ರಾತ್ರಿ ವೇಳೆ ಹಾಯಾಗಿ ಮಲಗಿದ್ದವರಿಗೆ ನಾಯಿಯ ಬೊಬ್ಬೆಯಿಂದ ಎಚ್ಚರ | ಮೆಲ್ಲನೆ ಬಂದು ಕಿಟಕಿಯಲ್ಲಿ ಇಣುಕಿದ ಇಲ್ಲಿನ ಜನರಿಗೆ ಕಂಡಿದ್ದು ಭಯಾನಕ ದೃಶ್ಯ
ರಾತ್ರಿ ವೇಳೆ ನಿಶಬ್ದ ಮೌನ. ಅದೇನೇ ಒಂದು ಸದ್ದು ಆದರೂ ತಕ್ಷಣ ತಿಳಿಯುತ್ತದೆ. ಅದೇ ರೀತಿ ಇಲ್ಲೊಂದು ಕಡೆ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಆಳವಾದ ನಿದ್ದೆಗೆ ಜಾರಿದ್ದ ಜನರಿಗೆ ಕಿಟಕಿಯಲ್ಲಿ ಇಣುಕಿದಾಗ ಭಯಾನಕ ದೃಶ್ಯ ಕಂಡಿದೆ.
ಹೌದು. ಇಂತಹುದೊಂದು ಘಟನೆ ಗುಮ್ಮಟ ನಗರಿ ಖ್ಯಾತಿಯ ವಿಜಯಪುರದ ಕನಕದಾಸ ಬಡಾವಣೆಯಲ್ಲಿ ನಡೆದಿದ್ದು, ರಾತ್ರಿ ವೇಳೆ ಮುಸುಕುಧಾರಿಗಳು ಓಡಾಡುತ್ತಿರುವ ದೃಶ್ಯ ಕಂಡುಬಂದಿದೆ.
ಮನೆಯೊಳಗೇ ಹಾಯಾಗಿ ಮಲಗಿದ್ದ ಜನರು, ನಾಯಿ ಜೋರಾಗಿ ಬೊಗಳಿದ್ದನ್ನು ಕಂಡು ಕಿಟಕಿಯಲ್ಲಿ ಇಣುಕಿದ್ದಾರೆ. ಈ ವೇಳೆ ದೊಣ್ಣೆ ಹಿಡಿದುಕೊಂಡು, ಮುಸುಕು ಧರಿಸಿ ನಾಲ್ಕೈದು ಜನ ಹೋಗುತ್ತಿರುವುದು ಕಂಡು ಬಂದಿದೆ. ಆದರೆ, ಅವರು ಯಾರು? ಎಲ್ಲಿಗೆ ಹೊರಟಿದ್ದಾರೆ? ಎಂಬುದು ಅರಿವಾಗದೆ ಇಡೀ ಊರೇ ಭಯದಲ್ಲಿ ಕೂರುವಂತೆ ಆಗಿದೆ.
ತಕ್ಷಣ ರಾತ್ರಿ ಪೆಟ್ರೋಲಿಂಗ್‌ನಲ್ಲಿದ್ದ ಪೊಲೀಸರು ನಾಯಿಗಳ ಜೋರಾದ ಬೊಗಳುವಿಕೆಯ ಸದ್ದು ಕೇಳಿ ಆ ಬಡವಾಣೆಗೆ ಬಂದಿದ್ದಾರೆ. ಆದರೆ, ಈ ವೇಳೆ ಮುಸುಕುಧಾರಿಗಳು ಇದ್ದಕ್ಕಿದ್ದಂತೆ ಮಾಯವಾಗಿದ್ದಾರೆ.
ವಾರದ ಹಿಂದೆಯೇ ಇಂಥದ್ದೊಂದು ಚಿತ್ರಣ ಕಂಡು ಬಂದಿದ್ದು, ಇದೀಗ ಸಿಸಿ ಟಿವಿ ದೃಶ್ಯಾವಳಿಗಳು ನಗರವಾಸಿಗಳನ್ನು ಬೆಚ್ಚಿ ಬೀಳಿಸಿದೆ. ಈ ವೀಡಿಯೊದಲ್ಲಿ ಇರುವಂತೆ, ಬನಿಯನ್ ಹಾಗೂ ಚಡ್ಡಿ ಹಾಕಿಕೊಂಡು ದೊಡ್ಡದೊಂದು ದೊಣ್ಣೆ ಹಿಡಿದುಕೊಂಡು ಬಡಾವಣೆಯಲ್ಲಿ ಸಂಚರಿಸುತ್ತಿದ್ದಾರೆ.
ಆದರೆ, ಊರಲ್ಲಿ ಯಾವುದೇ ಅಪಾಯ ನಡೆದಿಲ್ಲ. ಘಟನೆ ಬಳಿಕ ಪೊಲೀಸರು ರಾತ್ರಿ ಪೆಟ್ರೋಲಿಂಗ್ ವ್ಯವಸ್ಥೆ ಬಿಗಿಗೊಳಿಸಿದ್ದಾರೆ. ಲಾಡ್ಜ್‌ಗಳನ್ನು ಚೆಕ್ ಮಾಡಲಾಗುತ್ತಿದ್ದು, ಇನ್ನಷ್ಟು ತನಿಖೆಯನ್ನು ಪೊಲೀಸರು ಕೈಗೆತ್ತಿಕೊಂಡಿದ್ದಾರೆ.