ಮನೆ ತೆರಿಗೆಯ ಬಗ್ಗೆ ಗೊತ್ತು, ‘ ಮೊಲೆ ‘ ತೆರಿಗೆಯ ಬಗ್ಗೆ ಕೇಳಿದ್ದೀರಾ ?

0 44

ನಾವು ಹಲವು ರೀತಿಯ ಟ್ಯಾಕ್ಸ್ ಗಳನ್ನು ಕಂಡಿದ್ದೇವೆ. ಎಷ್ಟೋ ಥರದ ತೆರಿಗೆಗಳನ್ನು ನಾನು ಖುದ್ದು ಪಾವತಿ ಕೂಡಾ ಮಾಡಿ ರಶೀದಿ ಪಡಕೊಂಡು ಆ ಚೀಟಿಯನ್ನು ಭದ್ರವಾಗಿ ಇಟ್ಟುಕೊಂಡಿದ್ದೇವೆ. ಈಗ ಇಲ್ಲದ ವ್ಯಾಟ್, ಇದೀಗ ಸಾರ್ವತ್ರಿಕವಾಗಿರುವ ಜಿಎಸ್ಟಿ, ಆದಾಯ ತೆರಿಗೆ,ಮನೆ ತೆರಿಗೆ .. ಹೀಗೆ ಹಲವು ಟ್ಯಾಕ್ಸ್ ಗಳು ನಮಗೆ ಪರಿಚಿತ. ಆದರೆ ಈ ಮನೆ ತೆರಿಗೆಯ ಥರಾನೇ, ಮೊಲೆ ತೆರಿಗೆ ಅನ್ನೋದೊಂದು ತೆರಿಗೆ ಇತ್ತು ಅಂದ್ರೆ ನಂಬೋದು ನಿಮಗೆ ಕಷ್ಟ ಆಗ್ಬೋದು. ಆದರೆ, ಇದು ನಿಜ.

ಮೊಲೆ ತೆರಿಗೆ, ಅಥವಾ ಸ್ತನ ತೆರಿಗೆ ಎಂತ ಒಂದು ಟ್ಯಾಕ್ಸ್ ಸಿಸ್ಟಮ್ ಇತ್ತು. ಟ್ಯಾಕ್ಸಿನ ಮೊತ್ತವನ್ನು ಮೊಲೆಯ ಸೈಜಿನ ಆಧಾರದ ಮೇಲೆ ನಿರ್ಧಾರ ಮಾಡಲಾಗುತ್ತಿತ್ತು. ಆ ಅಧಿಕಾರಿ ಮೊಲೆಯ ಸೈಜ್ ಗಮನಿಸಿ ಅದರ ಗಾತ್ರದ ತಕ್ಕಂತೆ ಟ್ಯಾಕ್ಸ್ ಸ್ಲಾಬ್ ನಿರ್ಧರಿಸುತ್ತಿದ್ದ. ಇಂಥಾ ತೆರಿಗೆ ಪದ್ಧತಿಯನ್ನು “ಮುಲಕ್ಕಾರಂ” ಎಂದು ಕರೆಯಲ್ಪಡುತ್ತಿದ್ದ ಮೊಲೆ-ಕರ ವನ್ನು ಜಾರಿಗೆ ತಂದವರು ಇಂದಿನ ಕೇರಳದಲ್ಲಿದ್ದ, ಹಿಂದಿನ ತಿರುವಾಂಕೂರಿನ ರಾಜರುಗಳು.

ಆಗ ಜಾತಿ ಪದ್ಧತಿ ಉತ್ತುಂಗದಲ್ಲಿದ್ದ ಸಮಯ. ಮೇಲ್ ಜಾತಿಯವರು ತಮ್ಮ ಪ್ರಾಬಲ್ಯವನ್ನು ಕೆಳವರ್ಗದ ಮೆರೆಯಲು ಮತ್ತು ಸದಾ ಕೆಳವರ್ಗದವರನ್ನು ತಮ್ಮ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಲು ಬಯಸುತ್ತಿದ್ದರು. ಅದಕ್ಕಾಗಿ, ಎದ್ದು ನಿಲ್ಲಬಹುದಾದ ಕೆಳವರ್ಗದ ಜನರ ಅಹಂಕಾರವನ್ನು ಅಲ್ಲೇ ಹೊಸಕಿ ಹಾಕಲು ಅವರಿಗೆ ಒಂದು ಐಡಿಯಾ ಬೇಕಿತ್ತು. ಆಗ ಜಾರಿಗೆ ಬಂದದ್ದೇ ಮೊಲೆ ತೆರಿಗೆ!

