26 ವರ್ಷಗಳಿಂದ ಕೊಳೆತು ಬಿದ್ದಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸೀರೆ, ಚಪ್ಪಲಿ ಹರಾಜು !??

ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಮೃತಪಟ್ಟು ಆರು ವರ್ಷವಾಗಿದೆ. ಅವರ ಅಕ್ರಮ ಆಸ್ತಿ ಜಪ್ತಿ ಮಾಡಿ 26 ವರ್ಷ ಆಗುತ್ತಿದೆ. ಕರ್ನಾಟಕದ ಖಜಾನೆಯಲ್ಲಿ ಈಗಲೂ ಸೀರೆ, ಚಪ್ಪಲಿ, ಚಿನ್ನಾಭರಣ ಸೇರಿದಂತೆ ಅನೇಕ ವಸ್ತುಗಳಿವೆ. ಈಗ ಜಯಲಲಿತಾ ಅವರ ಸೀರೆ, ಚಪ್ಪಲಿ, ಶಾಲು ಹರಾಜಿಗೆ ಇಡಬೇಕು ಎಂದು ಕರ್ನಾಟಕದ ವಕೀಲರೊಬ್ಬರು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ತಮಿಳುನಾಡಿನ ಮಾಜಿ ಸಿಎಂ ದಿವಂಗತೆ ಜಯಲಲಿತಾ ಮೃತರಾಗಿ ಇಂದಿಗೆ ಆರು ವರ್ಷ. ಮೃತರಾದ ಆರು ವರ್ಷದ ಬಳಿಕ ಅಕ್ರಮ ಆಸ್ತಿ ಗಳಿಕೆಯಲ್ಲಿ ಅವರಿಂದ ವಶಪಡಿಸಿಕೊಂಡಿದ್ದ ವಸ್ತುಗಳು ಈಗ ಚರ್ಚೆಗೆ ಬಂದಿವೆ. ಜಯಲಲಿತಾ ಅವರು 1991-96ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಅಂತ ಆರೋಪಿಸಿ ವಕೀಲ ಸುಬ್ರಮಣಿಯಮ್ ಸ್ವಾಮಿ ದೂರು ನೀಡಿದ್ದರು. ಸಿಬಿಐ 1997ರಲ್ಲಿ ಪ್ರಕರಣ ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಬಳಿಕ ಆಕ್ರಮ ಆಸ್ತಿಯನ್ನು ಜಪ್ತಿ ಮಾಡಲಾಯಿತು. ರಾಷ್ಟ್ರೀಯ ಸಂಪತ್ತು ಅಂತಾ ಘೋಷಣೆ ಮಾಡಿ ಕರ್ನಾಟಕದ ಖಜಾನೆಯಲ್ಲಿ ಇಡಲಾಯಿತು. 26 ವರ್ಷಗಳಿಂದ ಅವರ ವಸ್ತುಗಳು ಖಜಾನೆಯಲ್ಲಿ ಕೊಳೆಯುತ್ತಾ ಇದ್ದು ನಿಷ್ಪ್ರಯೋಜಕ ಆಗುವುದು ಬೇಡ, ಹರಾಜಿಗೆ ಇಟ್ಟರೆ ಅಭಿಮಾನಿಗಳು ತೆಗೆದುಕೊಳ್ಳುತ್ತಾರೆ. ಹರಾಜಿಗೆ ಇಡಲು ನಿರ್ದೇಶನ ನೀಡುವಂತೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ವಕೀಲ ನರಸಿಂಹ ಮೂರ್ತಿ ಮನವಿ ಮಾಡಿದ್ದಾರೆ.

