ಬಂಟ್ವಾಳ: ನೇತ್ರಾವತಿ ನದಿಗೆ ಈಜಲು ತೆರಳಿದ್ದ ಯುವಕರ ತಂಡ ನೀರುಪಾಲು!!
ಬಂಟ್ವಾಳ: ತಾಲೂಕಿನ ಪಡು ಸಜೀಪ ಗ್ರಾಮದ ತಲೆಮೊಗರು ಎಂಬಲ್ಲಿನ ನೇತ್ರಾವತಿ ನದಿಗೆ ಈಜಲು ತೆರಳಿದ್ದ ಐವರ ತಂಡವೊಂದು ನೀರುಪಾಲಾಗಿದ್ದು,ಸ್ಥಳೀಯರ ಸಮಯ ಪ್ರಜ್ಞೆಯಿಂದ ನಾಲ್ವರ ರಕ್ಷಣೆ ನಡೆದು ಓರ್ವನಿಗಾಗಿ ಶೋಧ ಮುಂದುವರಿದಿದೆ.
ನೀರುಪಾಲಾದ ಯುವಕನನ್ನು ತಲೆಮೊಗರು ನಿವಾಸಿ ರುಕ್ಮಯ್ಯ ಎಂಬವರ ಪುತ್ರ ಅಶ್ವಿತ್ (19) ಎಂದು ಗುರುತಿಸಲಾಗಿದ್ದು,ಯುವಕನ ಪತ್ತೆಗಾಗಿ ಮುಳುಗು ತಜ್ಞರ ಸಹಿತ ಅಗ್ನಿ ಶಾಮಕ ದಳ ಕಾರ್ಯಾಚರಣೆ ಪ್ರಾರಂಭಿಸಿದೆ.
ಘಟನೆ ವಿವರ:ಸ್ಥಳೀಯ ಯುವಕರಾದ ಅಶ್ವಿತ್, ಹರ್ಷಿತ್,ಲಿಖಿತ್, ವಿಕೇಶ್, ಹಾಗೂ ವಿಶಾಲ್ ಎಂಬ ಸ್ನೇಹಿತರ ತಂಡವೊಂದು ತಲೆಮಾರು ಎಂಬಲ್ಲಿ ಹರಿಯುವ ನೇತ್ರಾವತಿ ನದಿಗೆ ಈಜಾಡಲು ತೆರಳಿದ್ದರು ಎನ್ನಲಾಗಿದೆ. ಈ ಸಂದರ್ಭ ನೀರಿನ ಆಳ ಅರಿಯದ ಯುವಕರು ನೀರಿನಲ್ಲಿ ಮುಳುಗಿದ್ದಾರೆ.
ಕೂಡಲೇ ಸ್ಥಳೀಯರ ತಂಡವು ನೀರಿನಲ್ಲಿ ಮುಳುಗುತ್ತಿದ್ದ ಯುವಕರನ್ನು ರಕ್ಷಿಸಲು ಮುಂದಾಗಿದ್ದು, ನಾಲ್ವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಓರ್ವ ಯುವಕನ ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ ಸ್ಥಳಕ್ಕೆ ನುರಿತ ಈಜುಗಾರರ ತಂಡ, ಅಗ್ನಿಶಾಮಕ ದಳ ಹಾಗೂ ಬಂಟ್ವಾಳ ಠಾಣಾ ಪೊಲೀಸರು ಆಗಮಿಸಿ ಕಾರ್ಯಾಚರಣೆ ಕೈಗೊಂಡಿದ್ದು, ಓರ್ವ ಯುವಕನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಮಳೆಗಾಲದಲ್ಲಿ ಉಕ್ಕಿ ಹರಿಯುವ ನೇತ್ರಾವತಿ ನದಿಗೆ ಈಜಾಡಲು ತೆರಳುವ ವಿದ್ಯಾರ್ಥಿ ಗುಂಪುಗಳ, ಸ್ಥಳೀಯ ಯುವಕರ ತಂಡಗಳ ಬಗ್ಗೆ ನಿಗಾ ವಹಿಸಿ ಅಪಾಯ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.