ಸುಳ್ಯ: ಸಂಭ್ರಮಕ್ಕೆ ಅಣಿಯಾಗುವ ಹೊತ್ತಲ್ಲೇ ಮುನಿಸಿಕೊಂಡ ವರುಣ!! ಪುಟ್ಟ ಕಂದಮ್ಮಗಳ ಬಲಿ-ಸೌಹಾರ್ದತೆ-ಪ್ರಾಣ ರಕ್ಷಣೆಯ ಕೂಗು
ಸುಬ್ರಹ್ಮಣ್ಯ:ಆಗಸ್ಟ್ 01ರ ಇಳಿ ಸಂಜೆಯ ಹೊತ್ತು. ಮಾರನೇ ದಿನದ ನಾಗರ ಪಂಚಮಿಯ ಸಂಭ್ರಮ-ಸಡಗರಕ್ಕೆ ಅಣಿಯಾಗುತ್ತಿದ್ದ ಕುಕ್ಕೆ ಪುರವು ಅರೆಕ್ಷಣದಲ್ಲಿ ಮುಳುಗಡೆಯಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಏಕಾಏಕಿ ಸುರಿದ ಧಾರಾಕಾರ ಮಳೆಯ ಪರಿಣಾಮ ಸುಳ್ಯ ತಾಲೂಕಿನ ಹಲವೆಡೆ ನೆರೆ ನೀರು ತುಂಬಿದ್ದು, ನೋಡನೋಡುತ್ತಿದ್ದಂತೆಯೇ ಪೇಟೆ ಪಟ್ಟಣ, ಕೃಷಿ ತೋಟ ಗಳ ಸಹಿತ ದೇವಾಲಯಗಳೂ ಮುಳುಗಡೆಯಾಗಿದೆ.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕುಕ್ಕೆಯ ಮಂದಿ ಇಂತಹ ಮಳೆಯನ್ನು ಕಂಡಿದ್ದಾರೆ ಎನ್ನಲಾಗಿದ್ದು, ಸುಳ್ಯ ತಾಲೂಕಿನ ಹರಿಹರ, ಕಲ್ಮಕಾರು, ಕಲ್ಲುಗುಂಡಿ ಸಹಿತ ಇನ್ನಿತರ ಪ್ರದೇಶಗಳಲ್ಲಿ ಪ್ರವಾಹ ಬಂದಿದ್ದು, ಕೆಲವೇ ಗಂಟೆಗಳಲ್ಲಿ ಜನರ ರಕ್ಷಣೆಗೆ ಎನ್ ಡಿ ಆರ್ ಎಫ್ ತಂಡಗಳು, ಪೊಲೀಸ್ ಸಿಬ್ಬಂದಿಗಳು, ತಾಲೂಕು ಆಡಳಿತ ಆಗಮಿಸಿದ್ದು ಒಂದೆರಡು ಗಂಟೆಯ ರಣಭೀಕರ ಮಳೆಗೆ ಹಲವೆಡೆ ಹಾನಿಯಾಗಿದೆ.
ಈ ನಡುವೆ ಅಲ್ಲಲ್ಲಿ ಗುಡ್ಡ ಜರಿತ,ಸೇತುವೆ ಮುಳುಗಡೆ ಆಯಿತಾದರೂ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ನಿಟ್ಟುಸಿರು ಬಿಡುವ ಹೊತ್ತಲ್ಲೇ ಅಲ್ಲಿಬ್ಬರು ಕಂದಮ್ಮಗಳ ದುರಂತ ಅಂತ್ಯವಾಗಿದೆ.ಮನೆಯ ಒಂದು ಮೂಲೆಯಲ್ಲಿ ಕೂತು ತಮ್ಮದೇ ಪ್ರಪಂಚದಲ್ಲಿ ಮುಳುಗಡೆಯಾಗಿದ್ದ ಆ ಕಂದಮ್ಮಗಳಿಗೆ ಯಾರೂ ಊಹಿಸದ ರೀತಿಯಲ್ಲಿ ಸಾವು ಬಂದೊದಗಿದೆ.
