ಹೆತ್ತಬ್ಬೆಯ ಹೆಣವನ್ನು ಮನೆಯಲ್ಲಿರಿಸಿ ದೇವಸ್ಥಾನದಲ್ಲಿ ಮದುವೆಯಾದ ಮಗ, ಈತನ ಈ ನಿರ್ಧಾರದ ಹಿಂದಿದೆ ತಾಯಿಯ ಕನಸು
ಅಮ್ಮ ಮಗನ ಬಾಂಧವ್ಯ ಎಲ್ಲಾ ಸಂಬಂಧಗಿಂತಲೂ ಮಿಗಿಲಾದದ್ದು. ಅದೆಷ್ಟೇ ಕೋಪ, ಮನಸ್ತಾಪಗಳಿದ್ದರೂ ತಾಯಿಗೆ ಮಗನ ಮೇಲೆ ಒಂಚೂರು ಪ್ರೀತಿ ಕಡಿಮೆಯಾಗದು. ಆದರೆ, ಇಂದು ಅದೆಷ್ಟೋ ಮಕ್ಕಳು ತಮ್ಮ ಹೆತ್ತಬ್ಬೆಯನ್ನು ತಿರಸ್ಕರಿಸುವುದನ್ನು ನಾವು ನೋಡಿದ್ದೇವೆ. ಆದರೆ ಕೆಲವೊಂದು ಮಕ್ಕಳು ತಾಯಿಗೆ ತಕ್ಕ ಮಗ ಎಂಬಂತೆ ಇರುತ್ತಾರೆ. ಪ್ರತಿಯೊಬ್ಬ ತಾಯಿಗೂ ತನ್ನ ಮಗ ಅಥವಾ ಮಗಳ ಮದುವೆಯನ್ನು ಕಣ್ತುಂಬಿಕೊಳ್ಳುವ ಆಸೆ ಇದ್ದೇ ಇರುತ್ತದೆ. ಆದರೆ ಕೆಲವರ ಪಾಲಿಗೆ ಅದು ದುರಾದೃಷ್ಟವಾಗಿರುತ್ತದೆ. ಅಂತಹುದೇ ಒಂದು ಕಣ್ಣಂಚಿನಲ್ಲಿ ನೀರು ತರಿಸುವಂತಹ ಅಮ್ಮ ಮಗನ ಬಾಂಧವ್ಯದ ಘಟನೆಯಿದು..
ಹೌದು. ತನ್ನ ಮಗ ಮದುವೆಯಾಗುವುದನ್ನು ಕಣ್ಣಾರೆ ಕಣ್ತುಂಬಿಕೊಳ್ಳಬೇಕು, ತನ್ನ ಹೆಣ ಚಟ್ಟ ಏರುವ ಮೊದಲು ತನ್ನ ಮಗ ಮದುವೆಯಾಗಬೇಕು ಎಂಬ ಕನಸೊಂದನ್ನು ಕಟ್ಟಿಕೊಂಡಿದ್ದಳು ಆ ತಾಯಿ. ಆದರೆ ಅನಾರೋಗ್ಯದಿಂದ ತನ್ನ ಮಗನ ಮದುವೆಯನ್ನು ನೋಡುವ ಮೊದಲೇ ಆಕೆ ಕಣ್ಣು ಮುಚ್ಚಿಕೊಂಡಳು. ತಾಯಿಯ ಆಸೆಯನ್ನು ತನ್ನ ಎದೆಯಲ್ಲಿ ಅಚ್ಚಳಿಯಾಗಿ ಉಳಿಸಿಕೊಂಡಿರುವ ಮಗ, ತಾಯಿಯ ಆಸೆಯನ್ನು ನೆರವೇರಿಸಲು ಮುಂದಾಗುತ್ತಾನೆ.
