ಬೆಳ್ತಂಗಡಿ : ತಾಲೂಕಿನ ಕಲ್ಮಂಜ ಗ್ರಾಮದ ವ್ಯಕ್ತಿಯೋರ್ವರು ನಿನ್ನೆ ರಾತ್ರಿ ಬಾವಿಯಿಂದ ನೀರು ತರಲೆಂದು ಬಾವಿಯ ಬಳಿ ಹೋದವರು ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆಯೊಂದು ನಡೆದಿದೆ.
ಆರ್ಲ ನಿವಾಸಿ ಕೃಷ್ಣಪ್ಪ ಪೂಜಾರಿ (35 ವರ್ಷ) ಎಂಬುವವರೇ ನಿನ್ನೆ ರಾತ್ರಿ ಬಾವಿಗೆ ಬಿದ್ದು ಸಾವನ್ನಪ್ಪಿದ ವ್ಯಕ್ತಿ. ಈಜು ಬಾರದೇ ನೀರಿನಲ್ಲಿ ಮುಳುಗಿ ಉಸಿರುಕಟ್ಟಿ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ನವವಿವಾಹಿತರಾದ ಕೃಷ್ಣಪ್ಪ ಅವರು, ಮೇಸ್ತ್ರಿ ಉದ್ಯೋಗ ಮಾಡುತ್ತಿದ್ದು, ನಿನ್ನೆ ರಾತ್ರಿ ಸರಿಸುಮಾರು ಎಂಟು ಗಂಟೆಯ ಹೊತ್ತಿಗೆ ಕಾಣೆಯಾಗಿದ್ದಾರೆ. ಇವರು ಕಾಣದಿರುವಾಗ ಮನೆ ಮಂದಿ ಹುಡುಕಾಟ ಪ್ರಾರಂಭಿಸಿದ್ದಾರೆ. ಎಷ್ಟೇ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಆದರೆ ಇಂದು ಸಂಜೆಯ ವೇಳೆಗೆ ಮೃತ ದೇಹವು ಬಾವಿಯಲ್ಲಿ ತೇಲಾಡುತ್ತಿರುವುದು ಮನೆಯವರಿಗೆ ಕಂಡು ಬಂದಿದೆ. ಕೂಡಲೇ ಸ್ಥಳೀಯರು ಹಾಗೂ ಪೊಲೀಸರ ಸಹಾಯದಿಂದ ಮೃತದೇಹವನ್ನು ಮೇಲಕ್ಕೆತ್ತಲಾಯಿತು.
ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must log in to post a comment.