ಈ ಸ್ತನ ತೆರಿಗೆ ಪ್ರಕಾರ, ಕೆಳವರ್ಗದ ಜನರ ಮನೆಯ ಹೆಣ್ಣು ಮಕ್ಕಳು ಮೇಲಿನ ಬಟ್ಟೆ ಧರಿಸಬಾರದು. ಆ ಹೆಣ್ಣು ಮಕ್ಕಳು, ಮೈ ನೆರೆದ ಮೇಲೆ ಮೇಲಿನ ಬಟ್ಟೆ ಧರಿಸದೆ ಹಾಗೇ ಬಿಟ್ಟುಕೊಂಡು ಇರಬೇಕಾಗಿತ್ತು. ಒಂದು ವೇಳೆ, ಬಟ್ಟೆ ಧರಿಸುವುದಾದರೆ ಆಗ ತೆರಿಗೆ ಪಾವತಿಸಬೇಕಿತ್ತು. ಆದರೆ, ಆಗ ಕೇವಲ ಅನ್ನಾಹಾರಕ್ಕೆ ಪರದಾಡುತ್ತಿದ್ದ ಕುಟುಂಬಗಳು ತೆರಿಗೆಯನ್ನು ಪಾವತಿಸುವ ಹಾಗೇ ಇರಲಿಲ್ಲ. ಅವರ ಮನೆಯಲ್ಲಿ ಅಷ್ಟು ಬಡತನ ತಾಂಡವ ಆಡುತ್ತಿತ್ತು. ಆದರಲ್ಲಿ ತೆರಿಗೆ ಎಲ್ಲಿ ಹೇಗೆ ಪಾವತಿ ಮಾಡೋದು ? ಹಾಗಾಗಿ ಕೆಳವರ್ಗದ ಮಹಿಳೆಯರು ಬರಿದು ಎದೆಯಲ್ಲಿ ಇರಬೇಕಾದ ಅನಿವಾರ್ಯತೆ.

ಹೀಗೆಲ್ಲ ಮೊಲೆ ತೆರಿಗೆ ಎಂಬ ಅನಿಷ್ಟ ಕಟ್ಟುಪಾಡುಗಳು ಶುರುವಾದರೂ, ಈ ಕಾನೂನು ಎಲ್ಲಾ ಸಮುದಾಯದವರಿಗೂ ಇರಲಿಲ್ಲ. ಕೇವಲ ಕೆಳ ವರ್ಗದ ಮಹಿಳೆಯರು ಮಾತ್ರ ಮೊಲೆ ತೆರಿಗೆ ಪಾವತಿ ಮಾಡಬೇಕಿತ್ತು. ಮೇಲ್ವರ್ಗದ ಮಹಿಳೆಯರು ತಮ್ಮ ಎದೆ ಮುಚ್ಚಿಕೊಳ್ಳಲು ಯಾವುದೆ ಅಭ್ಯಂತರವಿರಲಿಲ್ಲ.
ಇಂತಹಾ ಪದ್ದತಿ ತುಂಬಾ ವರ್ಷಗಳ ಕಾಲ ಮುಂದುವರೆದಿತ್ತು. ಈ ಅಸಮಾನತೆಯ ಬಗ್ಗೆ ಪ್ರತಿರೋಧ ಮಾಡುವ ಶಕ್ತಿ ಮತ್ತು ಕಟು ಧೈರ್ಯ ಯಾರಿಗೂ ಇರಲಿಲ್ಲ. ಕೆಳವರ್ಗದ ದುಡಿದು ತಿನ್ನುವ ಗಂಡಸರೇ ಅಸಹಾಯಕರಾಗಿ ಪ್ರಭುತ್ವದ ಎದುರು ಸುಮ್ಮನಿರಬೇಕಾಯಿತು. ಮತ್ತೆ ಮಹಿಳೆಯರು ಏನು ತಾನೇ ಮಾಡಲು ಸಾಧ್ಯವಿತ್ತು. ಅಂತಹಾ ಸಂದರ್ಭದಲ್ಲಿ ಆ ಅವಿದ್ಯಾವಂತ ದನಿಯಿಲ್ಲದ ಗುಂಪಿನ ಮಧ್ಯದಿಂದ ದಿಡಗ್ಗನೆ ಚಿಮ್ಮಿ ನಿಂತಿದ್ದಳು. ಅವಳು ನಂಗೇಲಿ !

