ಹಾಸ್ಟೆಲ್ ನಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ | 15 ದಿನದಲ್ಲಿ ನಡೆದ ಎರಡನೇ ಪ್ರಕರಣ, ಹಾಸ್ಟೆಲ್ ಸುತ್ತಮುತ್ತ ಭಾರೀ ಬಂದೋಬಸ್ತ್ !!!
ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳ ಸಾವಿನ ಸರಮಾಲೆ ಮುಂದುವರಿಯುತ್ತನೇ ಇದೆ. ಜುಲೈ 13ರಂದು ಕಲ್ಲಕುರುಚಿ ಜಿಲ್ಲೆಯ ಚಿನ್ನಸೇಲಂನಲ್ಲಿರುವ ಖಾಸಗಿ ಶಾಲೆಯ ಹಾಸ್ಟೆಲ್‌ನಲ್ಲಿ 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು. ಈ ಪ್ರಕರಣ ತಣ್ಣಗಾಗುವ ಮೊದಲೇ ಸೋಮವಾರ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಕಿಲಾಚೇರಿಯ ಖಾಸಗಿ ಶಾಲೆಯ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಜಿಲ್ಲಾಡಳಿತವು ಮುಂಜಾಗ್ರತಾ ಕ್ರಮವಾಗಿ ಹಾಸ್ಟೆಲ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದೆ.
ಕಳೆದ 15 ದಿನಗಳಲ್ಲಿ ನಡೆದ ಎರಡನೇ ಪ್ರಕರಣ ಇದಾಗಿದೆ. ವಿದ್ಯಾರ್ಥಿನಿ ಸಾವಿನಿಂದ ಪೋಷಕರು ಹಾಗೂ ಸಂಬಂಧಿಕರು ಮತ್ತು ಸ್ಥಳೀಯರು ಕಿಲಾಚೇರಿ, ತಿರುಪ್ಪುರ ಜಿಲ್ಲೆಯ ಥೇಕಾಲುರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲಿ ಕೂಡ ಪೊಲೀಸರನ್ನು ನಿಯೋಜಿಸಲಾಗಿದೆ.
ಸೋಮವಾರ ಬೆಳಗ್ಗೆ ವಿದ್ಯಾರ್ಥಿನಿ ತಡವಾಗಿ ಶಾಲೆಗೆ ಹೋಗುತ್ತೇನೆ ಎಂದು ಸ್ನೇಹಿತರ ಬಳಿ ಹೇಳಿದ್ದಾಳೆ. ಆದರೆ ಒಂದು ಗಂಟೆಯಾದರೂ ಆಕೆ ಶಾಲೆ ತಲುಪಲಿಲ್ಲ. ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಹಾಸ್ಟೆಲ್ ಸಿಬ್ಬಂದಿಯು ಕೊಠಡಿಗೆ ಹೋದಾಗ, ಆಕೆಯ ಶವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿಲ್ಲ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಉಪ ಐಜಿಪಿ ಎಂ.ಸತಿಯಾ ಪ್ರಿಯಾ ಹೇಳಿದರು.
ಜು.13 ರಂದು ಖಾಸಗಿ ವಸತಿ ಶಾಲೆಯ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಶಿಕ್ಷಕರನ್ನು ಕಳೆದವಾರ ಬಂಧಿಸಿದ್ದರು. ಎರಡನೇ ಬಾರಿಗೆ ವಿದ್ಯಾರ್ಥಿನಿಯ ಶವ ಪರೀಕ್ಷೆ ನಡೆಸುವಂತೆ ಮದ್ರಾಸ್ ಹೈಕೋರ್ಟ್ ಆದೇಶಿಸಿತ್ತು. ಸಾವಿಗೆ ಶಾಲೆಯೇ ಕಾರಣ ಎಂದು ಆರೋಪಿಸಿ, ಭಾನುವಾರ ಸಾವಿರಾರು ಮಂದಿ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದರು.