ಮಿನುಗಾರರ ಬಲೆಗೆ ಬಿದ್ದ ಅಪರೂಪದಲ್ಲಿ ಅಪರೂಪದ ನೀಲಿ ಸಿಗಡಿ

ನೀರೊಳಗಿನ ಪ್ರಪಂಚವು ಅತ್ಯಂತ ವೈವಿಧ್ಯಮಯವಾಗಿದೆ. ಹೆಚ್ಚು ಹೆಚ್ಚು ಹೊಸ ಜಾತಿಯ ಸಮುದ್ರ ಮೀನುಗಳು ಮತ್ತು ಪ್ರಾಣಿಗಳನ್ನು ನಿರಂತರವಾಗಿ ಕಂಡುಹಿಡಿಯಲಾಗುತ್ತಿದೆ. ಭೂಮಿಯ ಮೇಲೆ 30,000 ಕ್ಕೂ ಹೆಚ್ಚು ಮೀನುಗಳಿವೆ, ಮೀನುಗಾರರ ಬಲೆಗೆ ದಿನಕ್ಕೊಂದು ಎಂಬಂತೆ ವಿಚಿತ್ರ ಮೀನುಗಳು ಬೀಳುತ್ತಿದೆ.

ಸಾಮಾನ್ಯವಾಗಿ ಸಿಗಡಿಗಳು ಕೆಸರು ಮಿಶ್ರಿತ ಕಂದು ಅಥವಾ ಕೆಂಪು ಬಣ್ಣವನ್ನು ಹೊಂದಿರುತ್ತವೆ. ಆದರೆ, ಮೀನುಗಾರಿಕೆಗೆ ತೆರಳಿದ್ದ ಅಮೆರಿಕದ ಮೀನುಗಾರರೊಬ್ಬರಿಗೆ ಅತೀ ಅಪರೂಪದ ನೀಲಿ ಸಿಗಡಿ ಸೆರೆ ಸಿಕ್ಕಿದೆ. ಈ ನೀಲಿ ಸಿಗಡಿ ಅಪರೂಪದಲ್ಲಿ ಅಪರೂಪದ ಸಮುದ್ರ ಜೀವಿಯಾಗಿದ್ದು, ಎರಡು ಮಿಲಿಯನ್ ಸಿಗಡಿಗಳಲ್ಲಿ ಒಂದು ನೀಲಿ ಸಿಗಡಿ ಇರುತ್ತದೆ. ಪೋರ್ಟ್‌ಲ್ಯಾಂಡ್‌ನ ಕರಾವಳಿಯಲ್ಲಿ ಇತ್ತೀಚೆಗೆ ಈ ಅಪರೂಪದ ನೀಲಿ ಸಿಗಡಿ ಪತ್ತೆಯಾಗಿದೆ.

ಲಾರ್ಸ್-ಜೋಹಾನ್ ಲಾರ್ಸನ್ ಎಂಬುವವರು ಟ್ವಿಟ್ಟರ್‌ನಲ್ಲಿ ಈ ಅಪರೂಪದ ಸಮುದ್ರ ಜೀವಿಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಆದರೆ, ಇದನ್ನು ದೊಡ್ಡದಾಗಿ ಬೆಳೆಯುವ ಸಲುವಾಗಿ ಮತ್ತೆ ನೀರಿಗೆ ಬಿಡಲಾಗಿದೆ. ‘ಹೋ ದೇವರೆ ಇಂತಹ ಸಿಗಡಿಯನ್ನು ನಾನೆಂದೂ ನೋಡಿರಲಿಲ್ಲ. ಕೆಂಪು ಬಣ್ಣದ ಬದಲು ನೀಲಿ ಸಿಗಡಿ ಸಿಕ್ಕಿರುವುದು ಅಚ್ಚರಿ ಅಲ್ಲವೇ’ ಎಂದು ಈ ಮೀನು ನೋಡಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಮೈನೆ ವಿಶ್ವವಿದ್ಯಾನಿಲಯದ ಲಾಬ್‌ಸ್ಟರ್ ಇನ್‌ಸ್ಟಿಟ್ಯೂಟ್ ಪ್ರಕಾರ, ನೀಲಿ ಸಿಗಡಿ ಬಹಳ ಅಪರೂಪ ಮತ್ತು ಎರಡು ಮಿಲಿಯನ್‌ಗಳಲ್ಲಿ ಒಂದು ಮಾತ್ರ ಲಭ್ಯವಿರುತ್ತದೆ. ಅವುಗಳ ಬಣ್ಣವು ಕಲ್ಲಿನ ಸಮುದ್ರದ ತಳದಲ್ಲಿ ಅವುಗಳನ್ನು ಬೇರೆ ಪ್ರಾಣಿಗಳಿಂದ ಮರೆ ಮಾಚಲು ಸಹಾಯ ಮಾಡುತ್ತದೆ. ಅನುವಂಶಿಕ ಅಸಹಜತೆಯಿಂದಾಗಿ, ನೀಲಿ ಸಿಗಡಿಗಳು ತಮ್ಮ ಈ ಅಪರೂಪದ ಬಣ್ಣವನ್ನು ಪಡೆಯುತ್ತವೆ. ಅವುಗಳು ಇತರ ಸಿಗಡಿಗಳಿಗಿಂತ ಹೆಚ್ಚು ನಿರ್ದಿಷ್ಟ ಪ್ರೋಟೀನ್ ಅನ್ನು ಉತ್ಪಾದಿಸಲು ಕಾರಣವಾಗುತ್ತದೆ. ಆದರೆ ಅವುಗಳನ್ನು ಬೇಯಿಸಿದಾಗ ನೀಲಿ ಸಿಗಡಿಗಳು ಕೂಡ ಕೆಂಪು ಬಣ್ಣಕ್ಕೆ ತಿರುಗುತ್ತವೆ.

Leave A Reply

Your email address will not be published.