ಉಳ್ಳಾಲ : ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು, ಕೋಮಾ ಸ್ಥಿತಿಯಲ್ಲಿದ್ದ ಯುವತಿ ಇಂದು ಸಾವು !!!

ಉಳ್ಳಾಲ: ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ಯುವತಿಯೋರ್ವಳು ಏಳು ತಿಂಗಳುಗಳ ನಿರಂತರ ಚಿಕಿತ್ಸೆಯ ಬಳಿಕ, ಚಿಕಿತ್ಸೆ ಫಲಕಾರಿಯಾಗದೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಬೈಕ್ ಸವಾರ ಅಂದು ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಪಲ್ಲವಿ (25) ಮೃತ ಯುವತಿ.

ಘಟನೆ ವಿವರ: ಈ ಅಪಘಾತ ನಡೆದಿದ್ದು, 2021ರ ಡಿ.2 ರಂದು. ಮಂಗಳೂರಿನಿಂದ ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದ ಪಲ್ಲವಿ ಕೊಲ್ಯ ಸಮೀಪ ರಾ.ಹೆ.66 ನ್ನು ದಾಟುವ ಸಂದರ್ಭ ಮೊಬೈಲ್ ಕೈಯಿಂದ ಕೆಳಗೆ ಬಿತ್ತೆಂದು ಹೆಕ್ಕಲು ಮುಂದಾದಾಗ ಅದೇ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ಸವಾರ ಡಿಕ್ಕಿ ಹೊಡೆದಿದೆ. ಆದರೆ ಅಪಘಾತದ ತೀವ್ರತೆಗೆ ಬೈಕ್ ಸವಾರ ಕುಂಪಲ ಆಶ್ರಯಕಾಲನಿ ನಿವಾಸಿ ವಿಜೇಶ್ (31) ಸ್ಥಳದಲ್ಲೇ ಅಂದು ಸಾವನ್ನಪ್ಪಿದ್ದರು.

ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಪಲ್ಲವಿ ಅವರನ್ನು ದೇರಳಕಟ್ಟೆ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆರು ತಿಂಗಳು ಕಳೆದರೂ ಆರೋಗ್ಯ ಸ್ಥಿತಿ ಸುಧಾರಿಸದೆ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಮಂಗಳೂರು ನಾಗುರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಪಲ್ಲವಿ ತಂದೆ, ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

Leave A Reply