ರೈಲಿನಲ್ಲಿ ಬುಸುಗುಟ್ಟಿದ ಹಾವು | ಪ್ರಯಾಣವನ್ನು ಸ್ಥಗಿತಗೊಳಿಸಿ ಉರಗ ಹುಡುಕಾಟ
ಕೇರಳ : ರೈಲಿನ ಕಂಪಾರ್ಟ್‌ಮೆಂಟ್‌ನಲ್ಲಿ ಹಾವು ಕಾಣಿಸಿಕೊಂಡ ಘಟನೆ ತಿರುವನಂತಪುರ – ನಿಜಾಮುದ್ದೀನ್ ಎಕ್ಸ್‌ಪ್ರೆಸ್‌ನ ರೈಲಿನಲ್ಲಿ ನಡೆದಿದೆ.
ಎಕ್ಸ್ ಪ್ರೆಸ್ ರೈಲಿನಲ್ಲಿ ಬುಧವಾರ ರಾತ್ರಿ ಪ್ರಯಾಣಿಕರೊಬ್ಬರಿಗೆ ಹಾವು ಕಾಣಿಸಿಕೊಂಡ ಪರಿಣಾಮ ಇತರೆ ಸಹ ಪ್ರಯಾಣಿಕರು ಬೆಚ್ಚಿಬಿದ್ದಿದ್ದು, ಹಾವನ್ನು ಹುಡುಕುವ ಸಲುವಾಗಿ ಎರಡು ಗಂಟೆಗಳ ಕಾಲ ಪ್ರಯಾಣವನ್ನು ಸ್ಥಗಿತಗೊಳಿಸಿರುವ ಘಟನೆ ನಡೆದಿದೆ.
ಕಂಪಾರ್ಟ್‌ಮೆಂಟ್‌ನ ಕೆಳಗಿನ ಬರ್ತ್ ಕೆಳಗೆ ಇದ್ದ ಲಗೇಜ್‌ಗಳ ನಡುವೆ ಹಾವನ್ನು ಗುರುತಿಸಿದ ಪ್ರಯಾಣಿಕರೊಬ್ಬರು, ಕೂಡಲೇ ಅದರ ಫೋಟೋ ತೆಗೆದು ಟಿಕೆಟ್ ಕಲೆಕ್ಟರ್‌ಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಬಳಿಕ, ಕೇರಳದ ಕೋಝಿಕೋಡ್ ನಲ್ಲಿ ರೈಲು ನಿಲ್ಲಿಸಿ ಹುಡುಕಿದ್ದು, ಹಾವು ಮಾತ್ರ ಪತ್ತೆಯಾಗಿಲ್ಲ.
ಟಿಟಿ ಕೂಡಲೇ ಕೋಜಿಕ್ಕೋಡ್ ನಿಲ್ದಾಣದ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದು, ಅವರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ರೈಲು ನಿಲ್ದಾಣಕ್ಕೆ ಬಂದಾಗ ನಿಲ್ಲಿಸಿ ಹಾವು ಹಿಡಿಯುವ ಪರಿಣಿತರ ಮೂಲಕ ತಪಾಸಣೆ ನಡೆಸಲಾಗಿದೆ. ಆದರೆ ಹಾವು ಕಂಡು ಬಂದಿಲ್ಲ.
ಹಾವಿನ ಫೋಟೋವನ್ನು ವೀಕ್ಷಿಸಿದ ಅರಣ್ಯಾಧಿಕಾರಿಗಳು ಇದು ಇಲಿ ಹಾವಾಗಿದ್ದು, ಅಪಾಯಕಾರಿಯಲ್ಲ. ಬಹುಶಃ ರಂಧ್ರದೊಳಗೆ ನುಸುಳಿರಬಹುದು ಎಂದು ಹೇಳಿ ಅದನ್ನು ಮುಚ್ಚಿದ್ದಾರೆ. ಬಳಿಕ ರೈಲು ಪ್ರಯಾಣವನ್ನು ಮುಂದುವರಿಸಿದೆ.