ನಂಗೇಲಿಯ ಕಥೆ

19 ನೆಯ ಶತಮಾನದ madyabhaaga ಅದೊಂದು ದಿನ ನಂಗೇಲಿ ಮನೆಯಲ್ಲಿದ್ದಳು. ಆಕೆ ಬಟ್ಟೆ ಪೂರ್ತಿಯಾಗಿ ಧರಿಸಿ ತನ್ನ ಪಾಡಿಗೆ ಕೆಲಸ ಮಾಡುತ್ತಿದ್ದಳು
ಅಷ್ಟರಲ್ಲಿ ಸರ್ಕಾರದ ಮೊಲೆ ತೆರಿಗೆ ಅಧಿಕಾರಿ ಮನೆಮುಂದೆ ಬಂದು ನಿಂತಿದ್ದ. ಬಟ್ಟಿ ಧರಿಸಿದ ಕಾರಣ ಆಕೆ ತೆರಿಗೆ ನೀಡಬೇಕಾಗಿತ್ತು. ಇಲ್ಲದೆ ಹೋದರೆ ಆಕೆ ಮೇಲಿನ ಬಟ್ಟೆ ಕಳಚಿ
ತನ್ನೆದೆ ಪ್ರದರ್ಶಿಸಿ, ಮುಂದಕ್ಕೆ ತಾನು ಮೇಲುವಸ್ತ್ರ ಧರಿಸದೆ ಇರುವ ಭರವಸೆ ನೀಡಬೇಕಿತ್ತು. ಅಧಿಕಾರಿಯ ಬಳಿ ಸಮಯವಿರಲಿಲ್ಲ. ಈಕೆಯ ಬಳಿ ಒಂದು ಸಣ್ಣ ಪಾವಲಿ ಕೂಡಾ ಇರಲಿಲ್ಲ. ನನ್ನಲ್ಲಿ ದುಡ್ಡಿಲ್ಲ, ನಾನು ದುಡ್ಡು ಕೊಡಲು ಅಸಮರ್ಥ ಎಂದು ಆಕೆ ಅಧಿಕಾರಿಗೆ ಹೇಳಿದಳು. ಆತ ಅದನ್ನೆಲ್ಲ ಕೇಳುವ ಆಸಾಮಿ ಅಲ್ಲ. ಅಧಿಕಾರಿ ಮುಂದೆ ದಾಷ್ಟ್ಯ ತೋರಿದರೆ ರಾಜ ಸೈನಿಕರು ಬಂದು ಎಳೆದುಕೊಂಡು ಹೋಗಿ ರಾಜನ ಮುಂದೆ ನಿಲ್ಲಿಸುತ್ತಾರೆ. ಅಲ್ಲಿ ಏನು ಬೇಕಾದರೂ ಆಗಬಹುದು. ಅಂತಹ ಸಂದರ್ಭದಲ್ಲಿ ಮನೆಯಲ್ಲಿ ನಂಗೇಲಿಯ ಗಂಡ ಇರಲಿಲ್ಲ. ಬೇರೆಲ್ಲೋ ದಿನಗೂಲಿಗೆ ಹೋಗಿದ್ದನಾತ.

