ಗಂಡು ಹೆಣ್ಣು ಜೊತೆಗೆ ಕುತ್ಕೊಂಡ್ರೆ ಪ್ರಾಬ್ಲಂ….? ನೈತಿಕ ಪೊಲೀಸ್ ಗಿರಿಗೆ ಮುಟ್ಟಿ ನೋಡುವಂತಹ ಉತ್ತರ ಕೊಟ್ಟ ಈ ಕಾಲೇಜಿನ ವಿದ್ಯಾರ್ಥಿಗಳು!
ಗಂಡು ಹೆಣ್ಣು ಒಟ್ಟಿಗೆ ಕುಳಿತರೆ ಅಥವಾ ಮಾತನಾಡಿದರೆ ಎಲ್ಲಾದರೂ ಕಂಡರೆ ಜನ ಪರಸ್ಪರ ಮುಖ ನೋಡಿಕೊಂಡು ಮಾತನಾಡುವುದು ಸಾಮಾನ್ಯ. ಜೊತೆ ಜೊತೆಯಾಗಿ ಕುಳಿತರೆ, ಬಸ್ ನಲ್ಲಿ ಒಂದೇ ಸೀಟಲ್ಲಿ ಕುಳಿತರೆ, ಸಾರ್ವಜನಿಕವಾಗಿ ನಗಾಡಿಕೊಂಡು ಮಾತನಾಡಿದರೆ ಹೀಗೆ ಹತ್ತು ಹಲವಾರು ಕಡೆ. ಈ ರೀತಿಯಾದಾಗ ಯಾವುದೇ ಗಂಡು ಹೆಣ್ಣು ಕೆಲವೊಮ್ಮೆ ದರ್ಪದ ಮಾತು, ಕುಹಕ ಮಾತು ಎಲ್ಲಾ ಕೇಳಬೇಕಾಗುತ್ತದೆ.
ಇದರ ಬಗ್ಗೆ ನೈತಿಕ ಪೊಲೀಸ್‌ಗಿರಿ ಮಾಡಿ ವೀಡಿಯೋ ಕೂಡಾ ಮಾಡಿ, ಪೋಟೋಸ್ ತೆಗೆದು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಸ್ಕೋಪ್ ತೆಗೆದುಕೊಳ್ಳುವ ಮಂದಿಗೆ ನಮ್ಮಲ್ಲಿ ಕಮ್ಮಿ ಇಲ್ಲ.
ಆದರೆ ತುಂಬಾ ವಿದ್ಯಾರ್ಥಿಗಳು ಈ ನೈತಿಕ ಪೊಲೀಸ್ ಗಿರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೆ ತಕ್ಕ ಉತ್ತರವೊಂದನ್ನು ಇಲ್ಲೊಂದು ವಿದ್ಯಾರ್ಥಿಗಳ ತಂಡ ಮಾಡಿದೆ. ಹಾಗೂ ಇದು ಸಖತ್ ವೈರಲ್ ಕೂಡಾ ಆಗಿದೆ.
ಕಾಲೇಜ್ ಆಫ್ ಇಂಜಿನಿಯರಿಂಗ್ ತಿರುವನಂತಪುರದ (ಸಿಇಟಿ) ವಿದ್ಯಾರ್ಥಿಗಳು ನೈತಿಕ ಪೊಲೀಸ್ ಗಿರಿಗೆ ಮುಟ್ಟಿ ನೋಡುವ ಹಾಗೇ ಒಂದು ಕೆಲಸ ಮಾಡಿದ್ದಾರೆ. ಇದು ಬಹುಶಃ ಅವರು ನೀಡಿದ ಬೆಸ್ಟ್ ಉತ್ತರ ಎಂದೇ ಹೇಳಬಹುದು. ಮಂಗಳವಾರ ಸಂಜೆ ಸಿಇಟಿಯ ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್‌ನ ಹೊರಗಿನ ಬಸ್ ವೇಟಿಂಗ್ ಶೆಡ್‌ನಲ್ಲಿ ಒಂದು ಬೆಳವಣಿಗೆಯನ್ನು ಕಂಡಿದ್ದಾರೆ. ಅದೇನೆಂದರೆ ಕಾಲೇಜು ಮಕ್ಕಳು ಒಟ್ಟಾಗಿ ಕುಳಿತು ಹರಟೆ ಹೊಡೆಯುವ ಸ್ಥಳದಲ್ಲಿ ಯಾರೋ ಸೀಟನ್ನೇ ಕಿತ್ತು ತೆಗೆದಿದ್ದರು. ಬಸ್ ವೇಟಿಂಗ್ ಶೆಡ್‌ನಲ್ಲಿದ್ದ ಉದ್ದನೆಯ ಸ್ಟೀಲ್ ಬೆಂಚನ್ನು ಯಾರೋ ತೆಗೆದಿದ್ದರು. ಅದಕ್ಕೆ ಆಧಾರವಾಗಿದ್ದ ಕಂಬಗಳನ್ನು ಬಿಟ್ಟರೆ ಅಲ್ಲಿ ಬೇರೇನೂ ಇರಲಿಲ್ಲ. ಇದರಿಂದಾಗಿ ಇಬ್ಬರು ಅಕ್ಕಪಕ್ಕದಲ್ಲಿ ಕುಳಿತುಕೊಳ್ಳಲು ಅಸಾಧ್ಯವಾಗಿತ್ತು. ಆಸನವನ್ನು ಈಗ ದೂರದಲ್ಲಿ ಮೂರು ಕುರ್ಚಿಗಳಂತೆ ಮಾಡಲಾಗಿತ್ತು. ಇದರಲ್ಲಿ ಇಬ್ಬರು ಜೊತೆಗೆ ಕೂರುವುದಂತೂ ಸಾಧ್ಯವೇ ಇಲ್ಲ.
