13 ವರ್ಷಗಳ ಕಾಲ ಅನಾರೋಗ್ಯ ಪೀಡಿತಳಂತೆ ನಟಿಸಿದ ಮಹಾನ್ ಕಿರಾತಕಿ, ಕೋಟಿ ಹಣ ಲಪಟಾಯಿಸಲು ಈ ರೀತಿ ಮಾಡುವುದೇ ?
ಹಣಕ್ಕೋಸ್ಕರ ಕೆಲವರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಅದಕ್ಕಾಗಿಯೇ ಗಾದೆ ಮಾತೊಂದಿದೆ. ಹಣ ಕಂಡರೆ ಹೆಣ ಕೂಡಾ ಬಾಯಿ ಬಿಡುತ್ತದೆ ಎಂದು. ಹಾಗೆಯೇ ಇಂಗ್ಲೆಂಡ್‌ನಲ್ಲಿ ಆರೋಗ್ಯವಂತ ಮಹಿಳೆಯೊಬ್ಬಳು ಹಣದ ಆಸೆಗೋಸ್ಕರ ಸುಮಾರು 13 ವರ್ಷಗಳ ಹಾಸಿಗೆ ಹಿಡಿದವಳಂತೆ ನಟಿಸಿದ್ದಾಳೆ ಎಂದರೆ ನಂಬುತ್ತೀರಾ ?
ಆದರೆ ಆಕೆಯ ಗ್ರಹಚಾರ ಕೆಟ್ಟಿತ್ತೋ ಏನೋ ಇದು ಇನ್ನಷ್ಟು ದಿನ ಮುಂದುವರಿಯದೇ ಆಕೆ ಸಿಕ್ಕಿಬಿದ್ದಿದ್ದಾಳೆ. ಅಲ್ಲದೇ ಇಷ್ಟು ದಿವಸ ಆರಾಮವಾಗಿ ಧರ್ಮದ ಹಣದಲ್ಲಿ ಶೋಕಿ ಮಾಡುತ್ತಿದ್ದ ಆಕೆ ಇನ್ನು ಮುಂದೆ ಜೈಲಿನಲ್ಲಿ ಕಳೆಯುವಂತಾಗಿದೆ. ಈ ವಂಚನೆಯೂ ಇಂಗ್ಲೆಂಡ್‌ನಲ್ಲಿ ನಡೆದ ಅತ್ಯಂತ ದೊಡ್ಡ ವಂಚನೆ ಪ್ರಕರಣಗಳಲ್ಲಿ ಒಂದಾಗಿದೆ ಎಂದು ಅಂದಾಜಿಸಲಾಗಿದೆ.
66 ವರ್ಷದ ಫ್ರಾನ್ಸಿಸ್ ನೋಬಲ್ ಎಂಬಾಕೆಯೇ ಈ ರೀತಿಯ ಮಹಾ ಮೋಸ ಮಾಡಿದ ಮಹಿಳೆ. ನಾನು ಅನಾರೋಗ್ಯೊಳಗಾಗಿದ್ದು, ಹಲವು ವರ್ಷಗಳಿಂದ ವೇತನದ ಅಗತ್ಯವಿದೆ ಎಂದು ತಮ್ಮ ಕೌನ್ಸಿಲ್‌ಗೆ ಆಕೆ ತಿಳಿಸಿದ್ದಳು. ಅದಕ್ಕಾಗಿ ಆಕೆ 13 ವರ್ಷಗಳ ಕಾಲ ಹಾಸಿಗೆ ಹಿಡಿದಂತೆ ನಟಿಸಿದ್ದಾಳೆ. ಇವಳನ್ನು ನಂಬಿದ ಕೌನ್ಸಿಲ್ ಈಕೆಗೆ 6 ಕೋಟಿ ರೂ. (£6,20,000) ಮೊತ್ತದ ನೆರವು ನೀಡಿದೆ. ಸದ್ಯ ಆಕೆಯ ವಂಚನೆ ಜಗಜಾಹೀರಾಗಿದ್ದು, ಆಕೆಗೆ ಈಗ ಜೈಲು ಶಿಕ್ಷೆ ವಿಧಿಸಲಾಗಿದೆ. ವರದಿಗಳ ಪ್ರಕಾರ, ಈಕೆ ಹೀಗೆ ಅನಾರೋಗ್ಯದ ನೆಪದಲ್ಲಿ ಬಂದ ಎಲ್ಲಾ ಹಣವನ್ನು ಅಮೆರಿಕದಲ್ಲಿ ಐಷಾರಾಮಿ ರಜಾದಿನಗಳನ್ನು ಕಳೆಯಲು ಬಳಸುತ್ತಿದ್ದಳು ಎಂದು ತಿಳಿದು ಬಂದಿದೆ.
