ಒಂದೇ ಕುಟುಂಬದ 9 ಜನರ ಆತ್ಮಹತ್ಯೆ ಪ್ರಕರಣದ ಕಾರಣವನ್ನು ಭೇದಿಸಿದ ಪೊಲೀಸರು!!!
ಸಾಂಗ್ಲಿ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಆತ್ಮಹತ್ಯೆ ಪ್ರಕರಣವನ್ನ ಪೊಲೀಸರು ಬೇಧಿಸಿದ್ದಾರೆ. ಅದು ಸಾಮೂಹಿಕ ಕೊಲೆ ಪ್ರಕರಣವೆಂದು ತಿಳಿದು ಬಂದಿದ್ದು, ಈ ಸಂಬಂಧ ಇಬ್ಬರು ಕಿರಾತಕರನ್ನು ಪೊಲೀಸರು ಬಂಧಿಸಿದ್ದಾರೆ..
ಕಳೆದ ವಾರ ಸಾಂಗ್ಲಿ ಜಿಲ್ಲೆ ( ಮುಂಬೈ ಮಹಾರಾಷ್ಟ್ರ) ಯಲ್ಲಿ ನಡೆದ ಸಾಮೂಹಿಕ ಆತ್ಮಹತ್ಯೆ ಸಂಬಂಧ ಭಯಾನಕ ಮಾಹಿತಿಯೊಂದನ್ನು ಪೊಲೀಸರು ಕಂಡು ಹಿಡಿದಿದ್ದಾರೆ.
ಒಂದೇ ಕುಟುಂಬದ ಒಂಬತ್ತು ಸದಸ್ಯರನ್ನು ಇಬ್ಬರು ಆರೋಪಿಗಳು ಹತ್ಯೆ ಮಾಡಿದ್ದಾರೆ ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಈ ಕುಟುಂಬಕ್ಕೆ ವಿಷಪ್ರಾಶನ ಮಾಡಿಸಲಾಗಿದೆ. ಮಾಂತ್ರಿಕನೋರ್ವ ಈ ಕುಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಸೋಲಾಪುರದ ಸರ್ವದೇನಗರ ನಿವಾಸಿಯಾದ ಮಾಟಗಾರ ಅಬ್ಬಾಸ್ ಮೊಹಮ್ಮದ್ ಅಲಿ ಬಾಗವಾನ್ ( 48ವರ್ಷ) ಮತ್ತು ಆತನ ಚಾಲಕ ವಸಂತ ವಿಹಾರ್ ಧ್ಯಾನೇಶ್ವರಿಯ ನಿವಾಸಿ ಧೀರಜ್ ಚಂದ್ರಕಾಂತ್ ಸುರವೆ (39) ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸಾವಿಗೀಡಾದವರ ಮನೆಯಲ್ಲಿ ನಿಧಿ ಇದೆ ಎಂಬ ಕಾರಣವೇ ಈ ಘೋರ ದುರಂತಕ್ಕೆ ಕಾರಣವಾಗಿದೆ.
ಈ ಮೊದಲು ಆತ್ಮಹತ್ಯೆಗೆ ಶರಣಾದವರ ಕುಟುಂಬಗಳಿಗೆ ಸಾಲ ನೀಡಿದ್ದ 25 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಹಾಗೆ 13 ಮಂದಿಯನ್ನು ಬಂಧಿಸಿದ್ದರು. ಈ ಸಂಬಂಧ ಹೆಚ್ಚಿನ ತನಿಖೆ ನಡೆಸುತ್ತಿರುವಾಗಲೇ ಈ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರು ಹೇಳುವ ಪ್ರಕಾರ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಮಾಂತ್ರಿಕ ಮತ್ತು ಅವನ ಚಾಲಕನನ್ನು ಬಂಧಿಸಿದ್ದೇವೆ. ಈ ಇಬ್ಬರು ವ್ಯಕ್ತಿಗಳು ಕುಟುಂಬದ ಒಂಬತ್ತು ಸದಸ್ಯರಿಗೆ ವಿಷ ಹಾಕಿ ಕೊಂದಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಮಹಾನಿರೀಕ್ಷಕ (ಕೊಲ್ಲಾಪುರ ರೇಂಜ್) ಮನೋಜ್ ಕುಮಾರ್ ಲೋಹಿಯಾ ಮಾಹಿತಿ ನೀಡಿದ್ದಾರೆ.
ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಪೋಪಟ್ ವ್ಯಾನ್ನೋ (54), ಅವರ ಸಹೋದರ ಮತ್ತು ಪಶುವೈದ್ಯ ಡಾ. ಮಾಣಿಕ್ ವ್ಯಾಸ್ಕೋರ್ (49), ಅವರ 74 ವರ್ಷದ ತಾಯಿ, ಪತ್ನಿಯರು ಮತ್ತು ನಾಲ್ವರು ಮಕ್ಕಳು ಜೂನ್ 21ರಂದು ಸಾಂಗ್ಲಿ ಜಿಲ್ಲೆಯ ಮಹೈಸಾಲ್ ಗ್ರಾಮದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. 1.5 ಕಿ.ಮೀ ಅಂತರದಲ್ಲಿರುವ ಎರಡು ಮನೆಗಳಲ್ಲಿ ಈ ಘಟನೆ ಜರುಗಿತ್ತು.
ಆರಂಭಿಕ ತನಿಖೆಯಲ್ಲಿ ಇಬ್ಬರು ಸಹೋದರರು ವಿವಿಧ ವ್ಯಕ್ತಿಗಳಿಂದ ಸಾಲ ಪಡೆದಿದ್ದಾರೆ ಎಂಬ ಮಾಹಿತಿ ಇತ್ತು. ಹಾಗೆ ಕೆಲವರಿಂದ ಹಣವನ್ನು ಸಾಲ ಪಡೆಯಲಾಗಿದೆ. ಅದನ್ನು ಮರುಪಾವತಿಸಲು ಕಷ್ಟವಾಗುತ್ತಿದೆ ಎಂದು ಡೆತ್ ನೋಟ್ ಎಂದು ಹೇಳಲಾದ ಪತ್ರ ಸಿಕ್ಕಿತ್ತು ಎಂದು ಸಾಂಗ್ಲಿ ಪೊಲೀಸ್ ವರಿಷ್ಠಾಧಿಕಾರಿ ದೀಕ್ಷಿತ್ ಗೆಡಮ್ ಹೇಳಿದ್ದರು.