ಕಡಬ : ನೆಲ್ಯಾಡಿಯ ಶಿಕ್ಷಕಿಯೊಬ್ಬರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ.ಡ್ರಾ ಮಾಡಿಕೊಂಡ ವಂಚಕರು!
ಕಡಬ : ತಾಲೂಕಿನ ನೆಲ್ಯಾಡಿ ಗ್ರಾಮ ಮಾದೇರಿ ನಿವಾಸಿಯೊಬ್ಬರ ಬ್ಯಾಂಕ್ ಖಾತೆಯಿಂದ ಅಪರಿಚಿತರು ಲೋನ್ ತೆಗೆದು ವಂಚಿಸಿದ ಘಟನೆ ನಡೆದಿದೆ.
ಬಿಳಿಯೂರುಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಜಿಲಾ ಎಂಬುವವರು ವಂಚನೆಗೆ ಒಳಗಾದವರಾಗಿದ್ದು, ಬ್ಯಾಂಕ್ ಅಕೌಂಟ್ ಖಾತೆಯಿಂದ 7,47,080 ರೂ. ಗಳನ್ನು ಡ್ರಾ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾ ಸೈಬರ್ ಕ್ರೈಂ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಘಟನೆ:
ಶಿಕ್ಷಕಿ ಸಜಿಲಾ ಅವರ ಮಗನ ದೂರವಾಣಿ ಸಂಖ್ಯೆಗೆ ಎಟಿಎಂ ಕಾರ್ಡ್ ಬ್ಲಾಕ್ ಆಗಿರುವ ಬಗ್ಗೆ ಮೆಸೇಜ್ ಬಂದಿದ್ದು, ನಂತರ ಒಂದು ದೂರವಾಣಿ ನಂಬರಿನಿಂದ ಕೆವೈಸಿ ಅಪೇಟ್ ಮಾಡಲು ಕಸ್ಟಮರ್ ಕೇರ್ ನಂಬರೊಂದಕ್ಕೆ ಕರೆ ಮಾಡುವಂತೆ ಮೆಸೇಜ್ ಬಂದಿರುತ್ತದೆ. ಅದಕ್ಕೆ ಸಜಿಲಾರವರ ಮಗ ಕರೆ ಮಾಡಿ ಮಾತನಾಡಿದ್ದಾನೆ.
ಖಾತೆಯ ಪಿನ್ ಜನರೇಟ್ ಮಾಡಲು ಮನೆಯಲ್ಲಿರುವ ಇನ್ನೊಬ್ಬರ SBI ಖಾತೆ ನಂಬರ್ ಹಾಗೂ ಮೊಬೈಲ್ ನಂಬರ್ ನೀಡಲು ತಿಳಿಸಿರುದ್ದಾರೆ. ಅದಕ್ಕೆ ಅವನು ತನ್ನ ತಾಯಿ ಸಜಿಲಾರವರ SBI ಖಾತೆ ಸಂಖ್ಯೆ, ಹಾಗೂ ಮೊಬೈಲ್ ನಂಬರ್ ನೀಡಿರುತ್ತಾನೆ. ನಂತರ ಅದೇ
ದಿನ ಅಪರಿಚಿತ ವ್ಯಕ್ತಿಯ ಮೊಬೈಲ್ ನಂಬರ್ನಿಂದ ಆತನಿಗೆ ಕಾಲ್ ಬಂದಿದ್ದು, ಸಜಿಲಾರವರ ನಂಬರ್ಗೆ ಬಂದಿರುವ ಒಟಿಪಿ ಕೇಳಿದ್ದಾನೆ. ತಾಯಿಯ ಮೊಬೈಲ್ ಗೆ ಬಂದ ಒಟಿಪಿಯನ್ನು ಆತ ನೀಡಿರುತ್ತಾನೆ.
ಬಳಿಕ ಆ ಅಪರಿಚಿತರು ಹೇಳಿದ ಪ್ರಕಾರ ಸಜಿಲಾರ ಪುತ್ರ ಎಟಿಎಂ ಕೇಂದ್ರಕ್ಕೆ ಹೋಗಿ ಅವರು ಹೇಳಿದ ಪ್ರಕಾರ ನಿರ್ವಹಿಸಿದ್ದಾನೆ. ಇದೆಲ್ಲ ನಡೆದ ಬಳಿಕ ಬ್ಯಾಂಕಿನಿಂದ ಸಜಿಲಾರಿಗೆ ಕರೆ ಬಂದಿದ್ದು, ನೀವು ಮೊಬೈಲ್ ನಂಬರ್ ಬದಲಾಯಿಸಿದ್ದೀರಾ ಎಂದು ವಿಚಾರಿಸಿದ್ದಾರೆ. ಅವರು ಇಲ್ಲವೆಂದು ಉತ್ತರಿಸಿದ್ದು, ಗಾಬರಿಗೊಂಡು ಬ್ಯಾಂಕಿಗೆ
ತೆರಳಿ ವಿಚಾರಿಸಿದಾಗ ಅವರ ಖಾತೆಯಿಂದ ಹಂತ ಹಂತವಾಗಿ ಒಟ್ಟು 7,47,080 ರೂ. ಡ್ರಾ ಮಾಡಿರುವುದು ಬೆಳಕಿಗೆ ಬಂದಿದೆ.
ಆತಂಕದಿಂದ ಅವರು ಇದು ಹೇಗಾಯಿತೆಂದು ವಿಚಾರಿಸಿದಾಗ ಸಜಿಲಾರವರ ಖಾತೆಯಿಂದ 8,00,000 ರೂ.ಲೋನ್ ತೆಗೆಯಲಾಗಿದೆ. ಮತ್ತು ಅದರಿಂದ ಡ್ರಾ ಮಾಡಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ಇದು ಹೇಗೆ ಸಾಧ್ಯವಾಯಿತು? ಎಂಬ ಗೊಂದಲದಲ್ಲೇ ಶಿಕ್ಷಕಿ, ವಂಚಿಸಿ ಮೋಸ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಕರಣ ದಾಖಲಿಸಿದ್ದಾರೆ. ಇದರ ಹಿಂದಿನ ಕೈಗಳು, ಅವರ ಉದ್ದೇಶ ನಿಗೂಢವಾಗಿದ್ದು
ಪೊಲೀಸರು ತನಿಖೆ ನಡೆಸುತ್ತಿದ್ದಾರೆ.