15 ಅಡಿ ಹಾವು ಸುತ್ತುವರಿದಿತ್ತು ಮಾಲೀಕನ ಕತ್ತನ್ನು | ಪ್ರಾಣ ಉಳಿಸಲು ಬಂದ ಪೊಲೀಸರು ಮಾಡಿದ್ದಾದರೂ ಏನು?
ಯಾವುದೇ ಪ್ರಾಣಿಯನ್ನು ನೀವು ಎಷ್ಟೇ ಪ್ರೀತಿ ನೀಡಿ ಸಾಕಿದರೂ ಅಷ್ಟೇ ಅದರ ನಿಜ ಸ್ವಭಾವ ಮಾತ್ರ ಬದಲಾಗಲ್ಲ. ನಾಯಿ, ಬೆಕ್ಕು ಎಲ್ಲಾ ಪ್ರಾಣಿಗಳು ತಮ್ಮ ತಮ್ಮ ನಿಜ ಸ್ವರೂಪವನ್ನು ತೋರಿಸುತ್ತದೆ. ಇತ್ತೀಚೆಗಷ್ಟೇ ವೃದ್ಧೆಯೋರ್ವರ ಮಗ ಮುದ್ದಿನಿಂದ ಸಾಕಿದ ನಾಯಿಯೊಂದು, ಮಗ ಮನೆಯಲ್ಲಿ ಇಲ್ಲದ ಸಮಯದಲ್ಲಿ ವೃದ್ಧೆಯನ್ನು ಕಚ್ಚಿ ಕೊಂದಾಕಿದ ಘಟನೆ ಎಲ್ಲೆಡೆ ವೈರಲ್ ಆಗಿತ್ತು.
ಇದಕ್ಕೊಂದು ತಾಜಾ ಉದಾಹರಣೆ ಈಗ ಅಮೆರಿಕದಲ್ಲಿ ನಡೆದಿದೆ. ಹೌದು 15 ಅಡಿ ಉದ್ದದ ಹಾವೊಂದು ತನ್ನ ಮಾಲೀಕನನ್ನೇ ಕೊಲ್ಲಲು ಯತ್ನಿಸಿದೆ. ಮಾಲೀಕನ ಕತ್ತಿಗೆ ಸುತ್ತಿಕೊಂಡ ಹಾವು ಆತನನ್ನು ನಿಜಕ್ಕೂ ಕೊಲ್ಲಲು ಯತ್ನಿಸಿದೆ. ಏನೋ ಆತನ ಅದೃಷ್ಟ ಚೆನ್ನಾಗಿತ್ತು ಹಾಗಾಗಿ ಬದುಕುಳಿದ. ಅದೂ ಯಾರಿಂದ ಸಮಯಕ್ಕೆ ಸರಿಯಾಗಿ ಬಂದ ಪೊಲೀಸರಿಂದ.
ಹಾವಿನ ಹಿಡಿತದಿಂದ ಆ ವ್ಯಕ್ತಿಯನ್ನು ಬಚಾವ್ ಮಾಡಲು ಬೇರೆ ಮಾರ್ಗ ಕಾಣದೆ ಪೊಲೀಸರು ಗುಂಡು ಹಾರಿಸಿ ಅದನ್ನು ಕೊಂದಿದ್ದಾರೆ. ಈ ಭಯಾನಕ ಘಟನೆ ನಡೆದಿರುವುದು ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ.
28 ವರ್ಷದ ಯುವಕನೊಬ್ಬ ಹಾವನ್ನು ಸಾಕಿದ್ದ. ಆತ ಹತ್ತಾರು ಹಾವುಗಳನ್ನು ಸಾಕಿದ್ದ. ಅದರಲ್ಲಿ ಈ 15 ಅಡಿ ಉದ್ದದ ಆ ಹಾವು ಕೂಡಾ ಒಂದು. ಈ ಹಾವು ಅವನ ಕುತ್ತಿಗೆಗೆ ಸುತ್ತು ಹಾಕಿಕೊಂಡು ಉಸಿರುಗಟ್ಟಿಸಿತ್ತು. ಹಾವಿನ ಹಿಡಿತದಿಂದ ತಪ್ಪಿಸಿಕೊಳ್ಳಲಾಗದೆ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲಕ್ಕೆ ಬಿದ್ದಿದ್ದ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಗುಂಡು ಹಾರಿಸಿ ಹಾವನ್ನು ಕೊಂದಿದ್ದಾರೆ. ಮಾಲೀಕನ ಕತ್ತನ್ನು ಸುತ್ತುವರಿದಿದ್ದ ಈ ಹಾವು ಗುಂಡು ಹಾರಿಸಿದ ತಕ್ಷಣ ಸಾಯಲಿಲ್ಲ. ಆದ್ರೆ ಕುತ್ತಿಗೆಯ ಮೇಲಿದ್ದ ಹಿಡಿತ ಸಡಿಲವಾಯ್ತು. ಈ ಘಟನೆ ನಿಜಕ್ಕೂ ಭಯಾನಕವಾಗಿತ್ತು ಅಂತಾ ಅಲ್ಲಿನ ಪೊಲೀಸರು ವಿವರಿಸಿದ್ದಾರೆ.
ಈಗ ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಆತ ಚಿಕಿತ್ಸೆ ಪಡೆಯುತ್ತಿದ್ದಾನೆ.