ವಿಧಾನಸೌಧದ ಖಜಾನೆಯಲ್ಲಿ ಜಯಲಲಿತಾರ 11,344 ಸೀರೆ, 750 ಜೊತೆ ಚಪ್ಪಲಿ ಮತ್ತು 250 ಶಾಲುಗಳು 26 ವರ್ಷಗಳಿಂದ ಕೊಳೆಯುತ್ತಿವೆ. ಇದನ್ನು ಹಾಗೇ ಬಿಟ್ಟರೆ ನ್ಯಾಷನಲ್ ವೇಸ್ಟ್ ಆಗುತ್ತದೆ. ಇದನ್ನು ಹರಾಜಿಗೆ ಇಟ್ಟರೆ ಅವರ ಅಭಿಮಾನಿಗಳು ಒಂದು ಸಾವಿರ ಅಥವಾ ಹತ್ತು ಸಾವಿರ ಕೊಟ್ಟು ಕೊಂಡುಕೊಳ್ಳುತ್ತಾರೆ. ಇದರಿಂದ ಸರ್ಕಾರಕ್ಕೆ ಆದಾಯ ಬರುತ್ತದೆ. ಏಕೆಂದರೆ ಜಯಲಲಿತಾ ಅವರು ಬದುಕಿಲ್ಲ. ಕೇಸ್ ಇದ್ದರೂ ಕೂಡ ಅವರಿಲ್ಲದ ಕಾರಣ ಏನು ಆಗುವುದಿಲ್ಲ. ಅವರ ಸೀರೆ, ಚಪ್ಪಲಿ, ಶಾಲು ಹರಾಜಿಗೆ ಇಟ್ಟರೆ ಪ್ರಯೋಜನಕ್ಕೆ ಬರುತ್ತದೆ. ಹಾಗಾಗಿ ನಿರ್ದೇಶನಕ್ಕೆ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದೇನೆ. ಆದೇಶ ನೀಡಿದರೆ ಅನುಕೂಲ ಆಗುತ್ತದೆ ಎಂದು ವಕೀಲ ನರಸಿಂಹಮೂರ್ತಿ ಹೇಳಿದ್ದಾರೆ.

ಅಕ್ರಮ ಆಸ್ತಿ ಕೇಸ್ ವಿಚಾರಣೆಯನ್ನು ಹೊರ ರಾಜ್ಯದಲ್ಲಿ ಮಾಡಿಸಬೇಕು ಎಂದು ದೂರುದಾರರು ಕೋರ್ಟ್‌ನಲ್ಲಿ ಮನವಿ ಮಾಡಿದ್ದರು. ಹಾಗಾಗಿ ಕರ್ನಾಟಕ ರಾಜ್ಯದ ಖಜಾನೆಯಲ್ಲಿ ವಸ್ತುಗಳನ್ನು ಇಟ್ಟು ವಿಚಾರಣೆ ಮಾಡುತ್ತಿದ್ದರು. ವಿಚಾರಣೆ ಹಂತದಲ್ಲಿ ಇರುವಾಗಲೇ ಮೃತರಾದ ಕಾರಣ ವಸ್ತುಗಳನ್ನು ತಮಿಳುನಾಡು ಅಥವಾ ಕರ್ನಾಟಕ ಯಾವ ರಾಜ್ಯದಲ್ಲಾದರೂ ಹರಾಜಿಗೆ ಇಡಲು ಅವಕಾಶ ಮಾಡಿಕೊಡಬೇಕು. ಇದರಿಂದ ಅನುಕೂಲ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಜಯಲಲಿತಾ ಮೃತಪಟ್ಟಿದ್ದಾರೆ. 26 ವರ್ಷಗಳಿಂದ ಅವರ ವಸ್ತುಗಳು ಖಜಾನೆಯಲ್ಲಿ ಕೊಳೆಯುತ್ತಿವೆ. ನಿಷ್ಪ್ರಯೋಜಕ ಆಗದೇ ಪ್ರಯೋಜನ ಆಗಲಿ ಅಂತಾ ವಸ್ತುಗಳ ಹರಾಜಿಗೆ ವಕೀಲರು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದಾರೆ. ಈ ವಕೀಲರ ಮನವಿಯನ್ನು ಪುರಸ್ಕರಿಸಿ ಹರಾಜಿಗೆ ನಿರ್ದೇಶನ ನೀಡುತ್ತಾರಾ ಅಥವಾ ತಟಸ್ಥ ಕಾಯ್ದುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Leave A Reply

Your email address will not be published.