ಮಂಗಳೂರು: ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ರೋಹಿತ್ ಚಕ್ರತೀರ್ಥ ಸನ್ಮಾನ ಕಾರ್ಯಕ್ರಮ ಮುಂದೂಡಿಕೆ !!

ಮಂಗಳೂರಿನಲ್ಲಿ ಇಂದು ಆಯೋಜಿಸಲಾಗಿದ್ದ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ಸನ್ಮಾನ ಕಾರ್ಯಕ್ರಮವನ್ನು ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಇಂದು ಶಾಸಕ ವೇದವ್ಯಾಸ ಕಾಮತ್ ಅವರ ಸೇವಾಂಜಲಿ ಟ್ರಸ್ಟ್ ನ ಸಹಯೋಗದಲ್ಲಿ ಚಿಂತನ ಗಂಗಾ ಮಂಗಳೂರಿನ ಕೆನರಾ ಶಾಲೆ ಆವರಣದಲ್ಲಿ ನಾಗರಿಕ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕೆಲವು ಸಂಘಟನೆಗಳು ಸ್ಥಳದಲ್ಲಿ ಘೇರಾವ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಈ ಕಾರ್ಯಕ್ರಮಕ್ಕೆ ಮಂಗಳೂರು ವಿವಿ ಉಪಕುಲಪತಿಗಳಾದ ಪ್ರೊ.ಪಿ.ಎಸ್‌. ಯಡಪಡಿತ್ತಾಯ ಅವರನ್ನು ಅತಿಥಿಗಳನ್ನಾಗಿ ಆಹ್ವಾನಿಸಲಾಗಿತ್ತು.

ಕಾಂಗ್ರೆಸ್, ಡಿವೈಎಫ್ಐ, ಜೆಡಿಎಸ್, ಸಿಪಿಐಎಂ ಸೇರಿದಂತೆ ಇತರ ಸಂಘಟನೆಗಳನ್ನೊಳಗೊಂಡ ದೇಶಪ್ರೇಮಿ ಸಂಘಟನೆಗಳ ಒಕ್ಕೂಟ ಸನ್ಮಾನ ಕಾರ್ಯಕ್ರಮವನ್ನು ವಿರೋಧಿಸಿ ನಗರದಲ್ಲಿ ಮೆರವಣಿಗೆ ನಡೆಸಲು ನಿರ್ಧರಿಸಿದ್ದವು. ಅಷ್ಟೇ ಅಲ್ಲದೇ ನಾರಾಯಣಗುರು, ಕುವೆಂಪು, ಅಂಬೇಡ್ಕರ್ ಅವರಿಗೆ ಅಗೌರವ ತೋರಿದ್ದ ರೋಹಿತ್ ಚಕ್ರತೀರ್ಥ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಎಂಯು ವಿಸಿ ಗೆ ಒತ್ತಾಯಿಸಿದ್ದರು. ಹಾಗಾಗಿ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

Leave A Reply

Your email address will not be published.