Special News | 55ರ ವಯಸ್ಸಿನಲ್ಲಿ ನೀಟ್ ಪರೀಕ್ಷೆ ಬರೆದು ಯುವಜನತೆಗೆ ಸ್ಫೂರ್ತಿಯಾದ ರೈತ
ಸಾಧನೆಗೆ ವಯಸ್ಸು ಮುಖ್ಯವಲ್ಲ. ಕಲಿಯುವ ಛಲವೊಂದಿದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ ತಮಿಳುನಾಡಿನ ಈ ವ್ಯಕ್ತಿ.
ಹೌದು. ತಮಿಳುನಾಡಿನ ಮಧುರೈನಲ್ಲಿ 55ರ ಹರೆಯದ ರೈತರೊಬ್ಬರು ಅಖಿಲ ಭಾರತೀಯ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನೇ ಬರೆದು, ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಕೆ.ರಾಜ್ಯಕ್ಕೋಡಿ 1984 ರಲ್ಲಿ ನೀಟ್ ಬರೆದು, ಖಾಸಗಿ ವೈದ್ಯಕೀಯ ಕಾಲೇಜಿಗೆ ಆಯ್ಕೆಯಾಗಿದ್ದರಂತೆ. ಆದರೆ ಆಗ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಅವರಿಗೆ ಕಾಲೇಜು ಸೇರಲು ಆಗಿರಲಿಲ್ಲ.
ಆದರೂ ಛಲ ಬಿಡದ ರೈತ ಕೃಷಿ ಜೀವನ ನಡೆಸುತ್ತಿದ್ದ ಇವರಿಗೆ, ಕಳೆದ ವರ್ಷ ಒಡಿಶಾದಲ್ಲಿ 64 ವರ್ಷದ ವ್ಯಕ್ತಿಯೊಬ್ಬರು ನೀಟ್ ಬರೆದ ಸುದ್ದಿ ಕೇಳಿ ಸ್ಫೂರ್ತಿ ಪಡೆದುಕೊಂಡಿದ್ದಾರೆ. ಇದನ್ನೇ ಚಾಲೆಂಜ್ ಆಗಿ ಮಾಡಿಕೊಂಡ ಕೆ.ರಾಜ್ಯಕ್ಕೋಡಿ ಇಂದು ನೀಟ್ ಪರೀಕ್ಷೆ ಬರೆದಿದ್ದಾರೆ.
ರಾಜ್ಯಕ್ಕೋಡಿ ಅವರ ಕಿರಿಯ ಮಗ ವಾಸುದೇವನ್ ನೀಟ್‌ನಲ್ಲಿ 521 ಅಂಕ ಪಡೆದು, ಕಡಲೂರಿನ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮಗ ಅಭ್ಯಾಸ ಮಾಡಿದ್ದ ಪುಸ್ತಕಗಳನ್ನು ಇಟ್ಟುಕೊಂಡಿದ್ದ ರಾಜ್ಯಕ್ಕೋಡಿ ಕಳೆದ 1 ವರ್ಷದಿಂದ ದಿನಕ್ಕೆ 3 ತಾಸು ಅಭ್ಯಾಸ ಮಾಡಿದ್ದು, ಭಾನುವಾರ ಪರೀಕ್ಷೆ ಬರೆದಿದ್ದಾರೆ. ಸರ್ಕಾರಿ ಕಾಲೇಜಿನಲ್ಲಿ ಸೀಟು ಸಿಕ್ಕರೆ ವಿದ್ಯಾಭ್ಯಾಸ ಮಾಡುವುದಾಗಿಯೂ ಹೇಳಿದ್ದಾರೆ.