ಆಗಸ್ಟ್ 1ರಿಂದ ಕಾರ್ಯಾರಂಭವಾಗಲಿದೆ ಹುಬ್ಬಳ್ಳಿಯಲ್ಲಿ ‘ಇನ್ಫೋಸಿಸ್’!
ಬೆಂಗಳೂರು: ಇನ್ಫೋಸಿಸ್ ಆರಂಭಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿಯ ಜನರು ಒಂದಿಲ್ಲೊಂದು ರೀತಿಯಲ್ಲಿ ಅಭಿಯಾನದ ಮೂಲಕ ಸರ್ಕಾರದ ಗಮನ ಸೆಳೆಯುತ್ತಲೇ ಬಂದಿದ್ದು, ಇದೀಗ ಯುವಕರ ಕನಸು ನನಸಾಗಿದೆ. ಹೌದು. ಐಟಿ ಉದ್ಯಮದ ದೈತ್ಯ ಕಂಪೆನಿ “ಇನ್ಫೋಸಿಸ್’ ಆಗಸ್ಟ್ ಒಂದರಿಂದ ಕಾರ್ಯಾರಂಭವಾಗಲಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಇನ್ಫೋಸಿಸ್ ಶುರು ಮಾಡಬೇಕು ಎಂದು ದಶಕದಿಂದಲೇ ಕೂಗು ಕೇಳಿಬಂದಿತ್ತು. ಇದಕ್ಕಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯು ವಿಶೇಷ ಆರ್ಥಿಕ ವಲಯ ವರ್ಗದಡಿ 43.05 ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು. ಆದರೆ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಸುಸಜ್ಜಿತವಾದ, ಬೃಹದಾಕಾರದ ಇನ್ಫೋಸಿಸ್ ಕ್ಯಾಂಪಸ್ ಕಾರ್ಯಾರಂಭ ಮಾಡಿರಲಿಲ್ಲ.
ಹುಬ್ಬಳ್ಳಿ ಜನತೆಯ ಇನ್ಫೋಸಿಸ್ ಕನಸು ಮಾತ್ರ ನನಸಾಗುತ್ತಲೇ ಇರಲಿಲ್ಲ.ಇದೇ ಕಾರಣಕ್ಕೆ ನೂತನ ರೀತಿಯಲ್ಲಿ ಅಭಿಯಾನವನ್ನು ಕೈಗೊಂಡಿದ್ದ ಕೆಲ ಯುವಕರರು ‘ಸ್ಟಾರ್ಟ್ ಇನ್ಫೋಸಿಸ್’ ಎನ್ನುವ ತಂಡ ಕಟ್ಟಿಕೊಂಡು ಮುಖ್ಯಮಂತ್ರಿಯವರಿಗೆ 10 ಸಾವಿರ ಪತ್ರ ಅಭಿಯಾನಕ್ಕೆ ಚಾಲನೆ ನೀಡಿದ್ದರು.
ಇದೆಲ್ಲದರ ಫಲವಾಗಿ ಇದೀಗ ಇನ್ಫೋಸಿಸ್ ಸಂಸ್ಥೆ ಆಗಸ್ಟ್ 1ರಂದು ಕಾರ್ಯಾರಂಭ ಮಾಡಲು ರೆಡಿಯಾಗಿದ್ದು, ಹುಬ್ಬಳ್ಳಿ ಜನತೆಯಲ್ಲಿ ಭಾರಿ ಸಂತಸ ತರಿಸಿದೆ.
ಈ ಕುರಿತು ಇನ್ಫೋಸಿಸ್ ಉದ್ಯೋಗಿಗಳಿಗೆ ಪತ್ರ ಬರೆದಿದ್ದು, ‘ಉತ್ತರ ಕರ್ನಾಟಕದ ಭಾಗದ ಜನರ ಆಸೆಯಂತೆ ಹುಬ್ಬಳ್ಳಿಯಲ್ಲಿ ಇದೇ ಆಗಸ್ಟ್ ಒಂದರಿಂದ ಕಚೇರಿ ಪ್ರಾರಂಭಿಸುತ್ತಿದ್ದೇವೆ. ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ಸಂಸ್ಥೆಯಲ್ಲಿ ನೀಡಲಾಗಿದೆ. ಈಗಾಗಲೇ ಸಂಸ್ಥೆಯ ಇತರ ಕ್ಯಾಂಪಸ್ ಗಳಲ್ಲಿ ಉದ್ಯೋಗದಲ್ಲಿರುವ ಹಲವಾರು ಯುವಕ ಯುವತಿಯರು, ಹುಬ್ಬಳ್ಳಿ ಕ್ಯಾಂಪಸ್ ನಲ್ಲಿ ಕೆಲಸ ನಿರ್ವಹಿಸಲು ಇಚ್ಛಿಸಿದ್ದಾರೆ. ಅಲ್ಲಿ ಕೆಲವರು ದೀರ್ಘಾವಧಿ ಹಾಗೂ ಇನ್ನು ಕೆಲವರು ಅಲ್ಪಾವಧಿ ಕೆಲಸ ಮಾಡಲು ಬಯಸಿದ್ದಾರೆ. ಬೇರೆ ಇನ್ನು ಯಾರಿಗಾದರೂ ಆ ಕ್ಯಾಂಪಸ್ ಗೆ ಹೋಗಿ ಕೆಲಸ ಮಾಡಲು ಇಚ್ಛೆ ಇದ್ದರೆ ನಮ್ಮನ್ನು ಸಂಪರ್ಕಿಸಿ. ಲಭ್ಯ ಇರುವ ಅನುಕೂಲತೆಗಳ ಆಧಾರದ ಮೇಲೆ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಲಾಗುವುದು’ ಎಂದು ಇನ್ಫೋಸಿಸ್ ಸಂಸ್ಥೆ ಮಾನವ ಸಂಪನ್ಮೂಲ ವಿಭಾಗ ತನ್ನ ಉದ್ಯೋಗಿಗಳಿಗೆ ಪತ್ರದಲ್ಲಿ ತಿಳಿಸಿದೆ.
ಈ ಮೂಲಕ ಸಮೀಪದ ಉದ್ಯೋಗಿಗಳು ಇಚ್ಛೆ ಪಟ್ಟಲ್ಲಿ, ಹುಬ್ಬಳ್ಳಿಯ ಕಚೇರಿಯಲ್ಲಿಯೇ ಉದ್ಯೋಗ ಮುಂದುವರಿಸಬಹುದಾಗಿದೆ.