ಗೂಗಲ್ ಪ್ರಾರಂಭಿಸಿದೆ ಗೂಗಲ್ ಸ್ಟ್ರೀಟ್ ವ್ಯೂ ಎಂಬ ಹೊಸ ಸೇವೆ | ಇದರ ಉಪಯೋಗ, ಪ್ರಯೋಜನದ ಕುರಿತು ಇಲ್ಲಿದೆ ಡೀಟೇಲ್ಸ್

ಗೂಗಲ್ ಆರಂಭಿಸಿದ ಹೊಸ ಸೇವೆ ಗೂಗಲ್ ಸ್ಟ್ರೀಟ್ ವ್ಯೂ ಅಂತಿಮವಾಗಿ ಭಾರತದ ಹತ್ತು ನಗರಗಳಿಗೆ ಲಭ್ಯವಾಗಲಿದೆ. ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ 10 ನಗರಗಳಲ್ಲಿ ಗೂಗಲ್ ಈ ಫೀಚರ್ ಸಿಗಲಿದ್ದು, ವರ್ಷಾಂತ್ಯದ ವೇಳೆಗೆ ಸುಮಾರು 50 ನಗರಗಳಲ್ಲಿ ಹೊರತರುವ ನಿರೀಕ್ಷೆಯಿದೆ.

ಹೌದು. ನಗರಗಳ ರಸ್ತೆಗಳ ಚಿತ್ರಗಳನ್ನು ನೋಡಲು ಹಾಗೂ ನ್ಯಾವಿಗೇಟ್ ಮಾಡುವ ಸಾಮರ್ಥ್ಯವಿರುವ ಫೀಚರ್ ಅನ್ನು ಗೂಗಲ್ ಬುಧವಾರದಿಂದ ಭಾರತದಲ್ಲೂ ಪ್ರಾರಂಭಿಸಿದೆ. ಗೂಗಲ್ ಮ್ಯಾಪ್‌ನ ಅತ್ಯಂತ ಉಪಯುಕ್ತವಾಗಿರುವ ಈ ಫೀಚರ್ 2016ರಲ್ಲೇ ಭಾರತದಲ್ಲೂ ಪ್ರಾರಂಭವಾಗಬೇಕಿತ್ತು. ಆದರೆ ಭಾರತ ಸರ್ಕಾರ ಈ ಫೀಚರ್ ಭದ್ರತಾ ಹಿತಾಸಕ್ತಿಗೆ ಧಕ್ಕೆ ತರುತ್ತದೆ ಎಂಬ ಕಾರಣಕ್ಕೆ ಅದನ್ನು ಪ್ರಾರಂಭಿಸಲು ಬಿಟ್ಟಿರಲಿಲ್ಲ. ಇದೀಗ ಕೊನೆಗೂ ಭಾರತಕ್ಕಲಗ್ಗೆಯಿಟ್ಟಿದೆ.

ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಹೈದರಾಬಾದ್, ಪುಣೆ, ನಾಸಿಕ್, ವಡೋದರಾ, ಅಹಮದ್‌ನಗರ ಮತ್ತು ಅಮೃತಸರ ನಗರಗಳಲ್ಲಿ ಈ ಫೀಚರ್ ಆರಂಭಿಕ ಹಂತದಲ್ಲಿ ಸಿಗಲಿದ್ದು, ಶೀಘ್ರವೇ ಭಾರತದಾದ್ಯಂತ ಈ ಸೇವೆ ಲಭ್ಯವಾಗಲಿದೆ.

