ಸಿಹಿ ಸುದ್ದಿ : ಈ ಕೆಲಸಕ್ಕೆ ‘ಗ್ರಾಪಂ’ಯಿಂದ ಸಿಗುತ್ತೆ ‘5 ಸಾವಿರ ಸಹಾಯಧನ’
ರಾಜ್ಯದ ಗ್ರಾಮಪಂಚಾಯ್ತಿ ನಿಧಿಯಲ್ಲಿ ಶೇ.25ಕ್ಕಿಂತ ಕಡಿಮೆ ಇರದಷ್ಟು ಮೊತ್ತವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸಬಹುದಾಗಿದೆ. ಈ ಮೊತ್ತದಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಸ್ಸಿ, ಎಸ್ಟಿ ವರ್ಗದ ಹೆಣ್ಣುಮಕ್ಕಳ ಸರಳ ಮದುವೆ, ಶವಸಂಸ್ಕಾರಕ್ಕೆ ರೂ.5,000 ಸಹಾಯಧನ ಸಿಗಲಿದೆ.
ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಜಾಯತ್ ರಾಜ್ ಇಲಾಖೆಯ ಸರ್ಕಾರ ಉಪ ಕಾರ್ಯದರ್ಶಿಗಳು ದಿನಾಂಕ 31-01-2017ರಲ್ಲಿ ಸುತ್ತೋಲೆ ಹೊರಡಿಸಿದ್ದಾರೆ. ಈ ಸುತ್ತೋಲೆಯಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 213ರಡಿ ಗ್ರಾಮ ಪಂಚಾಯ್ತಿಗಳಿಗೆ ಎಲ್ಲಾ ಮೂಲಗಳಿಂದ ಲಭ್ಯವಾಗುವ ಅನುದಾನಗಳಲ್ಲಿ ಶೇ.25ಕ್ಕಿಂತ ಕಡಿಮೆ ಇಲ್ಲದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡವರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ವಿನಿಯೋಗಿಸುವ ಬಗ್ಗೆ ಈ ಕೆಳಕಂಡಂತೆ ಮಾರ್ಗಸೂಚಿಗಳು ಹೊರಡಿಸಿದ್ದಾರೆ.
ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಹೆಣ್ಣುಮಕ್ಕಳ ಸರಳ ಮದುವೆಗೆ ರೂ.5,000 ಸಹಾಯಧನ ನೀಡಬಹುದು.
ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಸ್ಸಿ, ಎಸ್ಟಿ ವರ್ಗದವರ ಶವ ಸಂಸ್ಕಾರಕ್ಕೆ ರೂ.5,000 ಸಹಾಯಧನ ನೀಡಬಹುದು
ಮುಂದುವರೆದು ಈ ಮಾರ್ಗಸೂಚಿಗಳ ಜೊತೆಗೆ, ಗ್ರಾಮ ಪಂಚಾಯ್ತಿಗಳಲ್ಲಿ ಎಸ್ಸಿ, ಎಸ್ಟಿ ವರ್ಗದ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಮೀಸಲಿರಿಸಿರುವ ಶೇ.25ರ ಅನುದಾನವನ್ನು ಈ ಕೆಳಕಂಡ ಉದ್ದೇಶಕ್ಕೂ ಉಪಯೋಗಿಸಬಹುದಾಗಿದೆ ಎಂದಿದ್ದಾರೆ.
ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ನಿಯಮ 94ಸಿ ಹಾಗೂ ಫಾರ್ಮ್-50, 53 ಪ್ರಕರಣಗಳಲ್ಲಿ ಭರಿಸಬೇಕಾದ ವಾಸ್ತವ ಶುಲ್ಕವನ್ನು ಪಾವತಿಸುವುದು ಎಂದು ತಿಳಿಸಿದ್ದಾರೆ.