ದ.ಕ. ನಿರ್ಬಂಧ ಸಡಿಲಿಕೆ : ಸಂಜೆ 6 ರ ತನಕ ಮದ್ಯದಂಗಡಿ,ರಾತ್ರಿ 9 ರವರೆಗೆ ಅಂಗಡಿ ತೆರೆಯಲು ಅನುಮತಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಹಿತಕರ ಘಟನೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಹೇರಲಾಗಿದ್ದ ನಿರ್ಬಂಧ ಕ್ರಮಗಳನ್ನು ಆ.5 ರಿಂದ ಮುಂದಿನ ಮೂರು ದಿನಗಳ ಕಾಲ ಕೊಂಚ ಸಡಿಲಿಕೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಕುಮಾರ್ ಆದೇಶಿಸಿದ್ದಾರೆ.
ಮದ್ಯ ಪ್ರಿಯರಿಗೆ ಇವತ್ತು ಇದೊಂದು ಬಿಗ್ ನ್ಯೂಸ್. ಕಳೆದ ಕೆಲ ದಿನಗಳಿಂದ ‘ ಡ್ರೈ ಡೇ ‘ ಪ್ರಯುಕ್ತ ಗಂಟಲು ಒಣಗಿಸಿಕೊಂಡಿದ್ದ ಮದ್ಯಪ್ರಿಯರು, ಡಿಸಿಯವರ ಇವತ್ತಿನ ನಿರ್ಧಾರದಿಂದ ಖುಷಿಯಾಗಿದ್ದಾರೆ. ನಾಳೆ, ಆಗಸ್ಟ್ 5 ರಿಂದ ಸಂಜೆ 6 ರ ತನಕ ಮದ್ಯದಂಗಡಿಗಳು ತೆರೆದಿರಲಿವೆ. ಎಲ್ಲಾ ರೀತಿಯ ಮದ್ಯದ ವ್ಯಾಪಾರ ಸಾಗಾಟಕ್ಕೆ ಅನುಮತಿ ಇರುತ್ತದೆ. ಆ.5 ರಿಂದ ಅಂಗಡಿ ಮುಂಗಟ್ಟುಗಳನ್ನು ರಾತ್ರಿ 9ರ ವರೆಗೆ ತೆರೆಯಲು ಅವಕಾಶ ನೀಡಲಾಗಿದ್ದು, ಮದ್ಯದಂಗಡಿಗಳನ್ನು ನಾಳೆಯಿಂದ ಸಂಜೆ 6 ಗಂಟೆಯವರೆಗೆ ತೆರೆಯಲು ಅನುಮತಿ ನೀಡಲಾಗಿದೆ. 144 ಸೆಕ್ಷನ್ ಅಡಿಯಲ್ಲಿ ವಿಧಿಸಲಾದ ನಿಷೇಧಾಜ್ಞೆ ಹಾಗೂ ಇತರ ನಿರ್ಬಂಧಗಳು ಮೊದಲಿನಂತೆಯೇ ಮುಂದುವರಿಯಲಿದೆ.
ಜಿಲ್ಲೆಯಲ್ಲಿ ನಡೆದ ಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯಾಗಿ ಸಂಜೆ ಆರು ಗಂಟೆಯ ಬಳಿಕ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆದು ವ್ಯಾಪಾರ ವಹಿವಾಟು ನಡೆಸದಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕುಮಾರ್ ಕೆವಿ ಆದೇಶ ಹೊರಡಿಸಿದ್ದರು. ಕಳೆದ ಒಂದೆರಡು ವಾರಗಳಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಹತ್ಯೆ, ಗಲಭೆಗಳ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿತ್ತು. ಅದಲ್ಲದೇ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ , ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಹತ್ಯೆ ಪ್ರಕರ ತನಿಖಾ ಹಂತದಲ್ಲಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಸಂಜೆ ಆರು ಗಂಟೆಯ ಬಳಿಕ ಯಾವುದೇ ಅಂಗಡಿ ಮುಂಗಟ್ಟುಗಳು ವ್ಯಾಪಾರ ವಹಿವಾಟು ನಡೆಸದಂತೆ ಆದೇಶ ನೀಡಲಾಗಿತ್ತು. ಈಗ ಆ ನಿರ್ಬಂಧದಲ್ಲಿ ಕೊಂಚ ಸಡಿಲಿಕೆ ಕಾಣಬಹುದು.
ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೂ, ರಾತ್ರಿ ವೇಳೆ ಸುತ್ತಾಡದಂತೆ ಈಗಾಗಲೇ ನಗರ ಪೊಲೀಸ್ ಕಮಿಷನರ್ ಮಂಗಳೂರು ನಗರ ವ್ಯಾಪ್ತಿಯ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ನಾಕಾಬಂದಿ ವಿಧಿಸಿ ವಿಚಾರಣೆ ನಡೆಸಲಾಗುತ್ತಿದೆ.