ಹೌದು.ಆಗಸ್ಟ್ ಒಂದರ ಮಳೆಗೆ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಪರ್ವತಮುಖಿ ಎಂಬಲ್ಲಿ ಮನೆ ಮೇಲೆಯೇ ಗುಡ್ಡವೊಂದು ಜರಿದು ಬಿದ್ದ ಪರಿಣಾಮ ಇಬ್ಬರು ಹೆಣ್ಣು ಮಕ್ಕಳು ಮಣ್ಣು ಪಾಲಾದ ಸುದ್ದಿ ಕ್ಷಣಾರ್ದಾದಲ್ಲೇ ಜಿಲ್ಲೆಯನ್ನು ದಾಟಿ ರಾಜ್ಯಕ್ಕೆ ತಲುಪಿತ್ತು.ಮಕ್ಕಳಿಬ್ಬರನ್ನು ಬದುಕಿಸಬೇಕು ಎನ್ನುತ್ತಾ ಮಳೆಯ ನಡುವೆಯೇ ಮಣ್ಣು ಸರಿಸಿ ಶೋಧ ಕಾರ್ಯ ಆರಂಭವಾಗಿದ್ದರೂ ಕಾರ್ಯಾಚರಣೆ ಮುಗಿಯುವ ವೇಳೆಗಾಗಲೇ ಆ ಇಬ್ಬರ ಪ್ರಾಣಪಕ್ಷಿ ಹಾರಿಹೋಗಿತ್ತು.
ಗುಡ್ಡ ಕುಸಿತದ ದುರಂತದಿಂದ ಮೃತಪಟ್ಟ ಮಕ್ಕಳನ್ನು ಕುಶಾಲಪ್ಪ ಗೌಡ ಎಂಬವರ ಪುತ್ರಿಯರಾದ ಶ್ರುತಿ ಹಾಗೂ ಗಾನ ಎಂದು ಗುರುತಿಸಲಾಗಿದೆ. ಕಂದಮ್ಮಗಳ ದುರಂತ ಅಂತ್ಯದಿಂದ ಕುಕ್ಕೆ ನಗರವೇ ಮೌನವಾಗಿದ್ದು, ಖುಷಿ ತುಂಬಿರಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು, ಹೆತ್ತಬ್ಬೆಯ ಆಕ್ರಂದನ ಮುಗಿಲು ಮುಟ್ಟುವಂತಿತ್ತು.ಸ್ಥಳಕ್ಕೆ ಸಚಿವ ಎಸ್ ಅಂಗಾರ ಸಹಿತ ಅಧಿಕಾರಿಗಳ ವರ್ಗವು ಭೇಟಿ ನೀಡಿದ್ದು,ಪರಿಹಾರದ ಚೆಕ್ ಹಸ್ತಾಂತರಿಸಿ ಮನೆ ಮಂದಿಗೆ ಸಾಂತ್ವನ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಹರಿಹರ-ಬಾಳುಗೋಡು ಸಂಪರ್ಕಿಸುವ ಸೇತುವೆ ಬಿರುಕು ಬಿಟ್ಟಿದ್ದು,ನಾಲ್ಕಕ್ಕೂ ಹೆಚ್ಚು ಅಂಗಡಿ ಮುಂಗಟ್ಟುಗಳು ಸಂಪೂರ್ಣ ನಾಶವಾಗಿದೆ.ಸೇತುವೆ ಮುರಿದ ಪರಿಣಾಮ ಜನರ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿದ್ದು, ಮಳೆಯ ರೌದ್ರ ನರ್ತನಕ್ಕೆ ಕಲ್ಮಕಾರು, ಹರಿಹರ ಪ್ರದೇಶಗಳು ಸಂಪೂರ್ಣ ಹಾನಿಯಾಗಿದೆ. ಈ ನಡುವೆ ಹೊಳೆ ನೀರಿನಿಂದ ಮೇಲೆ ಬಂದ ಮೊಸಳೆಯೊಂದು ಅತ್ತಿಂದಿತ್ತಾ ಓಡಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುವ ನಡುವೆ ಪ್ರವಾಹಕ್ಕೆ ತುತ್ತಾದ ಪ್ರದೇಶಗಳ ಮಂದಿಯ ದಯನೀಯ ಸ್ಥಿತಿ ಕಂಡು ರಾಜ್ಯವೇ ಮರುಗಿದೆ.