2005 ಮತ್ತು 2018 ರ ನಡುವೆ, ಫ್ರಾನ್ಸಿಸ್ ನೋಬಲ್ ಅವರು ಹರ್ಟ್‌ಫೋರ್ಡ್‌ಶೈರ್ ಕೌಂಟಿ ಕೌನ್ಸಿಲ್‌ನಲ್ಲಿ ತಾನು ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಹೇಳಿದ್ದಾಳೆ. ಅಲ್ಲದೇ ನನಗೆ ಪ್ರತಿದಿನದ ಆರೈಕೆಯ ಅಗತ್ಯವಿದೆ ಎಂದು ಹೇಳಿದ್ದಾಳೆ. ಇವಳ ಮಾತು ನಂಬಿ ಆಕೆಗೆ ನೇರ ಪಾವತಿ ಆರೈಕೆ ಪ್ಯಾಕೇಜ್ ನೀಡಲಾಯಿತು. ಇದನ್ನು ಸಾಮಾನ್ಯವಾಗಿ ಅಂಗವಿಕಲರಿಗೆ ಅಥವಾ ಅವರ ಕುಟುಂಬ ಸದಸ್ಯರಿಗೆ ನೀಡಲಾಗುತ್ತದೆ.
ಪರಿಣಾಮ 13 ವರ್ಷಗಳ ಕಾಲ ಕೌನ್ಸಿಲ್‌ನಿಂದ ಈ ಮಹಿಳೆ ನಿಧಿಯನ್ನು ಪಡೆದಿದ್ದಾಳೆ. ವಂಚನೆ ಪತ್ತೆಯಾಗುವವರೆಗೆ ಕೌನ್ಸಿಲ್ ಈ ಮಹಿಳೆಗೆ 624,047.15 ಪೌಂಡ್ (5,99,34,873.67 ರೂಪಾಯಿ ಹಣ ನೀಡಿತ್ತು. ಮೆಟ್ರೋದ ವರದಿಯ ಪ್ರಕಾರ ಈ ಮಹಿಳೆ ತನಗೆ ಬಂದ ಹಣದಲ್ಲಿ ಸ್ವಲ್ಪ ಹಣವನ್ನು ಕೆನಡಾ ಮತ್ತು ಯುಎಸ್‌ನಲ್ಲಿ ಐಷಾರಾಮಿ ರಜಾದಿನಗಳನ್ನು ಕಳೆಯಲು ತೆರಳಿದ ಮಗಳು ಮತ್ತು ಅಳಿಯನಿಗೆ ನೀಡಿದ್ದಾರೆ.
ಈ ಘಟನೆ ಬಯಲಿಗೆ ಬಂದ ಬಗೆ ಹೇಗೆ ? ನಾಯಿಯನ್ನು ವಾಕಿಂಗ್ ಹೋಗುವುದನ್ನು ನೋಡಿದ ನೆರೆಹೊರೆಯವರಿಗೆ ಈಕೆಯ ಬಗ್ಗೆ ಅನುಮಾನ ಬಂದಿದೆ. ಅಂದಿನಿಂದ, ತನಿಖಾಧಿಕಾರಿಗಳು ಆಕೆಯ ಮೇಲೆ ನಿಗಾ ಇರಿಸಿದ್ದಾರೆ ಮತ್ತು ಈಕೆ ಸುಳ್ಳು ಹೇಳುವುದು ಎಂದು ಗೊತ್ತಾದಾಗ ಆಕೆಗೆ ಸಿಗುತ್ತಿದ್ದ ಹಣದ ಸೌಲಭ್ಯವನ್ನು ಬಂದ್ ಮಾಡಿದ್ದಾರೆ.
ಮಹಿಳೆ ನೋಬಲ್ ಮತ್ತು ಆಕೆಯ ಮಗಳು ಹಾಗೂ ಅಳಿಯ ಕೂಡ ಈ ಅತ್ಯಾಧುನಿಕ ವಂಚನೆ ಜಾಲದಲ್ಲಿ ಭಾಗಿಯಾಗಿದ್ದಾರೆ. ಯಾವುದೇ ನಾಚಿಕೆ ಇಲ್ಲದೇ ಇವರು ನಿರಂತರ ಅವಧಿಯಲ್ಲಿ ಆರೋಗ್ಯ ಮತ್ತು ಸಾಮಾಜಿಕ ಸೇವೆಗಳ ವೃತ್ತಿಪರರನ್ನು ಮೋಸಗೊಳಿಸಿದ್ದಾರೆ ಎಂದು ಹರ್ಟ್‌ಫೋರ್ಡ್ ಶೈರ್ ಕೌಂಟಿ ಕೌನ್ಸಿಲ್‌ನ ವಕ್ತಾರರು ಹೇಳಿದರು.
ವಂಚನೆ ಬಯಲಾಗುತ್ತಿದ್ದಂತೆ ಆಕೆಗೆ ನೋಟಿಸ್ ನೀಡಲಾಗಿದ್ದು, ತನ್ನ ತಪ್ಪು ಒಪ್ಪಿಕೊಂಡಿದ್ದಾಳೆ. ನ್ಯಾಯಾಧೀಶ ರಿಚರ್ಡ್ ಫೋಸ್ಟರ್ ಮಹಿಳೆಗೆ ನಾಲ್ಕು ವರ್ಷ 9 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.