100 ರೂಪಾಯಿ ಲಾಟರಿ ಟಿಕೆಟ್ ಖರೀದಿಸಿ 10 ಲಕ್ಷ ರೂ.ಬಂಪರ್ ಆಫರ್ ಗೆದ್ದ ಬಾಲಕಿ!!

ಅದೃಷ್ಟ ಎಂಬುದು ಯಾರಿಗೆ? ಹೇಗೆ? ಖುಲಾಯಿಸುತ್ತದೆ ಎಂಬುದು ಹೇಳಲಾಗುವುದಿಲ್ಲ. ಯಾಕಂದ್ರೆ, ಈ ಅದೃಷ್ಟ ಎಂಬುದು ಹೇಳಿ-ಕೇಳಿ ಬರುವುದಿಲ್ಲ. ಇಂದು ಭಿಕ್ಷೆ ಬೇಡುವವನು ನಾಳೆ ದೊಡ್ಡ ವ್ಯಕ್ತಿಯಾಗಿ ಬೆಳೆಯೋದ್ರಲ್ಲಿ ಸಂಶಯವಿಲ್ಲ. ಅದೇ ರೀತಿ ಇಲ್ಲೊಬ್ಬಳು ಹುಡುಗಿ 100 ರೂಪಾಯಿ ಲಾಟರಿ ಟಿಕೆಟ್ ಖರೀದಿಸಿ 10 ಲಕ್ಷ ರೂ. ಗೆದ್ದ ಘಟನೆ ನಡೆದಿದೆ.

ಪಂಜಾಬ್​ನ ಅಮೃತಸರದ ಬಾಲಕಿ 100 ರೂಪಾಯಿ ಲಾಟರಿ ಟಿಕೆಟ್​ಗೆ ಖರೀದಿಸಿ, ಆ ಟಿಕೆಟ್ ಗೆ 10 ಲಕ್ಷ ರೂಪಾಯಿ ಬಹುಮಾನ ಬಂದಿದೆ.ಅಮೃತಸರದ ಬಾಬಾ ಬಕಲಾ ಸಾಹಿಬ್‌ನ ನಿವಾಸಿ ಹರ್‌ಸಿಮ್ರಾನ್ ಕೌರ್ ಎಂಬ ಬಾಲಕಿಯೇ ಆ ಅದೃಷ್ಟವಂತೆ.

ಹರ್​ಸಿಮ್ರಾನ್​ ಕೌರ್​ ಅವರ ತಂದೆ ಜಮಾಲ್ ಸಿಂಗ್, ಬಾಬಾಬಕಲಾ ಸಾಹಿಬ್​ನ ರಸ್ತೆ ಬದಿ ಚಿಕ್ಕ ಅಂಗಡಿಯನ್ನು ನಡೆಸುತ್ತಿದ್ದಾರೆ. ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ತಂದೆಗೆ ನೆರವಾಗಲೆಂದು ಹರ್​ಸಿಮ್ರಾನ್​ ಅಂಗಡಿ ಬಂದಿದ್ದರು. ಈ ವೇಳೆ ಲಾಟರಿ ಮಾರಾಟ ಮಾಡುವ ವ್ಯಕ್ತಿ ಬಂದು ಲಾಟರಿ ಟಿಕೆಟ್​ ಖರೀದಿಸಲು ಕೇಳಿದ್ದಾರೆ. ಈ ವೇಳೆ ಹರ್​ಸಿಮ್ರಾನ್​ ಕೌರ್​ ಅವರ ತಂದೆ ನಿರಾಕರಿಸಿದ್ದಾರೆ. ಬಳಿಕ ಸಿಮ್ರಾನ್​ ಒತ್ತಾಯ ಮಾಡಿ 100 ರೂಪಾಯಿ ಲಾಟರಿ ಟಿಕೆಟ್​ ಖರೀದಿಸುವಂತೆ ಮಾಡಿದ್ದಾರೆ. ಬಳಿಕ ಟಿಕೆಟ್​ ಹರಿದು ನೋಡಿದಾಗ ಅದರಲ್ಲಿ 10 ಲಕ್ಷ ರೂಪಾಯಿ ಬಹುಮಾನ ಬಂದಿರುವುದು ಗೊತ್ತಾಗಿದೆ.

ಲಾಟರಿಯಲ್ಲಿ 10 ಲಕ್ಷ ರೂಪಾಯಿ ಬಂದಿದ್ದಕ್ಕೆ ಹರ್​​ಸಿಮ್ರಾನ್​ ಕೌರ್​ ಅವರ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದು, ಈ ಹಣವನ್ನು ತನ್ನ ತಂದೆಯ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ತನ್ನ ಓದಿಗೆ ಬಳಕೆ ಮಾಡಿಕೊಳ್ಳುವುದಾಗಿ ಸಿಮ್ರಾನ್​ ತಿಳಿಸಿದ್ದಾರೆ.

Leave A Reply

Your email address will not be published.