ಅದಲ್ಲದೇ ಕಡಬ ತಾಲೂಕಿನ ನೆಟ್ಟಣ ಮುಂತಾದೆಡೆ ನೆರೆ ನೀರು ತುಂಬಿದ್ದು,ರೆಂಜಿಲಾಡಿ ಗ್ರಾಮದ ಕುಬಲಾಡಿ ಎಂಬಲ್ಲಿ ಮಳೆಯಿಂದಾಗಿ ಮನೆಯೊಂದು ಜಲಾವೃತಗೊಂಡಿದೆ.ವಿಷಯ ತಿಳಿದ ಕೂಡಲೇ ಸ್ಥಳೀಯಾಡಳಿತ ಹಾಗೂ ಎನ್. ಡಿ ಆರ್ ಎಫ್ ತಂಡಗಳು ಆಗಮಿಸಿ ಮನೆಯಲ್ಲಿದ್ದ ಏಳು ಮಂದಿ ಸದಸ್ಯರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಮರಳಿಸಿದ್ದಾರೆ. ಇಲ್ಲಿ ಅಧಿಕಾರಿ ವರ್ಗ ಹಾಗೂ ರಕ್ಷಣಾ ಸಿಬ್ಬಂದಿಗಳ ಚುರುಕಾದ ಕಾರ್ಯಚರಣೆಯಿಂದ ಸಾವು-ನೋವುಗಳು ನಿಮಿಷಗಳ ಅಂತರದಲ್ಲಿ ತಪ್ಪಿ ಹೋಗಿದೆ. ಇನ್ನು ಮಾಣಿ ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಸಿಗುವ ಪಯಸ್ವಿನಿ ಉಕ್ಕಿ ಹರಿದ ಪರಿಣಾಮ ರಸ್ತೆ ಸಂಚಾರದಲ್ಲಿ ವ್ಯತ್ಯಯಗೊಂಡಿದ್ದು, ವಾಹನಗಳು ಸಾಲುಗಟ್ಟಿ ನಿಂತಿದ್ದವು ಎನ್ನಲಾಗಿದೆ.
ಪ್ರವಾಹದ ನಡುವೆ ಸೌಹಾರ್ದದ ನಡೆಯೊಂದು ಗ್ರಾಮೀಣ ಭಾಗದಿಂದ ಕಂಡು ಬಂದಿದ್ದು ಸದ್ಯ ಸಾಮಾಜಿಕ ಜಾಲತಾಣದ ಮೂಲಕ ಎಲ್ಲರ ಪ್ರಶಂಸೆಗೂ ಪಾತ್ರವಾಗಿದೆ. ಹರಿಹರದ ಪ್ರವಾಹದ ಕಾರ್ಯಾಚರಣೆಗೆ ಆಗಮಿಸಿದ್ದ ಕ್ರೇನ್ ಒಂದರ ಸಿಬ್ಬಂದಿ ಶರೀಫ್ ಎಂಬವರು ಆಕಸ್ಮಿಕವಾಗಿ ನೆರೆ ನೀರಿಗೆ ಬಿದ್ದಿದ್ದು, ಕೂಡಲೇ ಸೋಮಶೇಖರ್ ಕಟ್ಟೆಮನೆ ಎನ್ನುವ ಹಿಂದೂ ಯುವಕ ತನ್ನ ಪ್ರಾಣದ ಹಂಗನ್ನು ತೊರೆದು ಆತನನ್ನು ರಕ್ಷಿಸಿ, ಮಾನವೀಯತೆ ಮೆರೆದಿದ್ದು ಎಲ್ಲರ ಮೆಚ್ಚುಗೆಗೂ ಕಾರಣವಾಯಿತು.
ಕಳೆದ ಒಂದೆರಡು ವರ್ಷಗಳ ಹಿಂದೆ ದಿಡುಪೆ-ಚಾರ್ಮಾಡಿಯಲ್ಲಿ ಆಗಿದ್ದ ಪ್ರವಾಹ, ನೆರೆಯಂತಹ ಘಟನೆ ಇಂದು ಕಲ್ಮಕಾರು, ಹರಿಹರ, ಸುಬ್ರಹ್ಮಣ್ಯ ಪ್ರದೇಶಗಳಲ್ಲಿ ಆಗಿದೆ-ಆಗುತ್ತಿದೆ.ಕೃಷಿ ತೋಟ, ಬಂಗಲೆಯಂತಹ ಮನೆ,ವಾಹನ ಎಲ್ಲವನ್ನೂ ತೊರೆದು ಪ್ರಾಣ ರಕ್ಷಣೆಗಾಗಿ ಸುರಕ್ಷಿತ ಸ್ಥಳ ಅರಸುತ್ತಿರುವ ಮಂದಿಯ ಮನವು ಮುಂದೆ ಇಂತಹ ಪರಿಸ್ಥಿತಿ ಯಾವ ಪ್ರದೇಶಕ್ಕೂ ಬಾರದಿರಲಿ ಎಂದು ಕಾಣದ ದೇವನನ್ನು ಬೇಡುತ್ತಿದೆ.