ವಾಹನ ಸವಾರರಿಗೆ ಗುಡ್ ನ್ಯೂಸ್!, ಇನ್ಮುಂದೆ ಈ ವಾಹನಗಳ ದಾಖಲೆಗಳನ್ನು ಮಾತ್ರ ಪರಿಶೀಲಿಸುತ್ತಾರೆ ಟ್ರಾಫಿಕ್ ಪೊಲೀಸ್
ಟ್ರಾಫಿಕ್ ಪೊಲೀಸರಿಂದಾಗಿ ಪ್ರಯಾಣ ಮಾಡಲು ಹಿಂದೆ ಮುಂದೆ ನೋಡುತ್ತಿದ್ದ ವಾಹನ ಸವಾರರಿಗೆ ರಿಲೀಫ್ ಸಿಕ್ಕಿದ್ದು, ರಸ್ತೆಯಲ್ಲಿ ಬರುವ ಎಲ್ಲ ವಾಹನಗಳನ್ನು ಅಡ್ಡಗಟ್ಟಿ ದಾಖಲೆ ಪರಿಶೀಲಿಸಬಾರದು ಎಂದು ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.
ರಸ್ತೆಯಲ್ಲಿ ಹೋಗುವ ವೇಳೆ ಟ್ರಾಫಿಕ್ ಪೊಲೀಸರು ದಾಖಲೆಗಳನ್ನು ಪರಿಶೀಲಿಸುತ್ತಿದ್ದರು. ಇದರಿಂದ ಟ್ರಾಫಿಕ್ ಜಾಮ್ ಆಗುತ್ತಿತ್ತಲ್ಲದೇ, ತುರ್ತಾಗಿ ಎಲ್ಲದರೂ ಹೋಗಬೇಕಿದ್ದವರು ತಮ್ಮ ವಾಹನ ಅಡ್ಡಗಟ್ಟಿದ ವೇಳೆ ದಾಖಲೆಗಳು ಸರಿಯಾಗಿದ್ದರೂ ಸಹ ತಮ್ಮ ಸರದಿ ಬರುವವರೆಗೂ ಕಾಯಬೇಕಾಗಿತ್ತು. ಇದರಿಂದ ರೋಸತ್ತು ಹೋಗಿದ್ದ ಸಾರ್ವಜನಿಕರು, ಉನ್ನತಾಧಿಕಾರಿಗಳಿಗೆ ಪದೇ ಪದೇ ದೂರು ಸಲ್ಲಿಸುತ್ತಿದ್ದರು.
ಇದೀಗ ಈ ಸಮಸ್ಯೆಗೆ ಅಂತ್ಯ ಹಾಡಲು ಡಿಜಿ & ಐಜಿಪಿ ಪ್ರವೀಣ್ ಸೂದ್ ಮುಂದಾಗಿದ್ದು, ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. “ಕಣ್ಣಿಗೆ ಕಾಣುವಂತಹ ತಪ್ಪುಗಳನ್ನು ವಾಹನ ಸವಾರರು ಮಾಡಿದ ವೇಳೆ ಅಂತವರನ್ನು ಹಾಗೂ ಕುಡಿದು ವಾಹನ ಚಲಾಯಿಸುವವರ ದಾಖಲೆಗಳನ್ನು ಮಾತ್ರ ಪರಿಶೀಲಿಸಬೇಕು”ಎಂದು ತಿಳಿಸಿದ್ದಾರೆ.
ಕಣ್ಣಿಗೆ ಕಾಣುವಂತಹ ತಪ್ಪು ಅಂದರೆ, ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ ಮಾಡುವವರು, ತ್ರಿಬ್ಬಲ್ ರೈಡಿಂಗ್, ಸಿಗ್ನಲ್ ಜಂಪ್ ಮಾಡುವುದು ಮೊದಲಾದ ಟ್ರಾಫಿಕ್ ನಿಮಗಳನ್ನು ಉಲ್ಲಂಘಿಸಿದ ವೇಳೆ ಮಾತ್ರ, ಅಂತಹ ವಾಹನ ಸವಾರರನ್ನು ತಡೆದು ದಾಖಲೆಗಳನ್ನು ಪರಿಶೀಲಿಸಬಹುದಾಗಿದೆ. ತಪಾಸಣೆ ಹೆಸರಲ್ಲಿ ರಸ್ತೆಯಲ್ಲಿ ಬರುವ ಎಲ್ಲ ವಾಹನಗಳನ್ನು ಅಡ್ಡಗಟ್ಟಿ ದಾಖಲೆ ಪರಿಶೀಲಿಸಲು ಇನ್ನು ಮುಂದೆ ಅವಕಾಶವಿರುವುದಿಲ್ಲ.