ಶ್ರೀಕೃಷ್ಣ ದೇಗುಲದ ಆನೆಗಳ ಉಸ್ತುವಾರಿ ವಹಿಸಿಕೊಂಡ ಮೊದಲ ಮಹಿಳೆ, ಈಕೆ 44 ಆನೆಗಳ ಬಾಸ್ ಗುರು!!!
ಗುರುವಾಯೂರು ಶ್ರೀಕೃಷ್ಣನ ಕಟ್ಟಾ ಭಕ್ತಿಯಾಗಿರುವ ಸಿಆರ್ ಲೆಜುಮೋಲ್ ಗುರುವಾಯೂರಿನ ಶ್ರೀಕೃಷ್ಣ ದೇಗುಲದ ಆನೆಗಳ ಮೇಲುಸ್ತುವಾರಿಯನ್ನು ಮೊದಲ ಬಾರಿಗೆ ವಹಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ ಈ ಜವಾಬ್ದಾರಿ ವಹಿಸಿಕೊಂಡ ಮೊದಲ ಮಹಿಳೆ ಎನ್ನುವ ಪಾತ್ರಕ್ಕೆ ಕೂಡಾ ಭಾಜನರಾಗಿದ್ದಾರೆ. ಆನೆ ಶಿಬಿರದ 47 ವರ್ಷಗಳ ಇತಿಹಾಸದಲ್ಲಿಯೇ ಲೆಜುಮೋಲ್ ಅವರು ಮೊದಲ ಮಹಿಳಾ ನಿರ್ವಾಹಕರಾಗಿದ್ದಾರೆ.
ಮಾವುತರ ಕುಟುಂಬದಲ್ಲಿ ಜನಿಸಿದ ಲೆಜುಮೋಲ್ ಅವರು ಬಾಲ್ಯವು ಆನೆಗಳ ಜೊತೆನೇ ಕಳೆದಿದ್ದಾರೆ. ಆನೆಗಳ ಮೇಲುಸ್ತುವಾರಿ ನೋಡಿಕೊಳ್ಳುವ ಯೋಗ ಬಂದಿದ್ದು, ಇದು ಭಗವಂತನ ಆಶೀರ್ವಾದ ಎಂದು ಗುರುವಾಯೂರ್ ದೇವಸ್ಥಾನದ ಪುನ್ನತ್ತೂರು ಕೊಟ್ಟಾದ ಉಸ್ತುವಾರಿ ವಹಿಸಿಕೊಂಡ ನಂತರ ಲೆಜುಮೋಲ್ ಹೇಳಿದ್ದಾರೆ.
ಪುನ್ನತ್ತೂರು ಕೊಟ್ಟಾ ಆನೆ ಶಿಬಿರವೂ 44 ಆನೆಗಳನ್ನು ಹೊಂದಿದೆ. ಇವುಗಳೆಲ್ಲ ವಿವಿಧ ಕಾಲದಲ್ಲಿ ಭಕ್ತರು ದಾನವಾಗಿ ನೀಡಿದ್ದಾರೆ. ಲೆಜುಮೋಲ್ ಆನೆಗಳ ಪಾಲನೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಪುನ್ನತ್ತೂರು ಕೊಟ್ಟಾ ಸ್ಥಳೀಯ ಆಡಳಿತಗಾರರ ಒಡೆತನದ ಕೋಟೆಯಾಗಿದ್ದು, ದೇವಾಲಯದ ಆನೆಗಳನ್ನು ಇರಿಸಿಕೊಳ್ಳಲು ಗುರುವಾಯೂರ್ ದೇವಸ್ವಂ 1975 ರಲ್ಲಿ ಇದನ್ನು ಖರೀದಿಸಿತು. ಈ ಶಿಬಿರವು 10 ಎಕರೆಗಳಷ್ಟು ವಿಸ್ತಾರವಾದ ಹಸಿರು ಪ್ರದೇಶವನ್ನು ಹೊಂದಿದೆ.
1996ರಲ್ಲಿ ಗುರುವಾಯೂರು ದೇವಸ್ವಂನಲ್ಲಿ ಲೋವರ್ ಡಿವಿಷನ್ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿದ್ದ ಲೆಜುಮೋಳ್ ನಂತರ ಕಾಮಗಾರಿ ವಿಭಾಗದಲ್ಲಿ ಸಹಾಯಕ ವ್ಯವಸ್ಥಾಪಕರಾಗಿದ್ದರು. ಇಲ್ಲಿ 44 ಆನೆಗಳಿದ್ದು, ಮಾವುತರು ಸೇರಿದಂತೆ 150 ಸಿಬ್ಬಂದಿ ಇದ್ದಾರೆ. ಆನೆಗಳಿಗೆ ತಾಳೆ ಎಲೆ, ಹುಲ್ಲು, ಬಾಳೆ ಕಾಂಡ ಪೂರೈಕೆಗೆ ದೇವಸ್ವಂ ಗುತ್ತಿಗೆ ನೀಡಿದೆ. ಪ್ರತಿ ಆನೆಗೆ ಆಹಾರದ ಪ್ರಮಾಣವನ್ನು ಪಶುವೈದ್ಯರು ನಿರ್ಧರಿಸುತ್ತಾರೆ. ಮುಂದಿನ ತಿಂಗಳು ಆನೆಗಳಿಗೆ ಆಯುರ್ವೇದ ನವ ಯೌವನ ಪಡೆಯುವ ಚಿಕಿತ್ಸೆ ನೀಡಲಾಗುವುದು ಎಂದು ಲೆಜುಮೋಲ್ ಹೇಳಿದ್ದಾರೆ.
ಲೆಜುಮೋಲ್ ಅವರ ಮಕ್ಕಳಾದ ಅಕ್ಷಯ್ ಕೃಷ್ಣನ್ ಮತ್ತು ಅನಂತಕೃಷ್ಣನ್ ಕೂಡ ತಮ್ಮ ತಾಯಿಯ ಹೊಸ ಕೆಲಸದ ಬಗ್ಗೆ ಬಹಳ ಕುತೂಹಲ ಹೊಂದಿದ್ದಾರೆ.