83ನೇ ವಯಸ್ಸಿನಲ್ಲಿ ತಂದೆಯಾದ ವೃದ್ಧ; ಹಾಗಿದ್ರೆ ಮಗುವಿನ ಅಮ್ಮನ ವಯಸ್ಸು!?
ಹುಟ್ಟು ಸಾವು ಎಂಬುದು ಭಗವಂತನ ಲೀಲೆ. ಅದರ ನಡುವೆ ನಾವು ಏನು ಮಾಡುತ್ತೇವೆ ಅದರ ಮೇಲೆ ಜೀವನ ನಿಂತಿದೆ. ಹೀಗಾಗಿ, ಒಬ್ಬ ಮನುಷ್ಯ ಇಂದು ಇರುವ ರೀತಿ ನಾಳೆ ಇರಲಾರ. ಯಾಕಂದ್ರೆ ನಾಳೆ ಎಂಬುದು ನಿರೀಕ್ಷೆಯ ಮೆಟ್ಟಿಲಷ್ಟೇ. ನಾವು ಹೇಳಲು ಹೊರಟಿರೋ ಈ ವ್ಯಕ್ತಿಯ ಜೀವನಾನು ಕೂಡಾ ಅಷ್ಟೇ. ಬದುಕಿನ ಆದಮ್ಯ ಉತ್ಸಾಹದ ಈ ಚಿರ ಯುವಕ ಯಾಕೆ ಸುದ್ದಿಯಲ್ಲಿದ್ದಾರೆ ಎಂಬುದನ್ನು ಮುಂದೆ ಓದಿ
ಇಲ್ಲೊಂದು ಕಡೆ 83ನೇ ವಯಸ್ಸಿನಲ್ಲಿ ವೃದ್ಧರೊಬ್ಬರು ತಂದೆಯಾಗಿರುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಬದುಕು ಇವರದು ಅಂದಮೇಲೆ ಇನ್ನೊಬ್ಬರಿಗಾಗಿ ಸಂಕೋಚ ಏಕೆ? ತನ್ನ ಬದುಕನ್ನು ಆನಂದಿಸೋದೊಂದೇ ಇವರ ಉದ್ದೇಶ. ಅಂದ ಹಾಗೆ, ಈ ವೃದ್ಧನಿಗೆ ಇಷ್ಟು ವಯಸ್ಸಾದಾಗ ಮಗುವಿನ ತಾಯಿಗೆ ಎಷ್ಟಾಗಿರಬಹುದು ಎಂಬ ಪ್ರಶ್ನೆಯಲ್ಲಿ ನೀವಿದ್ದೀರಲ್ಲ. ಆದ್ರೆ ನೀವು ಅಂದುಕೊಂಡ ರೀತಿ ಆಕೆ ಚರ್ಮ ಸುಕ್ಕುಗಟ್ಟಿ, ಕೂದಲೆಲ್ಲ ಬೆಳ್ಳಗೆ ಆಗಿರುವುದು ಮುದಿ ಅಲ್ಲ. ಬದಲಿಗೆ 35 ವರ್ಷದ ಯುವತರುಣಿ.
‘ನಾನು ತಂದೆಯಾಗಿದ್ದೇನೆ’ ಎಂದು ಸ್ವತಃ ಆ ವ್ಯಕ್ತಿಯೇ ಬಹಿರಂಗಪಡಿಸಿದ್ದಾರೆ. ಅವರ ಹೆಸರು ಆಲ್ಬರ್ಟೊ ಕಾರ್ಮಿಲಿಯಟ್. ವೃತ್ತಿಯಲ್ಲಿ ಅವರು ಪೌಷ್ಠಿಕಾಂಶ ತಜ್ಞರು. ಮರಕ್ಕೆ ಮುಪ್ಪಾಗಿದ್ದರೂ ಮರ ಹುಣಿಸೆಕಾಯಿ ಬಿಡುವುದನ್ನು ಮರೆತಿಲ್ಲ. ಇವರು 35 ವರ್ಷದ ಹುಡುಗಿಯನ್ನು 2ನೇ ಮದುವೆಯಾಗಿದ್ದು, ಈಗ ತನ್ನ 83ನೇ ವಯಸ್ಸಿಗೆ ತಂದೆಯಾಗಿದ್ದಾರೆ. ಪತ್ನಿಯ ಹೆಸರು ಎಸ್ಟೆಫಾನಿಯಾ ಪಾಸ್ಕಿನಿ. ಫರ್ಟಿಲಿಟಿ ಚಿಕಿತ್ಸೆಯ ಬಳಿಕ ಎಸ್ಟೇಫಾನಿಯಾ ಗರ್ಭಿಣಿಯಾದಳು ಎಂದು ಹೇಳಿದ್ದಾರೆ.
ತಮಗೆ ತೀರಾ ವಯಸ್ಸಾಗಿದೆ ಎನ್ನುವ ವಿಚಾರ ಆಲ್ಬರ್ಟೋ ಅವರಿಗೂ ಗೊತ್ತಿದೆ. ಹಾಗಿದ್ದರೂ, ಬದುಕಿದ್ದಷ್ಟು ದಿನ ಮಗ ಎಮಿಲಿಯೋನನ್ನು ಚೆನ್ನಾಗಿ ಸುಖವಾಗಿ ಬೆಳೆಸುತ್ತೇನೆ. ಆ ವಿಶ್ವಾಸ ನನ್ನಲ್ಲಿದೆ ಎಂದು ಹೇಳಿದ್ದಾರೆ. “ಜೀವನ ಎನ್ನುವುದು ಯಾರಿಗೂ ಅನಂತವಲ್ಲ. ನಾನೇನು ವಿಶೇಷ ವ್ಯಕ್ತಿಯೂ ಅಲ್ಲ ಎನ್ನುವುದು ನನಗೆ ಚೆನ್ನಾಗಿ ತಿಳಿದಿದೆ. ಆದರೆ ಇದು ಪುಟ್ಟ ಮಗು. ನಾನು ಇರುವವರೆಗೂ ಆತನೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತೇನೆ’ ಎಂದು ಸಂತಸದಿಂದಲೇ ಹೇಳುತ್ತಾರೆ.
