ಕಾಣಿಯೂರು: ನದಿಗೆ ಬಿದ್ದ ಕಾರು ಪ್ರಕರಣ ! ತಡರಾತ್ರಿ ಮನೆಗೆ ಕರೆ ಮಾಡಿದ್ದ ಆ ಇಬ್ಬರು ಯುವಕರು ಗಾಬರಿಯಿಂದ ಹೇಳಿದ್ದೇನು ?!

ಕಾಣಿಯೂರು: ಇಲ್ಲಿನ ಬೈತ್ತಡ್ಕ ಮಸೀದಿ ಸಮೀಪವೇ ಹರಿಯುತ್ತಿರುವ ನದಿಯೊಂದರ ಸೇತುವೆಗೆ ಡಿಕ್ಕಿ ಹೊಡೆದು ಕಾರೊಂದು ಹೊಳೆಗೆ ಬಿದ್ದ ಘಟನೆ ಜುಲೈ 09 ರ ಮಧ್ಯರಾತ್ರಿ ನಡೆದಿದ್ದು, ಮಾರನೇ ದಿನ ಘಟನೆ ಬೆಳಕಿಗೆ ಬಂದ ಕೂಡಲೇ ಮುಳುಗಡೆಯಾದ ಕಾರಿನ ಪತ್ತೆಗಾಗಿ ಪೊಲೀಸ್, ಅಗ್ನಿಶಾಮಕ ಹಾಗೂ ಸ್ಥಳೀಯ ನುರಿತ ಈಜುಗಾರರ ತಂಡ ಕಾರ್ಯಾಚರಣೆ ಆರಂಭಿಸಿತ್ತು.ಅಂತೆಯೇ ಕಾರು ನದಿ ನೀರಿನಲ್ಲಿ ಪತ್ತೆಯಾಗಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಸುಳಿವು ಈ ವರೆಗೆ ಪತ್ತೆಯಾಗದೆ ಇರುವುದರಿಂದ ಶೋಧ ಕಾರ್ಯ ಮುಂದುವರಿದಿದೆ.

ಕಳೆದ ರಾತ್ರಿ ನಡೆದ ಘಟನೆ ಮುಂಜಾವಿನ ವೇಳೆ ಬೆಳಕಿಗೆ ಬರುತ್ತಿದ್ದಂತೆ ಮಸೀದಿಯ ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯದ ಆಧಾರದಲ್ಲಿ ಕಾರ್ಯಾಚರಣೆ ಆರಂಭಗೊಂಡಿತ್ತು.ಬಳಿಕ ಕಾರು ಬಿದ್ದ ಜಾಗದಿಂದ ಸುಮಾರು 500 ಮೀಟರ್ ದೂರದಲ್ಲಿ ಪತ್ತೆಯಾಗಿದ್ದು,ನೀರಿನ ಹರಿವಿನ ಮಟ್ಟ ಹೆಚ್ಚಿದ್ದರಿಂದ ಕಾರ್ಯಾಚರಣೆಗೆ ಕೊಂಚ ಅಡ್ಡಿಯಾಗಿತ್ತು.ಕಾರು ಪತ್ತೆಯಾಗುತ್ತಿದ್ದಂತೆ ಪೊಲೀಸರು ಕಾರಿನ ಪ್ರಯಾಣಿಕರ ಮಾಹಿತಿ ಕಲೆ ಹಾಕಿದ್ದು,ವಿಟ್ಲ ಮೂಲದವರೆನ್ನುವುದು ಖಚಿತವಾಗುತ್ತಿದ್ದಂತೆ ಮನೆಯವರನ್ನು ಸಂಪರ್ಕಿಸಲಾಗಿತ್ತು.ಅತ್ತ ಮನೆ ಮಂದಿ ನಿನ್ನೆ ರಾತ್ರಿಯಿಂದಲೇ ಗಾಬರಿಗೊಂಡಿದ್ದು,ಪೊಲೀಸರ ಬಳಿ ಆಘಾತಕಾರಿ ವಿಚಾರವೊಂದನ್ನು ತಿಳಿಸಿದ್ದು ಆ ಆಧಾರದಲ್ಲಿಯೂ ತನಿಖೆ ಜೊತೆಗೆ ಕಾರ್ಯಚರಣೆ ಮುಂದುವರಿದಿದೆ.

