ಅಕ್ರಮ ಗಣಿಗಾರಿಕೆಯನ್ನು ತಡೆಯಲು ಹೋದ ಪೊಲೀಸ್ ಮೇಲೆ ಕಲ್ಲು ತುಂಬಿದ ಟ್ರಕ್ ಹಾಯಿಸಿದ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಎನ್.ಡಿ.ಟಿವಿ ವರದಿ ಮಾಡಿದೆ.
ಅರಾವಳಿ ಪರ್ವತ ಶ್ರೇಣಿಯ ಸಮೀಪದ ಪಚಗಾಂವ್‌ನಲ್ಲಿ ಅಕ್ರಮವಾಗಿ ಕಲ್ಲುಗಳನ್ನು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಡಿಎಸ್‌ಪಿ ಶ್ರೇಣಿಯ ಅಧಿಕಾರಿ ಸುರೇಂದ್ರ ಸಿಂಗ್ ಬಿಷ್ಣೋಯ್ ಅವರು ಮಾಹಿತಿ ಪಡೆದಿದ್ದರು. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಪೊಲೀಸ್ ತಂಡದೊಂದಿಗೆ ಸ್ಥಳಕ್ಕೆ ಬಂದಿದ್ದಾರೆ.
ಪೊಲೀಸ್ ಸಿಬ್ಬಂದಿಯನ್ನು ಕಂಡು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರು ಸ್ಥಳದಿಂದ ಪರಾರಿಯಾಗಲು ಆರಂಭಿಸಿದರು. ಹಿರಿಯ ಅಧಿಕಾರಿ ದಾರಿಯಲ್ಲಿ ಅಡ್ಡ ನಿಂತು ಕಲ್ಲು ತುಂಬಿದ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದರು. ಆದರೆ ಟ್ರಕ್‌ನ ಚಾಲಕ ಅದನ್ನು ಲೆಕ್ಕಿಸದೆ ಅವರ ಮೇಲೆಯೇ ಟ್ರಕ್ ಹರಿಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಪೊಲೀಸರು ಪಕ್ಕಕ್ಕೆ ಹಾರಿದ್ದರಿಂದ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಈ ಘಟನೆ ಬಗ್ಗೆ ಈಗಾಗಲೇ ಅಪರಾಧಿಗಳನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಿಂದ ಸಂತಾಪ ಸಂದೇಶದಲ್ಲಿ ಹರಿಯಾಣ ಪೊಲೀಸರು “ನ್ಯಾಯಕ್ಕಾಗಿ ಯಾವುದೇ ಪ್ರಯತ್ನವನ್ನು ಕೈ ಬಿಡುವುದಿಲ್ಲ” ಎಂದು ಹೇಳಿದ್ದಾರೆ.
You must log in to post a comment.