ಪತ್ನಿಯ ತಲೆಯನ್ನು ಕಡಿದು ರುಂಡ ಸಮೇತ ಪೊಲೀಸರಿಗೆ ಶರಣಾದ ಪತಿರಾಯ!

ಗಂಡ ಹೆಂಡತಿ ಅಂದಮೇಲೆ ಅಲ್ಲಿ ಜಗಳ ಕಾಮನ್. ಕೆಲವೊಬ್ಬರ ಜಗಳ ‘ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ’ ಎಂಬ ಗಾದೆ ಮಾತಿನಂತೆ ಸ್ವಲ್ಪ ಹೊತ್ತಿನವರೆಗೆ ಇದ್ದು ಮತ್ತೆ ಅದೇ ಪ್ರೀತಿಯಲ್ಲಿ ಇರುತ್ತಾರೆ. ಆದರೆ, ಕೆಲವೊಬ್ಬರ ಸಂಸಾರದಲ್ಲಿ ಜಗಳ ಅತಿರೇಕಕ್ಕೆ ಹೋಗುತ್ತದೆ. ಇದಕ್ಕೆ ಉದಾಹರಣೆ ಎನ್ನುವಂತೆ ಒಡಿಶಾ ರಾಜ್ಯದಲ್ಲೊಂದು ಭೀಕರ ಘಟನೆ ನಡೆದಿದೆ.

 

ಇಲ್ಲಿ ವೃದ್ಧ ಪತಿಯೊಬ್ಬ ತನ್ನ ಹೆಂಡತಿಯ ತಲೆ ಕಡಿದು ಹಾಕಿದ್ದಾನೆ. ಸಾಲದ್ದಕ್ಕೆ ಅದನ್ನು ತೆಗೆದುಕೊಂಡು ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ತಾನೇ ಪೊಲೀಸರಿಗೆ ಶರಣಾಗಿದ್ದಾನೆ. ಈ ಘಟನೆ ಒಡಿಶಾ ರಾಜ್ಯದ ಧೆಂಕನಲ್ ಜಿಲ್ಲೆಯ ಗೋನಿಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಚಂದ್ರಶೇಖರ್‌ಪುರ ಗ್ರಾಮದ 55 ವರ್ಷದ ಆರೋಪಿ ನಕಾಫೋಡಿ ಮಾಝಿ ಎಂಬಾತ ತನ್ನ ಪತ್ನಿ, 45 ವರ್ಷದ ಸಚಲಾ ಮಾಝಿ ಎಂಬಾಕೆಯ ತಲೆಯನ್ನು ಕತ್ತರಿಸಿ, ಬರ್ಬರವಾಗಿ ಕೊಲೆ ಮಾಡಿದ್ದಾನೆ.

ನಕಾಫೋಡಿ ಮಾಝಿ ಹಾಗೂ ಸಚಲಾ ಮಾಝಿ ಮದುವೆಯಾಗಿ ಸುಮಾರು 25 ವರ್ಷಗಳು ಕಳೆದಿವೆ. ಇವರಿಗೆ ಇಬ್ಬರು ಮಕ್ಕಳೂ ಇದ್ದಾರೆ. ಅವರು ತಂದೆ ತಾಯಿಯಿಂದ ದೂರವಾಗಿ, ಗ್ರಾಮದಿಂದ ಹೊರಗೆ ಇದ್ದಾರೆ. ಮದುವೆ ಆದಾಗಿನಿಂದಲೂ ನಕಾಪೋಡಿ ಮಾಝಿಗೆ ತನ್ನ ಪತ್ನಿಯ ಶೀಲದ ಮೇಲೆ ಅನುಮಾನ ಇದ್ದು, ಇದೇ ಕಾರಣಕ್ಕೆ ಪತಿ ಮತ್ತು ಪತ್ನಿ ಮಧ್ಯೆ ಪ್ರತಿ ನಿತ್ಯ ಜಗಳ ನಡೆಯುತ್ತಿತ್ತು.

ಮೊನ್ನೆ ರಾತ್ರಿ ಮತ್ತೆ ಪತಿ ಹಾಗೂ ಪತ್ನಿ ಮಧ್ಯೆ ಜಗಳ ನಡೆದಿದ್ದು, ಕೊನೆಗೆ ವಿಪರೀತಕ್ಕೆ ಹೋಗಿ ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಬಳಿಕ ನಿನ್ನೆ ಬೆಳಗಿನ ಜಾವ 3.30 ರಿಂದ 4 ಗಂಟೆ ಸುಮಾರಿಗೆ ಪತಿ ನಾಕಾಫೋಡಿ ಹರಿತವಾದ ಆಯುಧದಿಂದ ಪತ್ನಿ ಸಚಲಾ ಮಾಝಿ ಕತ್ತು ಸೀಳಿ, ಬರ್ಬರವಾಗಿ ಕೊಂದಿದ್ದಾನೆ. ಬಳಿಕ, ಕತ್ತರಿಸಿದ ತಲೆಯೊಂದಿಗೆ ಗೊಂಡಿಯಾ ಪೊಲೀಸ್ ಠಾಣೆ ತಲುಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾರಿಯಲ್ಲಿ ಜೋರಾಂಡಾ ಔಟ್ ಪೋಸ್ಟ್ ಬಳಿ ಜಾಂಕಿರ ಗ್ರಾಮದಲ್ಲಿ ಕೆಲವರು ಆತನನ್ನು ಹಿಡಿದು ಜೋರಾಂಡಾ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಇನ್ನು ಮಾಹಿತಿ ಪಡೆದ ಜೋರಾಂಡಾ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆಯುಧ ಮತ್ತು ತಲೆಯನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೀಗ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ಆರೋಪಿ ಪತಿ ನಕಾಫೋಡಿ ಮಾಝಿಯನ್ನು ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.