ನೀರುಪಾಲಾದ ಯುವಕರನ್ನು ವಿಟ್ಲ ಕುಂಡಡ್ಕ ನಿವಾಸಿ ಧನುಷ್ ಹಾಗೂ ಆತನ ಸಂಬಂಧಿ ಕನ್ಯಾನ ನಿವಾಸಿ ಧನುಷ್ ಎಂದು ಗುರುತಿಸಲಾಗಿದ್ದು,ಮನೆ ಮಂದಿಯ ಹೇಳಿಕೆಯ ಪ್ರಕಾರ ಇಬ್ಬರೂ ನಿನ್ನೆ ರಾತ್ರಿ ಸುಮಾರು 8 ಗಂಟೆಯ ಹೊತ್ತಿಗೆ ಕೆಲಸದ ನಿಮಿತ್ತ ಮನೆಯಿಂದ ಜೊತೆಯಾಗಿಯೇ ಹೊರಟು ಬಂದಿದ್ದರು. ಆ ಬಳಿಕ ರಾತ್ರಿ ಸುಮಾರು 12 ಗಂಟೆಗೆ ಮನೆಗೆ ಕರೆ ಮಾಡಿದ ಧನುಷ್ ಕಾರಿಗೆ ಲಾರಿಯೊಂದು ಡಿಕ್ಕಿಯಾಗಿ ಕಾರು ಜಖಂಗೊಂಡಿದೆ ಎಂದಿದ್ದರಂತೆ. ಇದರಿಂದ ಮನೆ ಮಂದಿ ಗಾಬರಿಗೊಂಡಿದ್ದು, ಆ ಬಳಿಕ ಇಬ್ಬರ ಮೊಬೈಲ್ ಗಳು ಸ್ವಿಚ್ ಆಫ್ ಆಗಿದ್ದರಿಂದ ಮನೆ ಮಂದಿ ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದರು.ಆದರೆ ಮುಂಜಾನೆ ವೇಳೆಗೆ ಕಾರು ಸೇತುವೆಯ ಮೇಲಿಂದ ನದಿಗೆ ಬಿದ್ದಿರುವ ಸುದ್ದಿ ತಿಳಿದ ಮನೆಯವರು ತಮ್ಮ ಮನೆ ಮಕ್ಕಳ ಪತ್ತೆಗಾಗಿ ಓಡೋಡಿ ಸ್ಥಳಕ್ಕೆ ಧಾವಿಸಿದ್ದು,ಶೋಧ ಕಾರ್ಯಾಚರಣೆಯ ಜೊತೆಗೆ ಪೊಲೀಸರ ತನಿಖೆಗೂ ಸಹಕರಿಸಿದ್ದು, ಕಾರು ಪತ್ತೆಯಾದರೂ ಈ ವರೆಗೂ ನೀರುಪಾಲಾದ ವ್ಯಕ್ತಿಗಳ ಸುಳಿವು ಸಿಕ್ಕಿರುವುದಿಲ್ಲ.

ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು, ಕಾಣಿಯೂರು ಸಮೀಪದ ಪುಂಚತ್ತಾರು ಎಂಬಲ್ಲಿ ನೈಟ್ ಬೀಟ್ ನಲ್ಲಿದ್ದ ಪೊಲೀಸರ ಮಾಹಿತಿ, ಸ್ಥಳೀಯ ಸಿಸಿ ಕ್ಯಾಮೆರಾಗಳ ಫುಟೇಜ್ ಜೊತೆಗೆ ಸಮೀಪದ ಕೆಲ ಅಸ್ಪತ್ರೆಗಳಲ್ಲೂ ವಿಚಾರಿಸಲಾಗುತ್ತಿದೆ. ಒಂದೆಡೆ ಲಾರಿ ಡಿಕ್ಕಿ ಹೊಡೆದಿದೆ ಎನ್ನುವ ಕೊನೆಯ ಮಾತಿನ ಫೋನ್ ಕರೆ, ಹಾಗೂ ಮಾರನೆಯ ದಿನ ಬೆಳಕಿಗೆ ಬಂದ ಘಟನೆ ಒಂದಕ್ಕೊಂದು ಹೋಲಿಕೆ ಆಗದಿದ್ದರೂ ಪೊಲೀಸರು ಪ್ರಕರಣವನ್ನು ಸೂಕ್ಷ್ಮ ರೀತಿಯಲ್ಲಿ ಎಲ್ಲಾ ಆಯಾಮಗಳಲ್ಲೂ ಕೈಗೊಂಡಿದ್ದು, ಕಾರ್ಯಚರಣ ಸ್ಥಳದಲ್ಲಿ ಸುಮಾರು 2000 ಕ್ಕೂ ಹೆಚ್ಚು ಜನ ಮಳೆಯ ನಡುವೆ ನಿಂತಿರುವುದು ಕಂಡುಬಂದಿದೆ.

ಸದ್ಯ ಈಡೀ ಪ್ರಕರಣದಲ್ಲಿ, ಲಾರಿ ಗುದ್ದಿ ಗಾಯಗೊಂಡಿರುವ ಸನ್ನಿವೇಶ ಎಲ್ಲೂ ಕಂಡು ಬರುತ್ತಿಲ್ಲ. ಹಾಗಾದರೆ ಮನೆಗೆ ಕರೆ ಮಾಡಿ ಹೇಳಿದ್ದು ಸುಳ್ಳಾ ? ಇದು ಆತ್ಮಹತ್ಯೆಯಾ ?ಆತ್ಮಹತ್ಯೆ ಮಾಡಿಕೊಳ್ಳುವುದಿದ್ದರೆ ಲಾರಿ ಗುದ್ದಿದ ವಿಷಯ ಹೇಳುವ ಅಗತ್ಯ ಏನಿತ್ತು ? ಅಥವಾ…. ಹೀಗೆ ಹಲವು ಆಯಾಮಗಳಲ್ಲಿ ಪೋಲೀಸರು ಯೋಚಿಸುತ್ತಿದ್ದಾರೆ. ಇಲ್ಲಿಯವರೆಗೆ ಶವಗಳು ದೊರೆಯದ ಕಾರಣ ಮನೆಯವರ ಬಳಿ ಒಂದು ಆಶಾಭಾವನೆ ಇನ್ನೂ ಜೀವಂತವಾಗಿದೆ.

1 Comment
  1. Balachandra N says

    ಇದರಲ್ಲಿ ಏನು ತನಿಖೆ ಮಾಡುವ ಅವಶ್ಯಕತೆ ಇಲ್ಲ
    ಸೇತುವೆಯಿಂದ ಕೆಳಗೆ ನೀರಿಗೆ ಬಿದ್ದಾಗ ಲಾರಿ ಗುದ್ದಿದೆ ಅಂತ ತಿಳ್ಕೊಂಡು ಫೋನ್ ಮಾಡಿರಬಹುದು. ಅಷ್ಟರಲ್ಲಿ ನೀರಲ್ಲಿ ಮುಳುಗಿದಾಗ ಎಚ್ಚೆತ್ತು ಹೊರ ಹಾರಿ ಕೊಚ್ಚಿಕೊಂಡು ಹೋಗಿರುತ್ತಾರೆ. ಎಣ್ಣೆ ಜಾಸ್ತಿ ಇದ್ದಕಾರಣ ಸೇತುವೆಗೆ ಗುದ್ದಿದ್ದು, ಲಾರಿ ಗುದ್ದಿದಂತೆ ಅನಿಸಿರಬಹುದು.

Leave A Reply

Your email address will not be published.