ಜಪಾನ್ ನ ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆಗೆ ಕಾರಣ ಬಯಲು| ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಹಂತಕ
ಜಪಾನ್ ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರನ್ನು ಗಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅಷ್ಟು ಮಾತ್ರವಲ್ಲದೇ ಈ ಹತ್ಯೆಗೆ ಕಾರಣನಾದವನು ಓಡಿ ಹೋಗದೇ ಅಲ್ಲೇ ನಿಂತಿದ್ದು, ಆತನನ್ನು ಸೆರೆಹಿಡಿಯಲಾಗಿತ್ತು. ಈಗ ಆತ ಈ ಹತ್ಯೆಗೆ ಕಾರಣವೇನು ಎಂದು ಬಾಯ್ಬಿಟ್ಟಿದ್ದಾನೆ.
“ಈ ಹತ್ಯೆಗೆ, ಧಾರ್ಮಿಕ ನಾಯಕರೊಬ್ಬರ ಮೇಲೆ ತನಗೆ ಇದ್ದ ದ್ವೇಷ ಮತ್ತು ಆ ಧಾರ್ಮಿಕ ನಾಯಕರಿಗೆ ಶಿಂಜೋ ಅಬೆ ನೆರವಾಗಿದ್ದೇ” ಕಾರಣ ಎಂದು ಹಂತಕ ತೆತ್ಸುಯಾ ಯಮಗಾಮಿ ಹೇಳಿಕೆ ನೀಡಿದ್ದಾನೆ ಎಂದು ವರದಿಗಳು ತಿಳಿಸಿವೆ.
‘ನಮ್ಮ ತಾಯಿ ಧಾರ್ಮಿಕ ಸಂಘಟನೆಯೊಂದರ ಸದಸ್ಯೆಯಾಗಿದ್ದರು. ಆ ಧಾರ್ಮಿಕ ನಾಯಕ ನಮ್ಮ ತಾಯಿಯಿಂದ ದೇಣಿಗೆ ಪಡೆದು ಪಡೆದು ಅವರನ್ನು ದಿವಾಳಿ ಮಾಡಿದ್ದ. ಹೀಗಾಗಿ ಅವರನ್ನು ಹತ್ಯೆ ಮಾಡುವ ಉದ್ದೇಶ ನನಗಿತ್ತು. ಮತ್ತೊಂದೆಡೆ ಈ ಧಾರ್ಮಿಕ ಪಂಗಡ ಜಪಾನ್‌ನಲ್ಲಿ ಹೆಚ್ಚು ಪ್ರಚಾರವಾಗಲು ಅಬೆ ನೆರವಾಗಿದ್ದರು. ಈ ಕಾರಣಕ್ಕಾಗಿ ನಾನು ಅವರನ್ನು ಹತ್ಯೆ ಮಾಡಿದೆ ಎಂದು ವಿಚಾರಣೆ ವೇಳೆ ಯಾಮಗಾಮಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಆ ಧಾರ್ಮಿಕ ನಾಯಕನ ಹೆಸರು ಬಹಿರಂಗವಾಗಿಲ್ಲ.
ಈ ನಡುವೆ ಯಾಮಗಾಮಿ ಅವರ ಮನೆಗೆ ಶನಿವಾರ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಸ್ಫೋಟಕ ಪದಾರ್ಥ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳವಾರ ಅಂತಿಮ ಸಂಸ್ಕಾರ: ಶುಕ್ರವಾರ ನಡೆದ ಗುಂಡಿನ ದಾಳಿಗೆ ಬಲಿಯಾದ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ದೇಹವನ್ನು ಶನಿವಾರ ರಾಜಧಾನಿ ಟೋಕಿಯೋಗೆ ತರಲಾಗಿದ್ದು, ಮಂಗಳವಾರ ಅಂತಿಮ ಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ.
