ಹೆಚ್ಚಾಗುತ್ತಿರುವ ಪೆಟ್ರೋಲ್ ಬೆಲೆಗೆ ತಾಜ್ ಮಹಲ್ ಕಾರಣ !

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪೆಟ್ರೋಲ್ ಬೆಲೆಗೆ ತಾಜ್ ಮಹಲ್ ಕಾರಣವಂತೆ. ಹಾಗಂತ ಒಂದು ಹೊಸ ಕಾರಣ ಕೊಡಲಾಗಿದೆ. ಹೈದರಾಬಾದ್ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೆ ಆರೋಪಿಸಿದ್ದಾರೆ. ಸದಾ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಓವೈಸಿ, ತಾಜ್ ಮಹಲ್ ನಿರ್ಮಾಣವಾಗದೇ ಇದ್ದಿದ್ದರೆ ಇಂದು ಪೆಟ್ರೋಲ್ ಬೆಲೆ ಇಷ್ಟು ಹೆಚ್ಚಾಗುತ್ತಿರಲಿಲ್ಲ ಎಂದು ಲೇವಡಿ ಮಾಡಿದ್ದಾರೆ. ಶಹಜಹಾನ್ ತಾಜ್ ಮಹಲ್ ಕಟ್ಟದೇ ಇದ್ದಿದ್ದರೆ ಇಂದು ಪೆಟ್ರೋಲ್ ಬೆಲೆ ಲೀಟರ್ ಗೆ ₹ 40 ಇರುತ್ತಿತ್ತು ಎಂದು ಓವೈಸಿ ಹೇಳಿದ್ದಾರೆ.

ತಾಜ್ ಮಹಲ್ ನಿಂದಾಗಿ ಪೆಟ್ರೋಲ್ ದುಬಾರಿ ಹೇಗೆ ಅಂತೀರಾ ?
ದೇಶದ ಎಲ್ಲಾ ಸಮಸ್ಯೆಗಳಿಗೆ ಆಡಳಿತಾರೂಢ ಪಕ್ಷ ಮೊಘಲರು ಮತ್ತು ಮುಸ್ಲಿಮರನ್ನು ದೂಷಿಸುತ್ತಿದೆ ಎಂದು ಆರೋಪಿಸಿದ ಓವೈಸಿ, ‘ದೇಶದಲ್ಲಿ ಯುವಕರು ನಿರುದ್ಯೋಗಿಗಳಾಗಿದ್ದಾರೆ, ಹಣದುಬ್ಬರ ಹೆಚ್ಚಾಗುತ್ತಿದೆ, ಡೀಸೆಲ್ ಲೀಟರ್‌ಗೆ ₹ 102 ಕ್ಕೆ ಮಾರಾಟವಾಗುತ್ತಿದೆ, ವಾಸ್ತವದಲ್ಲಿ ಇದೆಲ್ಲವುದಕ್ಕೆ ಔರಂಗಜೇಬ್ ಕಾರಣ. ಪ್ರಧಾನಿ ನರೇಂದ್ರ ಮೋದಿ ಜವಾಬ್ದಾರರಲ್ಲ ಎಂದು ಒವೈಸಿ ಲೇವಡಿ ಮಾಡಿದ್ದಾರೆ. ‘ನಿರುದ್ಯೋಗಕ್ಕೆ ಬಾದಷಾ ಅಕ್ಬರ್ ಕಾರಣ. ಪೆಟ್ರೋಲ್ ಲೀಟರ್‌ಗೆ ₹104- ₹115 ಕ್ಕೆ ಮಾರಾಟವಾಗುತ್ತಿದ್ದು, ತಾಜ್‌ಮಹಲ್ ನಿರ್ಮಿಸಿದವರೇ ಇದಕ್ಕೆ ಕಾರಣ’ ಎಂದು ಒವೈಸಿ ವಾಗ್ದಾಳಿ ನಡೆಸಿದ್ದಾರೆ.
‘ಇಂದು ಅವರು (ಶಾಜಹಾನ್) ತಾಜ್ ಮಹಲ್ ನಿರ್ಮಿಸದೆ ಇದ್ದಿದ್ದರೆ ಪೆಟ್ರೋಲ್ 40 ರೂ.ಗೆ ಮಾರಾಟವಾಗುತ್ತಿತ್ತು. ತಾಜ್ ಮಹಲ್ ಮತ್ತು ಕೆಂಪು ಕೋಟೆಯನ್ನು ನಿರ್ಮಿಸುವ ಮೂಲಕ ಅವರು (ಶಾಜಹಾನ್) ತಪ್ಪು ಮಾಡಿದ್ದಾರೆ ಎಂದು ನಾನು ಒಪ್ಪಿಕೊಳ್ಳುತ್ತೇನೆ ಪ್ರಧಾನಿಗಳೇ. ಆ ಹಣವನ್ನು ಉಳಿಸಿಕೊಳ್ಳಬೇಕಿತ್ತು ಮತ್ತು ಅದನ್ನು 2014 ರಲ್ಲಿ ಮೋದಿಜಿ ಅವರಿಗೆ ಹಸ್ತಾಂತರಿಸಬೇಕಿತ್ತು. ಪ್ರತಿಯೊಂದು ವಿಚಾರದಲ್ಲೂ ಮುಸ್ಲಿಮರು ಜವಾಬ್ದಾರರು, ಮೊಘಲರು ಜವಾಬ್ದಾರರು ಎಂದು ಹೇಳುತ್ತಾರೆ’ ಎಂದು ಒವೈಸಿ ವಾಗ್ದಾಳಿ ನಡೆಸಿದ್ದಾರೆ.