ಆಗ ಎರಡನೇ ವರ್ಷದ ವಿದ್ಯಾರ್ಥಿಗಳ ಗುಂಪೊಂದು ಹೊಸ ರೀತಿಯಲ್ಲಿ ಪ್ರತಿಭಟಿಸಲು ನಿರ್ಧಾರ ಮಾಡಿತು. ಗಂಡು ಮತ್ತು ಹೆಣ್ಣು ವಿದ್ಯಾರ್ಥಿಗಳು ಪರಸ್ಪರರ ಮಡಿಲಲ್ಲಿ ಕುಳಿತು ಫೋಟೋ ಕ್ಲಿಕ್ ಮಾಡಿದ್ದಾರೆ. ಅಷ್ಟು ಮಾತ್ರವಲ್ಲ ಇದನ್ನು ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಕೂಡಾ. ಶೀಘ್ರದಲ್ಲೇ ವಾಟ್ಸಾಪ್ ಸ್ಟೇಟಸ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಇದೊಂದು ವಿಶಿಷ್ಟ ರೀತಿಯ ಪ್ರತಿಭಟನೆ ಹಾಗೂ ಸಿಂಪಲ್ ರೀತಿಯ ಪ್ರತಿಭಟನೆ ಎಲ್ಲಾ ಕಡೆ ಮೆಚ್ಚುಗೆ ಗಳಿಸಿದೆ. ಹಾಗಾಗಿ ಕೆಲವೇ ಸಮಯದಲ್ಲಿ ಚಿತ್ರ ವೈರಲ್ ಆಗಿತ್ತು. ಕೂಡಲೇ ಆ ಕಾಲೇಜಿನ ಹಲವಾರು ವಿದ್ಯಾರ್ಥಿಗಳು ತಮ್ಮ ಕಾಲೇಜು ಸಹಪಾಠಿಗಳೊಂದಿಗೆ ಒಟ್ಟಿಗೆ ಸೇರಿ ಈ ರೀತಿಯ ಫೋಟೋ ತೆಗೆದುಕೊಂಡಿದ್ದಾರೆ.
ನಾವು ಮಾಡಿದ ಈ ಪ್ರತಿಭಟನೆ ಈ ರೀತಿ ವೈರಲ್ ಆಗುತ್ತದೆ ಎಂದು ನಾವು ಎಂದಿಗೂ ನಿರೀಕ್ಷೆ ಮಾಡಲಿಲ್ಲ ಎಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ ಯುವಕ ಹೇಳಿದ್ದಾನೆ. ಚಿತ್ರವನ್ನು ವ್ಯಾಪಕವಾಗಿ ಹಂಚಿಕೊಂಡಿರುವುದು ನಮ್ಮ ಸರಳ ಪ್ರತಿಭಟನೆಗೆ ಸ್ವೀಕಾರವನ್ನು ತೋರಿಸುತ್ತದೆ. ಜನಸಾಮಾನ್ಯರು ನಮ್ಮ ನಿಲುವನ್ನು ಹೇಗೆ ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದನ್ನೂ ಇದು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.
ಫೋಟೋ ಎಲ್ಲಾ ಕಡೆ ವೈರಲ್ ಆಗಿದ್ದರಿಂದ ಇದೊಂದು ಸರಳ ಪ್ರತಿಭಟನೆಗೆ ಮಾರ್ಗವನ್ನು ತೋರಿಸುತ್ತದೆ. ಎಂದು ತಮ್ಮ ಅಭಿಪ್ರಾಯವನ್ನು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಹೇಳಿದ್ದಾರೆ.