ಗೂಗಲ್ ಸ್ಟ್ರೀಟ್ ವ್ಯೂ ಎನ್ನುವುದು ನಗರದ ಬೀದಿಗಳಲ್ಲಿ ಸಂಚರಿಸುವ ದತ್ತಾಂಶ ಸಂಗ್ರಾಹಕರು ವಾಹನಗಳ ಮೇಲೆ ಅಥವಾ ಬ್ಯಾಕ್ಪ್ಯಾಕ್ಗಳ ಮೇಲೆ ಅಳವಡಿಸಲಾದ ವಿಶೇಷ ಕ್ಯಾಮೆರಾಗಳನ್ನು ಬಳಸಿಕೊಂಡು ಸೆರೆಹಿಡಿಯಲಾದ ಸ್ಥಳದ ತಲ್ಲೀನಗೊಳಿಸುವ 360-ಡಿಗ್ರಿ ವೀಕ್ಷಣೆಯಾಗಿದೆ. ನಂತರ 360-ಡಿಗ್ರಿ ವೀಕ್ಷಣೆಯನ್ನು ರಚಿಸಲು ಚಿತ್ರಗಳನ್ನು ಒಟ್ಟಿಗೆ ಜೋಡಿಸಲಾಗುತ್ತದೆ. ಗೂಗಲ್ ಸ್ಟ್ರೀಟ್ ವ್ಯೂ ಫೀಚರ್ ನಾವು ನೋಡಲು ಬಯಸುವ ಸ್ಥಳದ ರಸ್ತೆಯ ಮಟ್ಟದಿಂದ ಫೋಟೋಗಳನ್ನು ಒದಗಿಸುತ್ತದೆ. ಪ್ರವಾಸಿಗರು ಮುಖ್ಯವಾಗಿ ಮೊದಲ ಬಾರಿ ಯಾವುದಾದರೂ ಒಂದು ಸ್ಥಳಕ್ಕೆ ಭೇಟಿ ನೀಡುವ ಸಂದರ್ಭ ಈ ಫೀಚರ್ ಬಹು ಉಪಯುಕ್ತವಾಗಲಿದೆ.

ಗೂಗಲ್ ಈ ಬಗ್ಗೆ ಬುಧವಾರ ನವದೆಹಲಿಯ ಪತ್ರಿಕಾಗೋಷ್ಠಿಯಲ್ಲಿ ಜೆನೆಸಿಸ್ ಹಾಗೂ ಟೆಕ್ ಮಹೀಂದ್ರಾ ಸಹಯೋಗದೊಂದಿಗೆ ಸ್ಟ್ರೀಟ್ ವ್ಯೂ ಅನ್ನು ಭಾರತಕ್ಕೂ ತರುವುದಾಗಿ ಘೋಷಿಸಿತು. ಆರಂಭದಲ್ಲಿ 1,50,000 ಕಿ.ಮೀ ರಸ್ತೆಗಳನ್ನು ಒಳಗೊಂಡ 10 ನಗರಗಳಲ್ಲಿ ಈ ಫೀಚರ್‌ಗೆ ಚಾಲನೆ ನೀಡುವುದಾಗಿ ತಿಳಿಸಿತು. ಈ ವರ್ಷದ ಅಂತ್ಯದ ವೇಳೆಗೆ ದೇಶದ 50 ನಗರಗಳಲ್ಲಿ ಈ ಫೀಚರ್ ಅನ್ನು ವಿಸ್ತರಿಸುವ ಗುರಿಯನ್ನು ಗೂಗಲ್ ಹೊಂದಿದೆ.

ಗೂಗಲ್ ಸ್ಟ್ರೀಟ್ ವ್ಯೂನಲ್ಲಿ ವೀಕ್ಷಣೆ ಮಾಡಲು ಮೊದಲು ಗೂಗಲ್ ಮ್ಯಾಪ್ ಅನ್ನು ತೆರೆಯಬೇಕು. ನೀವು ವೀಕ್ಷಿಸಲು ಬಯಸುವ ಪ್ರದೇಶದ ಹೆಸರನ್ನು ನಮೂದಿಸಿ, ಹುಡುಕಿ. ನೀವು ವೀಕ್ಷಿಸಲು ಬಯಸುವ ಪ್ರದೇಶವನ್ನು ಟ್ಯಾಪ್ ಮಾಡಿ ಹಾಗೂ ಸ್ಥಳೀಯ ಕಟ್ಟಡ, ಹೋಟೆಲ್, ರಸ್ತೆ ಇನ್ನಿತರ ಫೋಟೋಗಳನ್ನು ಸುಲಭವಾಗಿ ನೋಡಬಹುದು.

