ಕೇರಳದ ಮೀನುಗಾರನ ಬಲೆಗೆ ಬಿತ್ತು ತಿಮಿಂಗಿಲದ ವಾಂತಿ…ಭಾರೀ ಬೆಲೆಬಾಳುವ ಈ ವಾಂತಿಗೆ ಕೋಟಿ ಬೆಲೆ

ಯಾರಿಗೆ ವಾಂತಿ ಮಾಡುವುದು ಇಷ್ಟ ಇರುತ್ತೆ ಹೇಳಿ? ಅಸಹ್ಯ ಪಟ್ಟುಕೊಳ್ಳೋರೋ ಹೆಚ್ಚು. ವಾಂತಿ ಮಾಡುವವರಿಗೆ ಇದು ಕಿರಿಕಿರಿ ನೇ. ಮನುಷ್ಯರು ಮಾಡುವ ವಾಂತಿ ಅಸಹ್ಯನೇ. ಆದರೆ ಮೀನುಗಳು ಮಾಡುವ ವಾಂತಿ ಮಾತ್ರ ಅಸಹ್ಯ ಅನಿಸಲ್ಲ. ಮಾತ್ರವಲ್ಲದೇ ಕೋಟಿ ಬಾಳುತ್ತದೆ. ಹಾಗೂ ಸುಗಂಧದಿಂದ ಕೂಡಿರುತ್ತದೆ. ಗೊತ್ತೇ? ಇಷ್ಟು ಮಾತ್ರವಲ್ಲ, ಈ ವಾಂತಿಗೆ ಕೋಟಿ ಕೋಟಿ ರೂ ಮೌಲ್ಯವಿದೆ. ಕೋಟ್ಯಾಂತರ ಮೌಲ್ಯದ ತಿಮಿಂಗಿಲ ಮಾಡಿದ ವಾಂತಿಯೊಂದು ಕೇರಳದ ಮೀನುಗಾರರೊಬ್ಬರಿಗೆ ಸಿಕ್ಕಿದೆ. ಬರೋಬ್ಬರಿ 28.400 ಕೆಜಿ ತೂಗುವ ಈ ತಿಮಿಂಗಿಲದ ವಾಂತಿಯ ಮೊತ್ತ ಬರೋಬ್ಬರಿ 28 ಕೋಟಿ ರೂ.

ದೂರ ಸಮುದ್ರದ ಮೀನುಗಾರಿಕೆ ವೇಳೆ ಸಿಕ್ಕ ತಿಮಿಂಗಿಲದ ವಾಂತಿಯನ್ನು ಶುಕ್ರವಾರ (ಜು.22) ಮೀನುಗಾರರು ತೀರಕ್ಕೆ ಎಳೆದು ತಂದಿದ್ದು, ಕರಾವಳಿಯ ಪೊಲೀಸರಿಗೆ ನೀಡಿದ್ದಾರೆ.

ಅಂಬರ್ ಗ್ರೀಸ್ ಎಂದು ಕರೆಯಲ್ಪಡುವ ಈ ತಿಮಿಂಗಿಲ ವಾಂತಿಯನ್ನು ಮೀನುಗಾರರು ನಮಗೆ ಕೊಟ್ಟಿದ್ದು, ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಅವರು ಬಂದು ನಮ್ಮಿಂದ ಅದನ್ನು ಸ್ವೀಕರಿಸಿದ್ದಾರೆ ಎಂದು ಕರಾವಳಿ ಪೊಲೀಸರು ಹೇಳಿದ್ದಾರೆ.

ಅರಣ್ಯ ಇಲಾಖೆಯವರು ಈ ತಿಮಿಂಗಿಲದ ವಾಂತಿಯೇ ಎಂದು ಖಚಿತಪಡಿಸಲು ನಗರದಲ್ಲಿರುವ ರಾಜೀವ್ ಗಾಂಧಿ ಬಯೋಟೆಕ್ನಾಲಜಿ ಕೇಂದ್ರಕ್ಕೆ (RGCB) ರವಾನಿಸಿದ್ದಾರೆ. ತಿಮಿಂಗಿಲದ ಈ ವಾಂತಿಯನ್ನು ಸುಗಂಧದ್ರವ್ಯ ಮಾಡಲು ತಯಾರಿಸಲಾಗುತ್ತದೆ. ಅಲ್ಲದೇ ಒಂದು ಕೆಜಿ ಅಂಬರ್ಗ್ರಿಸ್‌ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೋಟಿ ಬೆಲೆ ಇದೆ. ಆದರೆ ಇದರ ಮಾರಾಟಕ್ಕೆ ಭಾರತದ ಕಾನೂನಿನಲ್ಲಿ ನಿಷೇಧವಿದೆ. ಈ ರೀತಿಯ ತಿಮಿಂಗಿಲಗಳು ಅಳಿವಿನಂಚಿನಲ್ಲಿರುವ ಸಮುದ್ರ ಪ್ರಭೇದವಾಗಿದ್ದು, ಇವುಗಳನ್ನು ವನ್ಯಜೀವಿ ರಕ್ಷಣಾ ಕಾಯ್ದೆಯಡಿ ರಕ್ಷಿಸಲಾಗುತ್ತದೆ.

ತಿಮಿಂಗಿಲಗಳು ಮಾಡುವ ಈ ಮೇಣದಂತಹ ವಾಂತಿ 2 ರಿಂದ 3 ದಿನಗಳಲ್ಲಿ ಘನರೂಪ ಪಡೆಯುತ್ತದೆ. ಅನಂತರ ಮೇಣದ ರೂಪಕ್ಕೆ ತಿರುಗುತ್ತದೆ. ಇದು ಘನರೂಪಕ್ಕೆ ಬಂದ ನಂತರ ಅಧಿಕ ಪ್ರಮಾಣದ ಸುಗಂಧ ಇದರಿಂದ ಹೊರಬರುತ್ತದೆ. ಹಾಗಾಗಿ ಇದನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಹೇರಳವಾಗಿ ಉಪಯೋಗಿಸಲಾಗುತ್ತದೆ. ಅಂಬರ್‌ಗ್ರೀಸ್ ಸುಗಂಧ ದ್ರವ್ಯ ಬಹಳ ದೀರ್ಘಕಾಲದವರೆಗೆ ಸುವಾಸನೆ ಬೀರುವುದು. ಸುಗಂಧ ದ್ರವ್ಯವಲ್ಲದೇ ಆಹಾರ ಹಾಗೂ ಪಾನೀಯಗಳಲ್ಲೂ ಇವುಗಳನ್ನು ಬಳಸಲಾಗುತ್ತದೆ.

ಹೀಗಾಗಿ ಅಕ್ರಮವಾಗಿ ಇವುಗಳನ್ನು ಮಾರಾಟ ಮಾಡುವ ದೊಡ್ಡ ದಂಧೆಯೇ ಇದೆ. ನಾಯಿಗಳು ಈ ಅಂಬರ್‌ಗ್ರೀಸ್ ಅನ್ನು ಸುಲಭವಾಗಿ ಗುರುತಿಸುತ್ತವೆಯಂತೆ. ಹಾಗಾಗಿ ಇವುಗಳ ಶೋಧ ಕಾರ್ಯಾಚರಣೆಗೆ ಸಮುದ್ರಕ್ಕೆ ನಾಯಿಗಳನ್ನು ಕೂಡ ಕರೆದುಕೊಂಡು ಹೋಗುತ್ತಾರಂತೆ.

Leave A Reply

Your email address will not be published.