ಯಂಗ್ ಇಂಡಿಯನ್’ ಸಂಸ್ಥೆಯ ಪದಾಧಿಕಾರಿ ಮಲ್ಲಿಕಾರ್ಜು ಖರ್ಗೆ ಅವರಿಗೆ ಸಮನ್ಸ್ ನೀಡಲಾಗಿದೆ.
‘ನ್ಯಾಷನಲ್ ಹೆರಾಲ್ಡ್’ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಯಂಗ್ ಇಂಡಿಯನ್’ ಪ್ರಕಾಶನ ಸಂಸ್ಥೆಗೆ ಸಂಬಂಧಿಸಿದ 12ಕ್ಕೂ ಹೆಚ್ಚು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯವು ಶೋಧ ಕಾರ್ಯಾಚರಣೆ ನಡೆಸಿತು. ಈ ಕಂಪನಿಯನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನಿರ್ವಹಿಸುತ್ತಿದ್ದಾರೆ.
ಇಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಇಡಿಯ ಸಮನ್ಸ್ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ಕಿಡಿಕಾರಿದ್ದಾರೆ. “ಸಂಸತ್ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಅವರು ಹೇಗೆ ನನಗೆ ಸಮನ್ಸ್ ನೀಡಲು ಸಾಧ್ಯ?” ಎಂದು ಖರ್ಗೆ ಪ್ರಶ್ನಿಸಿದ್ದಾರೆ. ಇ.ಡಿ ಅಧಿಕಾರಿಗಳ ಕ್ರಮದ ಸಮಯವನ್ನು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ. “ನಾನು ಮಧ್ಯಾಹ್ನ 12.30ರ ವೇಳೆಗೆ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಬೇಕಿದೆ. ನಾನು ಕಾನೂನು ಪಾಲಿಸಲು ಬಯಸುತ್ತೇನೆ. ಆದರೆ ಈ ಸಮಯದಲ್ಲಿ, ಸಂಸತ್ ಅಧಿವೇಶನದ ಮಧ್ಯಭಾಗದಲ್ಲಿ ನನಗೆ ಸಮನ್ಸ್ ನೀಡುವುದು ಸಮಂಜಸವೇ?’ ಎಂದು ಕಿಡಿಕಾರಿದ್ದಾರೆ.
” ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಮನೆಗಳನ್ನು ನಿನ್ನೆ ಪೊಲೀಸರು ಸುತ್ತುವರಿದಿದ್ದರು. ಇಂತಹ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವ ಜೀವಂತ ಹೇಗೆ ಉಳಿಯಲು ಸಾಧ್ಯ? ನಾವು ಹೆದರುವುದಿಲ್ಲ. ನಾವು ಇದರ ವಿರುದ್ಧ ಹೋರಾಡುತ್ತೇವೆ’ ಎಂದಿದ್ದಾರೆ.
ದಿಲ್ಲಿನ ಹೆರಾಲ್ಡ್ ಹೌಸ್ನಲ್ಲಿರುವ ಅಸೋಸಿಯೇಟೆಡ್ ಜರ್ನಲ್ಸ್ನ ಮಾಲೀಕ ಸಂಸ್ಥೆ ಯಂಗ್ ಇಂಡಿಯಾ ಲಿಮಿಟೆಡ್ನ ಕಚೇರಿಯನ್ನು ಜಾರಿ ನಿರ್ದೇಶನಾಲಯ ಬುಧವಾರ ಸಂಜೆ ಸೀಲ್ ಮಾಡಿತ್ತು. ಮಲ್ಲಿಕಾರ್ಜುನ ಖರ್ಗೆ ಅವರು ಈ ಸಂಸ್ಥೆಯ ಅಧಿಕೃತ ಪ್ರತಿನಿಧಿಯಾಗಿದ್ದು, ಅವರು ಅಲ್ಲಿ ಇರದ ಕಾರಣ ಕಂಪೆನಿಯನ್ನು ಸೀಲ್ ಮಾಡಬೇಕಾಯಿತು ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.