ಶಾಲಾ ಬಾಲಕಿಯರನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದ ಪೊಲೀಸ್ | ಈತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು…ಹೇಗೆ ಗೊತ್ತೇ?
ಜನರ ರಕ್ಷಣೆ ಮಾಡಬೇಕಿದ್ದ ಪೊಲೀಸ್ ಪೇದೆಯೊಬ್ಬ ಶಾಲಾ ಬಾಲಕಿಯರನ್ನು ಹಿಂಬಾಲಿಸುತ್ತಿರುವ ಘಟನೆಯೊಂದು ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಈ ರೀತಿ ಪ್ರತಿ ದಿನ ಬಾಲಕಿಯರ ಹಿಂದೆ ಹೋಗುತ್ತಿದ್ದ ಪೊಲೀಸನ್ನು ಗ್ರಾಮಸ್ಥರೇ ರೆಡ್ ಹ್ಯಾಂಡ್ ಆಗಿ ಹಿಡಿದು ಕೂಡಿ ಹಾಕಿರುವ ಘಟನೆ ನಡೆದಿದೆ. ಈ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಒಂಟಿಯಂಗಡಿ ಗ್ರಾಮದಲ್ಲಿ ನಡೆದಿದೆ.
ಅಮ್ಮತ್ತಿ ಉಪ ಠಾಣೆಯ ಚಂದ್ರಶೇಖರ್ ಎಂಬಾತನೇ ಗ್ರಾಮಸ್ಥರ ಕೈಯಿಂದ ದಿಗ್ಭಂಧನಕ್ಕೆ ಒಳಗಾದ ಪೊಲೀಸ್ ಪೇದೆ. ಶಾಲಾ ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಆರೋಪ ಹಿನ್ನೆಲೆ ಸಾರ್ವಜನಿಕರು ಕಾನ್ಸ್ಟೇಬಲ್ನನ್ನು ಕೊಠಡಿಯಲ್ಲಿ ಕೂಡಿಹಾಕಿದ್ದಾರೆ.
ಈತ ಕಳೆದ ಮೂರು ದಿನಗಳಿಂದ ಶಾಲಾ ಬಾಲಕಿಯರನ್ನು ಹಿಂಬಾಲಿಸುವುದು, ಕೈ ಸನ್ನೆ ಮಾಡುವುದು, ಅಸಭ್ಯವಾಗಿ ವರ್ತಿಸುತ್ತಿದ್ದ. ಇದರಿಂದ ಬೇಸತ್ತ ಬಾಲಕಿಯರು ತಮ್ಮ ಪೋಷಕರ ಬಳಿ ಈ ಘಟನೆಯನ್ನು ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪೋಷಕರು ಪೇದೆಯನ್ನು ಹಿಡಿಯಲು ಪ್ಲ್ಯಾನ್ ಮಾಡಿದ್ದಾರೆ. ಅದರಂತೆ ಒಂದು ಸಂಜೆ ಪೊಲೀಸ್ ಪೇದೆ ಸಮವಸ್ತ್ರದಲ್ಲೇ ಬಾಲಕಿಯರು ತೆರಳುತ್ತಿದ್ದ ಆಟೋರಿಕ್ಷಾವನ್ನು ಹಿಂಬಾಲಿಸಿದ್ದಾನೆ. ಈ ಸಂದರ್ಭ ಒಂಟಿಯಂಗಡಿ ಗ್ರಾಮಸ್ಥರು ಪೇದೆಯನ್ನು ಹಿಡಿದು ಪ್ರಶ್ನಿಸಿದಾಗ ಆವಾಜ್ ಬೇರೆ ಹಾಕಿದ್ದಾನೆ. ಆದರೆ ಗ್ರಾಮಸ್ಥರು ಪೊಲೀಸ್ ಪೇದೆಯನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ ಹಿರಿಯ ಪೊಲಿಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದಿದ್ದಾರೆ.
ಅನಂತರ ಎಎಸ್ಐ, ಎಸ್ಐ ಆಗಮಿಸಿದ್ದಾರೆ. ಗ್ರಾಮಸ್ಥರ ಮನವೊಲಿಕೆ ಮಾಡಿಸಲು ಎಷ್ಟೇ ಪ್ರಯತ್ನ ಪಟ್ಟರೂ ಪೊಲೀಸರಿಗೆ ಸಾಧ್ಯವಾಗಲಿಲ್ಲ. ಕೂಡಿ ಹಾಕಿದ ಆರೋಪಿ ಪೇದೆಯನ್ನು ರಕ್ಷಿಸುವುದೇ ಪೊಲೀಸರ ದೊಡ್ಡ ಸವಾಲಾಗಿತ್ತು. ಕೊನೆಗೆ ವಿರಾಜಪೇಟೆ ಡಿವೈಎಸ್ಪಿ ಸ್ಥಳಕ್ಕೆ ಆಗಮಿಸಿ ಜನರ ಮನವೊಲಿಕೆ ಮಾಡಿ ಪೇದೆಯನ್ನು ಕರೆದುಕೊಂಡು ಹೋಗಿದ್ದಾರೆ.
ಪೊಲೀಸರು ಪೇದೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಮಹಿಳೆಯರೊಂದಿಗೆ ಅಸಭ್ಯ ವರ್ತನೆ ತೋರುವ ಆರೋಪ ಪೇದೆ ಚಂದ್ರಶೇಖರ್ ವಿರುದ್ಧ ಸಾರ್ವಜನಿಕ ವಲಯದಲ್ಲಿ ಈ ಹಿಂದೆ ಕೇಳಿ ಬಂದಿತ್ತು.