ಮ್ಯಾಟ್ರಿಮೋನಿ ಸೈಟ್ ನಲ್ಲಿ ಎಂಥ ಗಂಡ ಬೇಕು ? ಹೆಚ್ಚು ಸರ್ಚ್ ಮಾಡೋದೇನು? ಡಾಕ್ಟರ್, ಇಂಜಿನಿಯರ್,… ಅವರ್ಯಾರು ಅಲ್ಲ..ಇವರೇ…ನೋಡಿ
ಮನೆಯಲ್ಲಿ ಮದುವೆ ವಯಸ್ಸಿಗೆ ಬಂದ ಹೆಣ್ಣುಮಕ್ಕಳಿದ್ದರೆ ಹೆಚ್ಚಾಗಿ ಎಲ್ಲರೂ ಕೇಳುವ ಪ್ರಶ್ನೆ ನಿನಗೆಂಥ ಹುಡುಗ ಬೇಕಮ್ಮಾ? ಎಂದು. ಥಟ್ ಅಂತ ಬರೋ ಉತ್ತರ ಡಾಕ್ಟರ್, ಇಂಜಿನಿಯರ್, ಐಎಎಸ್, ಐಪಿಎಸ್, ಶ್ರೀಮಂತ…ಹೀಗೆ ಹೇಳ್ತಾ ಹೋಗ್ತಾರೆ. ಅಲ್ಲೋ ಇಲ್ಲೋ ಕೆಲವರು ಮಾತ್ರ ಮಾಮೂಲಿ ಉದ್ಯೋಗದ ವರ ಸಾಕು ಎಂದು ಹೇಳುತ್ತಾರೆ.
ಇಂದಿನ ಈ ಕಾಲದ ಹುಡುಗಿಯರು ಮ್ಯಾಟ್ರಿಮೋನಿ ಸೈಟ್‌ಗಳಲ್ಲಿ ಸರ್ಚ್ ಮಾಡ್ತಿರೋದೇ ಬೇರೆಯಂತೆ. ಹೌದು, ಈ ಬಗ್ಗೆ ಕೇಂದ್ರ ಇಲೆಕ್ಟ್ರಾನಿಕ್ಸ್ ಮತ್ತು ಈ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಒಂದು ಮಹತ್ವದ ಮಾಹಿತಿ ಹೇಳಿದ್ದಾರೆ. ಇವರ ಪ್ರಕಾರ, ” ನಾಗರಿಕ ಸೇವಕ ಅಥವಾ ಉನ್ನತ ಸಂಸ್ಥೆಯಿಂದ ಪದವೀಧರರಾಗಿರುವವರಿಗೆ ಹೆಚ್ಚಿನ ಮಾನ್ಯತೆಯಿರುತ್ತದೆ. ಆದರೆ ಅದು ಇನ್ನು ಮುಂದೆ ಹಾಗಲ್ಲ. ಮ್ಯಾಟ್ರಿಮೋನಿ ಸೈಟ್ ಅದರಲ್ಲಿಯೂ ಹೆಚ್ಚಾಗಿ ಶಾದಿ ಡಾಟ್ ಕಾಮ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಕೀವರ್ಡ್ ಸ್ಟಾರ್ಟ್‌ಅಪ್ ಉದ್ಯೋಗಿ ಮತ್ತು ಸ್ಟಾರ್ಟ್‌ಅಪ್ ಸಂಸ್ಥಾಪಕರು ಎಂಬುದಂತೆ” ಎಂದು ಹೇಳಿದ್ದಾರೆ.
ಈ ಹೇಳಿಕೆಯನ್ನು ಅವರು ಡಿಜಿಟಲ್ ಇಂಡಿಯಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ವೇಳೆ ತಿಳಿಸಿದ್ದಾರೆ. ವೈವಾಹಿಕ ಸೈಟ್‌ಗಳಲ್ಲಿ ಹೆಚ್ಚು ಹುಡುಕಲಾದ ಕೀವರ್ಡ್‌ಗಳ ಪಟ್ಟಿಯಲ್ಲಿ ಸ್ಟಾರ್ಟ್‌ಅಪ್ ಉದ್ಯೋಗಿ ಮತ್ತು ಸ್ಟಾರ್ಟ್‌ಅಪ್ ಸಂಸ್ಥಾಪಕರ ಹುಡುಕಾಟ ಹೆಚ್ಚು ಅಗ್ರಸ್ಥಾನದಲ್ಲಿವೆ ಎಂದಿದ್ದಾರೆ ಸಚಿವರು. ಆದ್ದರಿಂದ ಹೆಚ್ಚು ಹೆಚ್ಚು ಸ್ಟಾರ್ಟ್ ಅಪ್ ಗಳೊಂದಿಗೆ ಯುವಕರು ಮುಂದೆ ಬರಬೇಕಿದೆ. ಡಿಜಿ ಕ್ರಾಂತಿಯನ್ನು ಹೆಚ್ಚಿಸಬೇಕಿದೆ ಎಂದು ಅವರು ಹೇಳಿದರು.
ಸಚಿವರು ತಮಾಷೆ ಮಾಡುತ್ತಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದರೂ, ತಾವು ವಿಶ್ವಾಸಾರ್ಹ ಮೂಲಗಳಿಂದ ಇದನ್ನು ಹೇಳಿರುವುದಾಗಿ ಸಚಿವರು ಸ್ಪಷ್ಟನೆ ಕೊಟ್ಟಿದ್ದಾರೆ.