2ಲಕ್ಷ ರೂ.ವರೆಗೆ ಸ್ವಯಂ ಉದ್ಯೊಗ ಸಾಲ, ಅರ್ಜಿ ಸಲ್ಲಿಸಲು ಕೊನೆ ದಿನ ಆಗಸ್ಟ್-3

ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದಿಂದ 2022-23ನೇ ಸಾಲಿನಲ್ಲಿ ವಿವಿಧ ಯೋಜನೆಯಡಿಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಸುವಿಧಾ ತಂತ್ರಾಂಶದ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.

ಸ್ವಯಂ ಉದ್ಯೊಗ ಸಾಲ ಮತ್ತು ಸಹಾಯಧನ ಯೋಜನೆ:
ಸ್ವಯಂ ಉದ್ಯೋಗ ಸಾಲ ಯೋಜನೆಯಲ್ಲಿ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಗರಿಷ್ಠ 2.ಲಕ್ಷ ರೂ.ಗಳವರೆಗೆ ಸಾಲ ಸೌಲಭ್ಯವನ್ನು ಶೇಕಡಾ 4ರ ಬಡ್ಡಿದರದಲ್ಲಿ ಒದಗಿಸಲಾಗುವುದು. ಅಲ್ಲದೆ ಘಟಕ ವೆಚ್ಚವನ್ನು 50 ಸಾವಿರ ರೂ.ಗಳಿಗೆ ಸಹಾಯಧನ ಶೇಕಡಾ 30ರಷ್ಟು ಗರಿಷ್ಠ 10 ಸಾವಿರ ರೂ.ಗಳು ಸಾಲ ಶೇಕಡಾ 70ರಷ್ಟು 40ಸಾವಿರ ರೂ.ಗಳು ಮತ್ತು 50,001 ರಿಂದ 1ಲಕ್ಷ ರೂ.ಗಳವರೆಗೆ ಶೇಕಡಾ 20ರಷ್ಟು ಸಹಾಯಧನ ಶೇಕಡಾ 80ರಷ್ಟು ಸಾಲ, 1,00,001 ರಿಂದ 2 ಲಕ್ಷ ರೂ.ಗಳ ಘಟಕಕ್ಕೆ ಕನಿಷ್ಠ 20ಸಾವಿರ ರೂ.ಗಳಿಂದ ಗರಿಷ್ಠ 30ಸಾವಿರ ರೂ.ಗಳವರೆಗೆ ಸಹಾಯಧನ ಉಳಿದ 1 ಲಕ್ಷ, 70 ಸಾವಿರ ರೂ.ಗಳ ಸಾಲ ಈ ಯೋಜನೆಯಡಿಯಲ್ಲಿ ಸೌಲಭ್ಯ ನೀಡಲಾಗುವುದು.

ಸೌಲಭ್ಯ ಪಡೆಯ ಬಯಸುವವರು ಹಿಂದುಳಿದ ವರ್ಗಗಳ ಪ್ರವರ್ಗ-1ರಲ್ಲಿ ಬರುವ ಅಲೆಮಾರಿ ಅಥವಾ ಅರೆ ಅಲೆಮಾರಿ ಜಾತಿ ಮತ್ತು ಉಪ ಜಾತಿಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ 98 ಸಾವಿರ ರೂ.ಗಳು ಪಟ್ಟಣ ಪ್ರದೇಶದವರಿಗೆ 1 ಲಕ್ಷ, 20 ಸಾವಿರ ರೂ.ಗಳ ಒಳಗಿರಬೇಕು, ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು.

ಈ ಯೋಜನೆಯಡಿಯಲ್ಲಿ ಸೌಲಭ್ಯ ಒದಗಿಸಲು ಸುವಿಧಾ ತಂತ್ರಾಂಶದಲ್ಲಿ https://suvidha.karnataka.gov.in ಆನ್‌ಲೈನ್ ಮೂಲಕ 2022ರ ಆಗಸ್ಟ್ 03ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಆಧಾರ್ ಕಾರ್ಡ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಆಧಾರ್ ಕಾರ್ಡನಲ್ಲಿರುವಂತೆ ಅರ್ಜಿದಾರರ ಹೆಸರು/ವಿಳಾಸ/ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮತ್ತು ಬ್ಯಾಂಕ್ ಪಾಸ್ ಪುಸ್ತಕಗಳಲ್ಲಿ ತಾಳೆಯಾಗಬೇಕು.

ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಸೂಚನೆ: ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಪಾವತಿಸುವಂತಿಲ್ಲ. ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಕಛೇರಿಯ ಅವಧಿಯಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ನಿಗಮದ ಸಹಾಯವಾಣಿ ಸಂಖ್ಯೆ: 080-22374832 ಮತ್ತು 9606066389 ಸಂಪರ್ಕ ಮಾಡಬಹುದಾಗಿದೆ ಎಂದು ನಿಗಮದ ರಾಯಚೂರು ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

Leave A Reply

Your email address will not be published.