‘ಇವನ ಕಾರಣದಿಂದಾಗಿ ನಾನು ಈ ವಯಸ್ಸಿನಲ್ಲಿಯೂ ಪ್ರತಿದಿನವನ್ನೂ ಪೂರ್ಣವಾಗಿ ಆನಂದಿಸುತ್ತಿದ್ದೇನೆ. ಜೀವನದ ಅಲ್ಪಾವಧಿಯ ಯೋಜನೆಗಳನ್ನೂ ಮಾಡುತ್ತಿದ್ದೇನೆ ಎನ್ನುತ್ತಾರೆ. ಈಗಾಗಲೇ ನಾನು ಭವಿಷ್ಯದ ಬಗ್ಗೆ ಯೋಚಿಸಿದ್ದೇನೆ. ಮುಂದೆ ಇವರಿಬ್ಬರೇ ಜೀವನದ ಹೆಚ್ಚಿನ ಸಮಯ ಕಳೆಯಬೇಕು ಎನ್ನುವುದು ನನಗೆ ಗೊತ್ತು. ಆದರೆ ಎಮಿಲಿಯೋಗೆ ತನ್ನ ತಂದೆ ಯಾರು ಅವರ ಧ್ವನಿ ಹೇಗಿತ್ತು ಎನ್ನುವುದು ಗೊತ್ತಾಗಬೇಕಲ್ಲ. ಅದಕ್ಕಾಗಿ ಜೀವನದ ವಿಶೇಷ ಕ್ಷಣಗಳ ವಿಡಿಯೋ ಹಾಗೂ ಆಡಿಯೋ ರೆಕಾರ್ಡ್ ಮಾಡುತ್ತೇವೆ’ ಎಂದು ಆಲ್ಬರ್ಟೋ ಹೇಳುತ್ತಾರೆ.
ನಾನು ಈ ಭೂಮಿಯ ಮೇಲೆ ಇಲ್ಲದೇ ಇದ್ದಾಗ ಅವನು ಇವುಗಳನ್ನು ಕೇಳಬಹುದು. ಅವನಿಗಿನ್ನೂ ಒಂದು ವರ್ಷ, ಹಾಗಿದ್ದರೂ ಆತನಿಗೆ ಒಂದು ಫೋನ್ ಇದೆ. ಅದರಲ್ಲಿ ವ್ಯಾಟ್ಸ್ ಆಪ್ ಇದೆ. ಅದರಲ್ಲಿ ಅವನೂ ಕೂಡ ಆಡಿಯೋ ಸಂದೇಶಗಳನ್ನು ರೆಕಾರ್ಡ್ ಮಾಡುತ್ತಾನೆ. ವಿಡಿಯೋ ಸಂದೇಶಗಳನ್ನು ಕಳಿಹಿಸುತ್ತಾನೆ. ಇದೆಲ್ಲವನ್ನು ನಾನು ಸ್ಟೋರ್ ಮಾಡಿ ಇಡುತ್ತಿದ್ದೇನೆ. ಅದರೊಂದಿಗೆ ನಾನು ಮಾಡಿರುವ ವಿಡಿಯೋ ಹಾಗೂ ಆಡಿಯೋ ರೆಕಾರ್ಡ್‌ಗಳೂ ಇರುತ್ತವೆ. ಭವಿಷ್ಯದಲ್ಲಿ ಆತನಿಗೆ ಇವುಗಳ ಮೂಲಕವೇ ನಾನು ಜೊತೆಯಾಗಿರುತ್ತೇನೆ ಎನ್ನುತ್ತಾರೆ.
ಇದರ ನಡುವೆ ಚಿಕ್ಕ ಮಗುವಿಗೆ ಚೈನೀಸ್ ಭಾಷೆಯನ್ನು ಕಲಿಸಲು ಶಿಕ್ಷಕರನ್ನೂ ನೇಮಕ ಮಾಡಿಕೊಂಡಿದ್ದಾರೆ. ಚೈನೀಸ್ ಎನ್ನುವುದು ಭವಿಷ್ಯದ ಭಾಷೆ. ಅದರಲ್ಲಿ ಆತ ಹಿಂದುಳಿಯಬಾರದು ಎನ್ನುವ ಕಾರಣಕ್ಕೆ ಚೈನೀಸ್ ಕಲಿಸುತ್ತಿದ್ದೇನೆ ಎನ್ನುತ್ತಾರೆ. ಅದರೊಂದಿಗೆ ಮಗನಿಗೆ ಆರ್ಗನ್ ನುಡಿಸುವುದನ್ನೂ ಹೇಳಿಕೊಡುತ್ತಿದ್ದಾರೆ. ಒಟ್ಟಾರೆ ಈ ಇಳಿ ವಯಸ್ಸಲ್ಲೂ ಜೀವನ ಸುಂದರವಾಗಿಸಿಕೊಂಡಿರುವ ಇವರ ಬದುಕೇ ಸಾರ್ಥಕ.