ಅಬೆ ಮೇಲೆ ದೇಶ ನಿರ್ಮಿತ ಬಂದೂಕಿನಿಂದ ದಾಳಿ ನಡೆಸಲಾಯಿತು ಮತ್ತು ಹತ್ತಿರದಿಂದಲೇ ಗುಂಡು ಹಾರಿಸಲಾಯಿತು. ನಾರಾ ಪೊಲೀಸರು ಯಮಗಾಮಿಯನ್ನು ಕೊಲೆ ಯತ್ನಕ್ಕಾಗಿ ಬಂಧಿಸಿದ್ದಾರೆ ಮತ್ತು ದಾಳಿಕೋರನು 2000 ನೇ ಇಸವಿಯಲ್ಲಿ ಮೂರು ವರ್ಷಗಳ ಕಾಲ ಸಾಗರ ಆತ್ಮರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸಿದ್ದಾನೆ ಎಂದು ವರದಿಯಾಗಿದೆ. ಪೊಲೀಸರು ದಾಳಿಕೋರನನ್ನು ವಿಚಾರಣೆ ನಡೆಸುತ್ತಿದ್ದಾರೆ ಮತ್ತು ಅವರ ಮನೆಯಿಂದ ಸ್ಫೋಟಕಗಳನ್ನು ಸಹ ವಶಪಡಿಸಿಕೊಂಡಿದ್ದಾರೆ.
ಮೊನ್ನೆ ಗುಂಡು ತಗುಲಿದ ತಕ್ಷಣ, 67 ವರ್ಷದ ಅಬೆ ಅವರನ್ನು ವಿಶೇಷ ವಿಮಾನದ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆ ಸಮಯದಲ್ಲಿ ಉಸಿರಾಡುತ್ತಿರಲಿಲ್ಲ. ವಿಶ್ವದ ಸುರಕ್ಷಿತ ದೇಶಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ಜಪಾನ್‌ನಲ್ಲಿ ನಡೆದ ದಾಳಿಯು ಆಘಾತಕಾರಿಯಾಗಿದೆ. ಏಕೆಂದರೆ ಬಂದೂಕು ನಿಯಂತ್ರಣದ ವಿರುದ್ಧ ಕಠಿಣ ಕಾನೂನುಗಳಿವೆ. ಯಾರಾದರೂ ಗ್ಯಾನ್ ಪಡೆಯಬೇಕಾದರೆ 13 ಹಂತದ ಪರೀಕ್ಷೆಗಳನ್ನು ದಾಟಿ ಹೋಗಬೇಕು. ಅವನ್ನು ದಾಟಿದ ಮೇಲೆ, ಆ ಕುಟುಂಬದ ಒಟ್ಟು ಚರಿತ್ರೆಯನ್ನು ಜಾಲಾಡಲಾಗುತ್ತದೆ. ಕ್ರಿಮಿನಲ್ ಅಂಶ ಮತ್ತು ಯಾವುದೇ ಸಣ್ಣ ಡೌಟ್ ಇದ್ದರೂ ಗ್ಯಾನ್ ಲೈಸನ್ಸ್ ಸಿಗೋದಿಲ್ಲ. ಅದಕ್ಕಾಗಿ ಜಪಾನ್ ನಲ್ಲಿ ಶಸ್ತ್ರಾಸ್ತ್ರ ಪರವಾನಗಿ ಪಡೆಯುವುದು ತುಂಬಾ ಕಷ್ಟಕರವೆಂದು ಪರಿಗಣಿಸಲಾಗಿದೆ. ದಾಳಿಯನ್ನು ಹೇಡಿತನ ಮತ್ತು ಅನಾಗರಿಕ ಎಂದು ಬಣ್ಣಿಸಿರುವ ಪಿಎಂ ಫ್ಯೂಮಿಯೊ ಕಿಶಿಡಾ, ಚುನಾವಣಾ ಪ್ರಚಾರದ ವೇಳೆ ಉಂಟಾದ ಘಟನೆಯ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದಾರೆ.