ಬಿಸಿಯೂಟ ನೀಡದೇ ಮಸಾಜ್ ಮಾಡಿಸಿದ ಶಿಕ್ಷಕರು | ವಿದ್ಯಾರ್ಥಿಗಳಿಂದ ಶಾಲೆ ಧ್ವಂಸ
ಎಲ್ಲಾ ಶಾಲೆಯಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಸರಕಾರ ಮಾಡುತ್ತಿದೆ. ಆದರೆ ಇಲ್ಲೊಂದು ಶಾಲೆಯಲ್ಲಿ ಮಕ್ಕಳಿಗೆ ಊಟ ನೀಡುವ ಸಮಯದಲ್ಲಿ ಮಸಾಜ್ ಮಾಡೋಕೆ ಶಿಕ್ಷಕರು ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೇ ಪಾಠ ಮಾಡದೇ ಮಸಾಜ್ ಮಾಡಿಸುತ್ತಾರೆ ಎಂದು ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡುತ್ತಾರೆ.
ಈ ಎಲ್ಲಾ ವಿಚಾರದಿಂದ ಕೋಪಗೊಂಡ ವಿದ್ಯಾರ್ಥಿಗಳು ಮಧ್ಯಾಹ್ನದ ಊಟದ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ಆರೋಪಿಸಿ ಗಲಾಟೆ ನಡೆಸಿ ಶಾಲೆಯ ಆಸ್ತಿಯನ್ನು ಧ್ವಂಸಗೊಳಿಸಿರುವ ಘಟನೆ ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ನಡೆದಿದೆ.
ಕತಿಹಾರ್ನ ಬರ್ಸೋಯ್ ಬ್ಲಾಕ್ನ ಬರಿಯುಲ್ ನಗರದ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ವರದಿಯಾಗಿದೆ.
ಗಲಾಟೆಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳು ಶಾಲೆಯಲ್ಲಿ ಮಧ್ಯಾಹ್ನದ ಊಟವನ್ನು ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಶಿಕ್ಷಕರು ಪಾಠ ಮಾಡುವ ಬದಲು ಮಸಾಜ್ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಗಳು ಶಾಲೆಯನ್ನು ಧ್ವಂಸಗೊಳಿಸುತ್ತಿರುವುದನ್ನು ಕಾಣಬಹುದು. ಶಾಲೆಯ ಆವರಣದಲ್ಲಿ ಗಲಾಟೆ ಸೃಷ್ಟಿಸಲು ಕೆಲ ಗ್ರಾಮಸ್ಥರು ವಿದ್ಯಾರ್ಥಿಗಳನ್ನು ಪ್ರಚೋದಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಜಿಲ್ಲಾಡಳಿತವು ಈ ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿದ್ದು ತನಿಖೆಗೆ ಆದೇಶಿಸಿದೆ.