Breaking News । ಚಂದ್ರಶೇಖರ್ ಗುರೂಜಿ ಹತ್ಯಾ ಆರೋಪಿಗಳ ಕ್ಷಿಪ್ರ ಬಂಧನ !
ಹುಬ್ಬಳ್ಳಿ: ಇಂದು ನಗರದ ಖಾಸಗಿ ಹೋಟೆಲ್ ಬಳಿಯಲ್ಲಿ 40ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಂತ ಹಂತಕರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಕೊಲೆಯಾದಂತ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹತ್ಯೆ ನಡೆದ 4 ಗಂಟೆಯಲ್ಲೇ ಆರೋಪಿಗಳನ್ನು ಹೆಡೆಮುರಿ ಕಟ್ಟಿ, ರಾಮದುರ್ಗದಿಂದ ಇನ್ಸ್ಪೆಕ್ಟರ್ ಜಗದೀಶ್ ಹಂಚಿನಾಳ ಹಿಡಿದು ತಂದಿದ್ದಾರೆ. ಎಳೆದು ತಂದಿದ್ದಾರೆ ಪೊಲೀಸರು. ಪೋಲೀಸರ ಕಾರ್ಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಈ ಸಂಬಂಧ ಇಬ್ಬರು ಆರೋಪಿಗಳನ್ನು ಹುಬ್ಬಳ್ಳಿಯ ವಿದ್ಯಾನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಅಲ್ಲದೇ ಅವರನ್ನು ಹುಬ್ಬಳ್ಳಿ ಧಾರವಾಡ ಪೊಲೀಸರು ವಶಕ್ಕೆ ಪಡೆದಿರೋದಾಗಿ ತಿಳಿದು ಬಂದಿದೆ. ಬಂಧಿತರ ಬಗ್ಗೆ ಪೊಲೀಸರು ಖಚಿತ ಮಾಹಿತಿಯನ್ನು ನೀಡಬೇಕಿದೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ. ನಗರದ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಅವ್ರನ್ನ ಬರ್ಬರವಾಗಿ ಚಾಕುವಿನಿಂದ ಇರಿದು ಹತ್ಯೆಗೈಯಲಾಗಿತ್ತು.
ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, “ಕೆಲಸ ಮಾಡ್ತಿದ್ದವರೇ ಹತ್ಯೆ ಮಾಡಿರುವ ಅನುಮಾನ ಇದೆ. ಗುರೂಜಿ ಕೊಲೆ ಪೂರ್ವ ನಿಯೋಜಿತ ಕೃತ್ಯದಂತೆ ಕಾಣುತ್ತಿದೆ. ಅದೇ ಸ್ಥಳದಲ್ಲಿ ಹತ್ಯೆ ಮಾಡಲು ಸಂಚು ರೂಪಿಸಿದಂತೆ ಕಾಣುತ್ತಿದೆ. ಗುರೂಜಿ ಕೊಲೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ” ಎಂದಿದ್ದರು. ಈಗ ಆರೋಪಿಗಳ ಬಂಧನ ಆಗಿದೆ.
ಕೊಲೆ ಆರೋಪಿಗಳನ್ನು ಹಿಡಿಯಲು ಐದು ತಂಡ ರಚಿಸಲಾಗಿತ್ತು. ಆಸ್ಥೆ ವ್ಯಾಜ್ಯವೇ ಕೊಲೆಗೆ ಬಲವಾದ ಮೋಟಿವ್ ಎನ್ನುವುದು ಕಂಡು ಬಂದಿದೆ. ಜತೆಗೆ, ಇತರ ಆಯಾಮಗಳಿಂದಲೂ ತನಿಖೆ ನಡೀತಿದೆ.ಆರೋಪಿಗಳಿಬ್ಬರೂ ಕಾಲಘಟಕಿ ತಾಲೂಕಿನ ಧುಮ್ಮವಾಡಿಯವರು. ಅವರಲ್ಲಿ ಮಹಾಂತೇಶ್ ಶಿರೂರ್ ಮಾಜಿ ಉದ್ಯೋಗಿ. ಅಷ್ಟೇ ಅಲ್ಲ, ಆತನ ಪತ್ನಿ ಕೂಡಾ ಅಲ್ಲೇ ಮಾಜೀ ಉದ್ಯೋಗಿ.
ನಾಳೆ ಚಂದ್ರಶೇಖರ ಗುರೂಜಿಯವರ ಹುಬ್ಬಳ್ಳಿಯ ಹೊರವಲಯದ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ನಾಳೆ ಹುಬ್ಬಳ್ಳಿಯಲ್ಲಿ ಗುರೂಜಿ ದೇಹವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಈ ಬಗ್ಗೆ ಈಗಾಗಲೇ ಕುಟುಂಬಸ್ಥರೊಂದಿದೆ ಚರ್ಚೆ ಮಾಡಲಾಗಿದೆ. ಹುಬ್ಬಳ್ಳಿಯ ಹೊರ ವಲಯದಲ್ಲಿರುವ ತನ್ನದೇ ತಾನ ಜಮೀನಿನಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.