ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿಜಯ ಪತಾಕೆ ಪಕ್ಕಾ ಅಂತಿದೆ ಸಮೀಕ್ಷೆ !
ಮೈಸೂರು: ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿ ಇನ್ನೂ 10 ದಿನಗಳಲ್ಲಿ ಒಂದು ವರ್ಷ ಪೂರೈಸಲಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿಗೆ ಖುಷಿ ಪಡಲು ಕಾರಣವೊಂದು ಸಿಕ್ಕಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104, ಕಾಂಗ್ರೆಸ್ 70 ಹಾಗೂ ಜೆಡಿಎಸ್ 20 ಕ್ಕಿಂತಲೂ ಹೆಚ್ಚಿನ ಸೀಟು ಗಳಿಸಲಿದೆ ಎಂದು ಆಂತರಿಕ ಸಮೀಕ್ಷೆ ವರದಿ ಬಹಿರಂಗಗೊಳಿಸಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಗ್ರೂಪ್ ವರದಿ ಮಾಡಿವೆ.
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅನುಪಸ್ಥಿತಿಯಲ್ಲಿಯೂ ಪಕ್ಷ 104 ಸ್ಥಾನ ಗೆಲ್ಲುವಷ್ಟು ಸಮರ್ಥವಾಗಿದೆ ಎಂಬುದನ್ನು ಸಮೀಕ್ಷೆಯಲ್ಲಿ ವಿಶೇಷವಾಗಿ ಉಲ್ಲೇಖಿಸಲಾಗಿದೆ. ಬಿಜೆಪಿಯ ಭದ್ರ ಕೋಟೆ ಕರಾವಳಿಯಲ್ಲಿ ಭರ್ಜರಿ ಮುನ್ನಡೆ ಬರುವ ನಿರೀಕ್ಷೆ ಇದ್ದು, ಎಲ್ಲಾ ಸ್ಥಾನಗಳಲ್ಲೂ ಬಾಚಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಲ್ಲದೆ, ಕರ್ನಾಟಕ ಮುಂಬೈ-ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಮಧ್ಯ ಕರ್ನಾಟಕದಂತಹ ಬಿಜೆಪಿಯ ಸಾಂಪ್ರದಾಯಿಕ ಬೆಂಬಲ ಪ್ರದೇಶಗಳಿಂದ ಕೂಡಾ ಸಕಾರಾತ್ಮಕ ಪ್ರತಿಕ್ರಿಯೆಗಳು ಬರುತ್ತಿವೆ ಎಂದು ಸಮೀಕ್ಷೆ ಸೂಚಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಈ ಸಲ ಬಿಎಸ್‌ಪಿ, ಎಐಎಂಐಎಂ ಮತ್ತು ಎಎಪಿ ಸೇರಿದಂತೆ ಇತರ ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಪಕ್ಷಗಳು 20 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ ಎಂದಿದೆ ಸಮೀಕ್ಷೆ.
ಬಿಜೆಪಿಯದಲ್ಲದ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಹಾಸನ, ಕೋಲಾರ, ಮೈಸೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಲ್ಲಿಯೂ ಬಿಜೆಪಿ ಚಿಗುತು ನಿಂತಿದ್ದರೂ, ಅದು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಸಮರ್ಥವಾಗಿಲ್ಲ, ಈ ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಜೊತೆ ಬಿಜೆಪಿ ಹೋರಾಟ ನಡೆಸಬೇಕಿದೆ.
2008 ರಿಂದ ಸಾಂಪ್ರದಾಯಿಕವಾಗಿ ಬಿಜೆಪಿ ಗೆಲ್ಲುತ್ತಿರುವ ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆಯಿಂದ ಈ ಶಾಸಕರಿಗೆ ಯಾವುದೇ ಹಾನಿಯಾಗುವುದಿಲ್ಲ ಎಂಬುದನ್ನು ಸಮೀಕ್ಷೆ ತಿಳಿಸಿದೆ. ಸದ್ಯ ಬಿಜೆಪಿ ಸರ್ಕಾರವು 104 ಬಿಜೆಪಿ ಸದಸ್ಯರನ್ನು ಹೊಂದಿದೆ.
ಕಾಂಗ್ರೆಸ್‌ನ 14 ಮತ್ತು ಜೆಡಿಎಸ್‌ನ ಮೂವರು ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡ ನಂತರ ಕೊರತೆಯಿದ್ದ 17 ಸ್ಥಾನವನ್ನು ತುಂಬಲಾಯಿತು. ಈ ಎಲ್ಲಾ 17 ಕ್ಷೇತ್ರಗಳಲ್ಲಿ ಬಿಜೆಪಿ ಪರವಾಗಿ ಯಾವುದೇ ದೊಡ್ಡ ಅಲೆ ಇಲ್ಲ ಎಂದು ಸಮೀಕ್ಷೆ ತಿಳಿಸಿದೆ.
8 ತಿಂಗಳ ಹಿಂದೆ ನಡೆಸಿದ್ದ ಸಮೀಕ್ಷೆಯಲ್ಲಿ ಬಿಜೆಪಿ 70 ಸ್ಥಾನಗಳಿಂದ 40 ಕ್ಕೆ ಇಳಿಯುತ್ತದೆ ಎಂದು ತಿಳಿಸಿತ್ತು, ಆದರೆ ಇತ್ತೀಚಿನ ಸಮೀಕ್ಷೆ ಪ್ರಕಾರ ಬಿಜೆಪಿ 104 ಸ್ಥಾನ ಗೆಲ್ಲಲು ಸಶಕ್ತವಾಗಿದೆ ಎಂದು ತಿಳಿಸಿದೆ.