ಫೋಟೋಗಳನ್ನು 360 ಡಿಗ್ರಿ ಆಂಗಲ್‌ನಲ್ಲೂ ವೀಕ್ಷಿಸಲು ಸಾಧ್ಯವಿದ್ದು, ಸ್ಟ್ರೀನ್‌ನಲ್ಲಿ ತೋರುವ ಎಡ, ಬಲ, ಮೇಲೆ ಕೆಳಗೆ, ಬಟನ್‌ಗಳನ್ನು ಟ್ಯಾಪ್ ಮಾಡುವ ಮೂಲಕ ಸಂಪೂರ್ಣ ಚಿತ್ರವನ್ನು ವೀಕ್ಷಿಸಬಹುದು. ಸರ್ಕಾರಿ ಆಸ್ತಿಗಳು, ರಕ್ಷಣಾ ಸಂಸ್ಥೆಗಳು ಮತ್ತು ಮಿಲಿಟರಿ ಪ್ರದೇಶಗಳಂತಹ ನಿರ್ಬಂಧಿತ ಪ್ರದೇಶಗಳಿಗೆ ಭಾರತದಲ್ಲಿ ಬೀದಿ ವೀಕ್ಷಣೆಯನ್ನು ಅನುಮತಿಸಲಾಗುವುದಿಲ್ಲ.

ಬೀದಿ ವೀಕ್ಷಣೆಗೆ ಸಂಬಂಧಿಸಿದಂತೆ ಬಹಳಷ್ಟು ಗೌಪ್ಯತೆ ಮತ್ತು ಇತರ ಸಮಸ್ಯೆಗಳನ್ನು ಎತ್ತಲಾಗಿದೆ. ಇವುಗಳಲ್ಲಿ ಬಹಳಷ್ಟು ಜನರ ಮುಖಗಳು ಮತ್ತು ಇತರ ಗುರುತಿಸಬಹುದಾದ ಅಂಶಗಳಾದ ಕಾರ್ ನಂಬರ್ ಪ್ಲೇಟ್ ಗಳು ಮತ್ತು ಮನೆ ಸಂಖ್ಯೆಗಳು ಕ್ಯಾಮರಾದಿಂದ ಸೆರೆಹಿಡಿಯಲ್ಪಡುತ್ತದೆ.

ಹೀಗಾಗಿ, ವಿಭಿನ್ನ ರೀತಿಯಲ್ಲಿ ದುರ್ಬಳಕೆಯಾಗುತ್ತವೆ. ವಿಶೇಷವಾಗಿ ಸೂಕ್ಷ್ಮ ಸ್ಥಳಗಳಿಗೆ ಈ ರೀತಿಯ ವೀಕ್ಷಣೆಗಳು ಲಭ್ಯವಾಗುವುದರ ಬಗ್ಗೆ ಭದ್ರತಾ ಕಾಳಜಿಗಳಿವೆ. ಭಾರತದ ಜೊತೆಗೆ ಗೂಗಲ್ ಆಸ್ಟ್ರಿಯಾ, ಆಸ್ಟ್ರೇಲಿಯಾ ಮತ್ತು ಜರ್ಮನಿಯಂತಹ ದೇಶಗಳಲ್ಲಿ ಸ್ಥಳೀಯ ಅಧಿಕಾರಿಗಳೊಂದಿಗೆ ಸಮಸ್ಯೆಗಳನ್ನು ಹೊಂದಿದೆ ಎಂದು ತಿಳಿದು ಬಂದಿದೆ.

Leave A Reply

Your email address will not be published.