ಅದೇನನ್ನಿಸಿತೋ ನಂಗೇಲಿಗೆ. ಎದ್ದು ಒಳಕ್ಕೆ ಹೋದಳು. ಮನಸ್ಸು ಗಡುಸು ಮಾಡಿಕೊಂಡಳು. ಕುಡುಗೋಲು ಎತ್ತಿಕೊಂಡಳು. ಕೈತೋಟಕ್ಕೆ ಹೋಗಿ ಒಂದು ಬಾಳೆ ಎಲೆ ಕುಯ್ದುಕೊಂಡು ಬಂದಳು. ಮೊಲಕರಿಗೆ ಸಂಗ್ರಹಿಸಲು ತಂದ ಅಧಿಕಾರಿಯ ಮುಂದೆ ಬಾಳೆ ಎಲೆ ಮಡಗಿದಳು. ಮನೆಯೊಳಕ್ಕೆ ಹೋಗಿ ಕುಡುಗೋಲಿನಿಂದ ತನ್ನ ಎರಡೂ ಮೊಲೆಗಳನ್ನು ಕುಯ್ದು ತಂದು ಅಧಿಕಾರಿ ಮುಂದೆ ಮಡಗಿದಳು. ಆ ರಕ್ತ ಸಿಕ್ತ ಸ್ಥಳಗಳನ್ನು ನೋಡಿದ ಅಧಿಕಾರಿ ಭಯದಿಂದ ಎದ್ದು ಬಿದ್ದು ಓಡಿದ್ದ. ಸುದ್ದಿ ತಿಳಿದ ಪ್ರಭುತ್ವ ಗಲಿಬಿಲಿಗೊಂಡಿತ್ತು. ಆ ಘಟನೆಯ ಬಳಿಕ ತೀವ್ರ ರಕ್ತಸ್ರಾವದಿಂದ ನಂಗೇಲಿ ಸಾವನ್ನಪ್ಪಿದ್ದಳು. ಆಕೆಯ ಶವವನ್ನು ಸುಡುವ ಸಂದರ್ಭದಲ್ಲಿ ಆಕೆಯ ಪತಿ ಚಿರ್ಕುಂದನ್ ಸಹ ಧಮನ ಮಾಡಿಕೊಂಡಿದ್ದ. ಹಾಗೆ ಅವರಿಬ್ಬರೂ ಸತ್ತ ಆ ಪ್ರದೇಶವು ಇವತ್ತಿಗೂ “ಮುಲಾಚಿಪರಂಬು”, ಅಂದರೆ “ಮಹಿಳೆಯರ ಮೊಲೆಗಳ ಭೂಮಿ” ಎಂದು ಕರೆಯಲ್ಪಡುತ್ತಿದೆ.

ಹಾಗೆ ಆತನು ಬೆಂಕಿಗೆ ಬಿದ್ದು ಸತ್ತದ್ದು ಪ್ರತಿಭಟನೆಯ ಒಂದು ಭಾಗವೇ ಅಥವಾ ಆಕೆಯ ಮೇಲಿನ ಪ್ರೇಮವೇ ಎಂಬ ಬಗ್ಗೆ ಸದ್ಯಕ್ಕೆ ಇತಿಹಾಸದಲ್ಲಿ ಅನುಮಾನಗಳಿವೆ. ಈ ಘಟನೆಯಿಂದ ವಿಚಲಿತವಾದ ರಾಜವಂಶ ನಿಧಾನವಾಗಿ ಮೊಲೆ ತೆರಿಗೆಯ ಬಿಗಿಯನ್ನು ಸಡಿಲಿಸುತ್ತಾ ಬಂತು. ನಾಡಾರ್ ಸಮುದಾಯ ಹಾಗೆ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿ ನಿಂತು ತಮ್ಮ ಹಕ್ಕುಗಳಿಗಾಗಿ ಹೋರಾಡಿದರು. ಹಾಗೂ ಮೊಲೆ ತೆರಿಗೆ ಕಾನೂನಿಗೆ ಅಂತಿಮವಾಗಿ 1924 ರಲ್ಲಿ ಸಂಪೂರ್ಣವಾಗಿ ಮೊಳೆ ಜಡಿಯಲಾಗಿ ಅದು ಸಂಪೂರ್ಣವಾಗಿ ನಿಂತುಹೋಯಿತು. ಇತಿಹಾಸದ ಒಂದು ಕಪ್ಪು ಪುಟ ಹಾಗೆ ಅಳಿಸಿಹೋಯಿತು.

Leave A Reply