ಕಾರ್ಖಾನೆಯಲ್ಲಿ ಮತ್ತೆ ರಾಸಾಯನಿಕ ಅನಿಲ ಸೋರಿಕೆ; ಅಸ್ವಸ್ಥಗೊಂಡಿರುವ ಮಹಿಳಾ ಕಾರ್ಮಿಕರು
ಅಮರಾವತಿ : ರಾಸಾಯನಿಕ ಅನಿಲ ಸೋರಿಕೆಯಿಂದಾಗಿ ಒಂದು ವಾರ ಮುಚ್ಚಿದ್ದ ಕಾರ್ಖಾನೆ ಪುನಃ ಆರಂಭಿಸಲಾದ ಬೆನ್ನಲ್ಲೇ ಮತ್ತೊಂದು ಅವಘಡ ಸಂಭವಿಸಿದೆ.
ಹೌದು. ಕಳೆದ ಮೇ ತಿಂಗಳಿನಲ್ಲಿ ಭಾರಿ ಅನಾಹುತ ಸೃಷ್ಟಿಸಿದ್ದ ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯ ಅಚ್ಯುತಪುರಂನ ಸೀಡ್ಸ್ ಗಾರ್ಮೆಂಟ್ ಕಾರ್ಖಾನೆಯಲ್ಲಿ, ಮತ್ತೆ ರಾಸಾಯನಿಕ ಅನಿಲ ಸೋರಿಕೆಯಿಂದಾಗಿ ಕಾರ್ಮಿಕರ ಜೀವ ಅಪಾಯದಲ್ಲಿದೆ.
ಈ ಕಾರ್ಖಾನೆಯಲ್ಲಿ ಸುಮಾರು 4 ಸಾವಿರ ಕಾರ್ಮಿಕರು ‘ಬಿ’ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದು, ಹೆಚ್ಚಿನ ಸಂಖ್ಯೆಯ ಮಹಿಳಾ ಉದ್ಯೋಗಿಗಳು ಇದ್ದರು. ವಿಷಾನಿಲ ಸೇವನೆಯಿಂದ ಉದ್ಯೋಗಿಗಳು ಸ್ಥಳದಲ್ಲೇ ವಾಂತಿ ಮಾಡಿಕೊಂಡು ಮೂರ್ಛೆ ಹೋಗಿ ಬಿದ್ದು, ಅಸ್ವಸ್ಥರಾಗಿದ್ದಾರೆ.
ತಕ್ಷಣವೇ ಅಸ್ವಸ್ಥಗೊಂಡ ಕೆಲವರಿಗೆ ಕಾರ್ಖಾನೆ ಆವರಣದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಉಳಿದವರನ್ನು ಅಚ್ಯುತಪುರಂ ಮತ್ತು ಅನಕಾಪಲ್ಲಿಯಲ್ಲಿರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಕಾರ್ಖಾನೆಯ ಬಸ್, ಕಾರು ಮತ್ತು ಆಂಬ್ಯುಲೆನ್ಸ್‌ಗಳಲ್ಲಿ ಸಾಗಿಸಲಾಗಿದೆ.
ಕಳೆದ ಬಾರಿ ಘಟನೆ ನಡೆದಾಗ ಅಧಿಕಾರಿಗಳು ತನಿಖೆ ನಡೆಸಿ ಸುಮಾರು ಒಂದು ವಾರ ಕಾರ್ಖಾನೆ ಮುಚ್ಚಿಸಿದ್ದರೂ ಪುನಃ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಖಾನೆಯಲ್ಲಿ ರಾಸಾಯನಿಕ ಅನಿಲ ಸೋರಿಕೆ ಕುರಿತು ಹೈದರಾಬಾದ್‌ನ ಐಐಸಿಟಿ ಸೇರಿದಂತೆ ಇತರ ಸಂಸ್ಥೆಗಳು ತನಿಖಾ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿವೆ. ಆದರೆ, ಇದುವರೆಗೂ ವರದಿಗಳನ್ನು ಸರ್ಕಾರ ಬಹಿರಂಗಪಡಿಸಿಲ್ಲ.