ಎಂತಹ ಕಲ್ಲು ಹೃದಯವನ್ನೂ ಕಲ್ಲಾಗಿಸುವಂತಹ ಈ ಘಟನೆಯೊಂದು ಬಿಹಾರದ ಕೇಂದು ಆಡೀಹ್ ಠಾಣೆ ವ್ಯಾಪ್ತಿಯ ನ್ಯೂ ಮೆರಿನ್ ಗೋಪಾಲೀಚಕ್ ಪ್ರದೇಶದಲ್ಲಿ ನಡೆದಿದೆ. ತಾಯಿಯ ಆಸೆಯನ್ನು ಏನು ನೆರವೇರಿಸಲು ಹೊರಟಿರುವವನೇ, ಓಂ ಕುಮಾರ್ ಎಂಬ ಯುವಕ. ಮನಸ್ಸನ್ನು ಗಟ್ಟಿಯಾಗಿಸಿಕೊಂಡು, ತಾಯಿ ಶವವನ್ನು ಮನೆಯಲ್ಲಿ ಬಿಟ್ಟು ತಾನು ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ. ಹೌದು. ತಾಯಿ ಶವ ಮನೆಯಲ್ಲಿ ಮಗನ ವಿವಾಹ ದೇವಸ್ಥಾನದಲ್ಲಿ. ತನ್ನ ತಾಯಿಯ ಕೊನೆಯ ಆಸೆಯನ್ನು ಪೂರೈಸಲು, ತಾಯಿಯ ಶವವನ್ನು ಮನೆಯಲ್ಲೇ ಬಿಟ್ಟು ಮಗ ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ. ಮದುವೆಯ ಬಳಿಕ ಮನೆಯಲ್ಲಿದ್ದ ತಾಯಿಯ ಮೃತದೇಹದ ಪಾದ ಸ್ಪರ್ಶಿಸಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾನೆ.
ಮಾಹಿತಿಯ ಪ್ರಕಾರ, ಬಿಸಿಸಿಎಲ್ ಉದ್ಯೋಗಿ ಬೈಜನಾಥ್ ತುರಿ ಅವರ ಪುತ್ರ ಓಂ ಕುಮಾರ್ ಅವರ ವಿವಾಹವನ್ನು ಬೊಕಾರೊ ಪೆಟಾರ್ವಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಉತಾಸಾರಾ ನಿವಾಸಿ ಮನೋಜ್ ತುರಿಯ ಪುತ್ರಿ ಸರೋಜ್ ತುರಿಯೊಂದಿಗೆ ನಿಶ್ಚಯಿಸಲಾಗಿತ್ತು. ಜುಲೈ 10 ರಂದು ಇಬ್ಬರೂ ವಿಜೃಂಭಣೆಯಿಂದ ಮದುವೆಯಾಗಬೇಕಿತ್ತು. ಆದರೆ, ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಓಂ ಅವರ ತಾಯಿ ಗುರುವಾರ ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸಾವಿನ ನಂತರ ಮಗ ಓಂ ತಾಯಿಯ ಮೃತ ದೇಹವನ್ನು ಮನೆಗೆ ತಂದಿದ್ದಾನೆ. ಮೃತದೇಹವನ್ನು ಮನೆಯಲ್ಲಿಯೇ ಇಟ್ಟು ಸಮೀಪದ ಶಿವ ದೇವಸ್ಥಾನದಲ್ಲಿ ಓಂ ಸರೋಜಳನ್ನು ವಿವಾಹವಾಗಿದ್ದಾನೆ. ದೇವಸ್ಥಾನದಲ್ಲಿ ಜನಸಾಗರವೇ ನೆರೆದಿತ್ತು.
ಮದುವೆಯಾದ ನಂತರ ಓಂ ತನ್ನ ಪತ್ನಿ ಸರೋಜಳೊಂದಿಗೆ ಮನೆಗೆ ಬಂದಿದ್ದಾನೆ. ನಂತರ ಓಂ ಮತ್ತು ಪತ್ನಿ ಸರೋಜ ಮನೆಯಲ್ಲಿದ್ದ ತಾಯಿಯ ಪಾರ್ಥಿವ ಶರೀರದ ಪಾದಗಳನ್ನು ಎತ್ತಿ ತಲೆಯ ಮೇಲೆ ಇಟ್ಟು ಆಶೀರ್ವಾದ ಪಡೆದರು. ಇದರ ನಂತರ, ತೇಲಮಚ್ಚೋ ಸ್ಮಶಾನದಲ್ಲಿ ಓಂ ತನ್ನ ತಾಯಿಯ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದ್ದಾನೆ. ಕೊನೆಗೂ, ‘ಚಿತೆ ಏಳುವ ಮುನ್ನ ಮಗನ ಮದುವೆಯಾಗಬೇಕೆಂಬ’ ತನ್ನ ತಾಯಿಯ ಆಸೆಯಂತೆ ಮದುವೆಯಾಗಿ, ಅಮ್ಮನ ಆಶೀರ್ವಾದವನ್ನು ಪಡೆಯುವ ಜೊತೆಗೆ ಆಕೆಯ ಕನಸನ್ನು ನನಸು ಮಾಡುವ ಮೂಲಕ ನೆಮ್ಮದಿಯ ಅಂತಿಮಯಾತ್ರೆಯನ್ನು ನಡೆಸಿದನು.