ಭಾರತವನ್ನು ಕೇವಲ ಮೊಘಲರೆ ಆಳಿದ್ದಾರೆಯೇ?
‘ಭಾರತವನ್ನು ಮೊಘಲರು ಮಾತ್ರ ಆಳಿದ್ದಾರೆಯೇ? ಅಶೋಕ್ ಇಲ್ಲವೇ? ಚಂದ್ರಗುಪ್ತ ಮೌರ್ಯ ಆಳಲಿಲ್ಲವೇ? ಆದರೆ ಬಿಜೆಪಿಯವರು ಮೊಘಲರನ್ನು ಮಾತ್ರ ನೋಡುತ್ತದೆ. ಅವರು ಒಂದು ಕಣ್ಣಿನಿಂದ ಮೊಘಲ್, ಇನ್ನೊಂದು ಕಣ್ಣಿನಿಂದ ಪಾಕಿಸ್ತಾನವನ್ನು ನೋಡುತ್ತಾರೆ. ಭಾರತದ ಮುಸ್ಲಿಮರಿಗೂ, ಮೊಘಲರಿಗೂ, ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಓವೈಸಿ ಹೇಳಿದ್ದಾರೆ. ನಾವು ಮುಹಮ್ಮದ್ ಅಲಿ ಜಿನ್ನಾ ಅವರ ಪ್ರಸ್ತಾಪವನ್ನು ತಿರಸ್ಕರಿಸಿದ್ದೇವೆ ಮತ್ತು ಈ ವರ್ಷ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತೇವೆ. ತಮ್ಮ ಪೂರ್ವಜರು ಜಿನ್ನಾ ಪ್ರಸ್ತಾಪವನ್ನು ತಿರಸ್ಕರಿಸಿ ಭಾರತದಲ್ಲಿಯೇ ಉಳಿದುಕೊಂಡಿದ್ದರು ಎಂಬುದಕ್ಕೆ ಈ ದೇಶದ 200 ಮಿಲಿಯನ್ ಮುಸ್ಲಿಮರು ಸಾಕ್ಷಿಯಾಗಿದ್ದಾರೆ’ ಎಂದು ಒವೈಸಿ ಹೇಳಿದ್ದಾರೆ.

Leave A Reply

Your email address will not be published.