ಅಮ್ಮನ ಮೃತದೇಹವನ್ನು ಸುಮಾರು 80 ಕಿ.ಮೀವರೆಗೆ ಮೋಟಾರು ಸೈಕಲ್ ನಲ್ಲೇ ಸಾಗಿಸಿದ ಮಗ!
ಆಸ್ಪತ್ರೆಯವರ ಎಡವಟ್ಟು ಒಂದೋ ಎರಡೋ. ಇವರ ನಿರ್ಲಕ್ಷದಿಂದ ಅದೆಷ್ಟೋ ರೋಗಿಗಳ ಪ್ರಾಣವೇ ಹೋಗಿದೆ. ಇದೀಗ ಇಂತಹುದೆ ನಿರ್ಲಕ್ಷ್ಯದ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಹೌದು. ಆಸ್ಪತ್ರೆ ಶವ ಸಾಗಿಸಲು ವಾಹನವನ್ನು ನೀಡಲು ನಿರಾಕರಿಸಿದ ಕಾರಣ ತನ್ನ ಮೃತ ತಾಯಿಯ ಶವವನ್ನು ಮೋಟಾರು ಸೈಕಲ್ ನಲ್ಲೇ ಸಾಗಿಸಿದ ಹೃದಯವಿದ್ರಾಯಕ ಘಟನೆ ನಡೆದಿದೆ.
ಇಂತಹ ಒಂದು ಮಹಾ ಎಡವಟ್ಟು ಮಧ್ಯಪ್ರದೇಶದ ಶಾಹದೋಲ್‌ನಲ್ಲಿ ವೈದ್ಯಕೀಯ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಆಂಬ್ಯುಲೆನ್ಸ್ ನೀಡದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ತಾಯಿಯ ಮೃತದೇಹವನ್ನು ಬೈಕ್ನಲ್ಲಿ ಇಟ್ಟುಕೊಂಡು ಸುಮಾರು 80 ಕಿ.ಮೀ ಸಾಗಿದ್ದಾನೆ.
ಅನುಪ್ಪೂರಿನ ಗೋಡಾರು ಗ್ರಾಮದ ಜೈಮಂತ್ರಿ ಯಾದವ್ ಎನ್ನುವವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆಕೆಯ ಸ್ಥಿತಿ ಗಂಭೀರವಾಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗೆ ಶಹದೋಲ್ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅಲ್ಲಿ ಅವರು ಸಾವನ್ನಪ್ಪಿದ್ದರು.
ಮೃತರ ಪುತ್ರ ಸುಂದರ್ ಯಾದವ್ ಅವರು ತಮ್ಮ ತಾಯಿಗೆ ಸರಿಯಾದ ಚಿಕಿತ್ಸೆ ನೀಡಿಲ್ಲ ಹಾಗಾಗಿ ಅವರು ಸಾವನ್ನಪ್ಪಿದ್ದಾರೆ ಮತ್ತು ತನ್ನ ತಾಯಿಯ ಸಾವಿಗೆ ವೈದ್ಯಕೀಯ ಆಸ್ಪತ್ರೆಯ ಆಡಳಿತ ಮಂಡಳಿಯೇ ಕಾರಣ ಎಂದು ದೂರಿದ್ದಾರೆ.
“ನಮಗೆ ಶವ ವಾಹನವನ್ನು ಸಹ ನೀಡಲಿಲ್ಲ ಮತ್ತು ಖಾಸಗಿ ವಾಹನಕ್ಕೆ 5 ಸಾವಿರ ರೂ ಬಾಡಿಗೆ ಕೇಳಿದ್ದಾರೆ. ಹಾಗಾಗಿ ಖಾಸಗಿ ವಾಹನಗಳನ್ನು ನಾವು ಖರೀದಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ನಾವು ಮರದ ಹಲಗೆಯನ್ನು ಖರೀದಿಸಿ, ನಮ್ಮ ತಾಯಿಯ ದೇಹವನ್ನು ಅದಕ್ಕೆ ಕಟ್ಟಿ ಅದನ್ನು ಸಾಗಿಸಿದ್ದೆವು” ಎಂದು ಸುಂದರ್ ಹೇಳಿದರು.